ಬೆಂಗಳೂರು: ದ್ವೀತಿಯ ಪಿಯುಸಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬಂದ ಕೂಡಲೇ ಮೌಲ್ಯಮಾಪನ ಬಹಿಷ್ಕಾರ ಎನ್ನುವ ಪದ ಕೇಳ್ತಾನೆ ಇರುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಮೌಲ್ಯಮಾಪನ ಬಹಿಷ್ಕಾರ ಮಾಡಲು ಪಿಯುಸಿ ಉಪನ್ಯಾಸಕರು ನಿರ್ಧಾರ ಮಾಡಿದ್ದಾರೆ. ಆದರೆ ಎಸ್‍ಎಸ್‍ಎಲ್‍ಸಿ ಶಿಕ್ಷಕರು ಮಾತ್ರ ನಾವು ಮೌಲ್ಯಮಾಪನ, ಪರೀಕ್ಷಾ ಕೆಲಸ ಬಹಿಷ್ಕಾರ ಮಾಡದೇ ಇರಲು ನಿರ್ಧಾರ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪನ್ಯಾಸಕ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಬೇಡಿಕೆ ಈಡೇರದೇ ಇದ್ದರೆ ಮೌಲ್ಯಮಾಪನ ಬಹಿಷ್ಕಾರ ಗ್ಯಾರಂಟಿ ಅಂತಿದ್ದಾರೆ. ವೇತನ ತಾರತಮ್ಯ ಸೇರಿದಂತೆ 20 ಬೇಡಿಕೆಗಳನ್ನು ಅನೇಕ ವರ್ಷಗಳಿಂದ ಸರ್ಕಾರದ ಮುಂದೆ ಇಟ್ಟುಕೊಂಡು ಬರುತ್ತಿದ್ದೇವೆ. ಆದರೆ ಸರ್ಕಾರ ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದೆ. ಹೀಗಾಗಿ ಈ ಬಾರಿ ಹೋರಾಟ ಶತಸಿದ್ಧ ಅಂತ ಎಚ್ಚರಿಕೆ ನೀಡಿದ್ದಾರೆ. ಜನವರಿ 30ರಂದು ಎರಡನೇ ಹಂತದ ಹೋರಾಟ ಫ್ರೀಡಂ ಪಾರ್ಕ್ ನಲ್ಲಿ ಮಾಡುತ್ತಿದ್ದೇವೆ. ಸರ್ಕಾರ ಅಷ್ಟರಲ್ಲಿ ಬೇಡಿಕೆ ಈಡೇರಿಸದೇ ಇದ್ದರೆ ಮೌಲ್ಯಮಾಪನ ಬಹಿಷ್ಕಾರ ಗ್ಯಾರಂಟಿ ಅಂತ ಎಚ್ಚರಿಕೆ ನೀಡಿದ್ದಾರೆ.
Advertisement
Advertisement
ಉಪನ್ಯಾಸಕರ ಬೇಡಿಕೆಗಳು ಏನು?
1. ವೇತನ ತಾರತಮ್ಯ ಸರಿಪಡಿಸಬೇಕು. ಕುಮಾರ್ ನಾಯಕ್ ವರದಿ ಜಾರಿ ಮಾಡಬೇಕು.
2. ಉಪನ್ಯಾಸಕರ ಕಾರ್ಯಭಾರ ಕುರಿತು ನಿರ್ಧಾರಕ್ಕೆ ಉನ್ನತ ಮಟ್ಟದ ಪರಿಷತ್ ಸಮಿತಿ ರಚಿಸಬೇಕು. ಉಪನ್ಯಾಸಕರಿಗೆ 16 ಗಂಟೆ ಬೋಧನಾ ಅವಧಿ ಮುಂದುವರಿಸಬೇಕು.
3. ಪ್ರೌಢಶಾಲೆಯಿಂದ ಪದೋನ್ನತಿ ಹೊಂದಿದ ಪಿಯುಸಿ ಉಪನ್ಯಾಸಕರಿಗೆ 10, 15, 20, 25 ವರ್ಷಗಳ ಕಾಲಮಿತಿ ಬಡ್ತಿ ಕೂಡಲೇ ನೀಡಬೇಕು.
4. ಪಿಯುಸಿ ಉಪನ್ಯಾಸಕರಿಗೆ ಪದವಿ ಕಾಲೇಜಿಗೆ ಬಡ್ತಿ ನೀಡಬೇಕು. ಕರ್ನಾಟಕ ಪಬ್ಲಿಕ್ ಶಾಲೆಯಿಂದ ಆಗಿರುವ ಸಮಸ್ಯೆ ಪರಿಹಾರ ಮಾಡಬೇಕು.
5. ಅನುದಾನಿತ ಪದವಿ ಪೂರ್ವ ಕಾಲೇಜುಗಳ ಕಾಲ್ಪನಿಕ ವೇತನ ಸಮಸ್ಯೆ ಪರಿಹಾರ ಮಾಡಬೇಕು.
6. ಪಿಯು ಕಾಲೇಜಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆ ತುಂಬಬೇಕು.
Advertisement
Advertisement
ಬೆಂಬಲ ನೀಡಲ್ಲ: ಪಿಯುಸಿ ಉಪನ್ಯಾಸಕರ ಹೋರಾಟಕ್ಕೆ ಪ್ರೌಢಶಾಲಾ ಸಹ ಶಿಕ್ಷಕರು ಕೈ ಜೋಡಿಸದೇ ಇರಲು ನಿರ್ಧರಿಸಿದ್ದಾರೆ. ಮೌಲ್ಯಮಾಪನಕ್ಕೆ ಗೈರಾಗದೇ ಇರಲು ನಿರ್ಧಾರ ಮಾಡಿದ್ದು, ಪರೀಕ್ಷಾ ಕೆಲಸಕ್ಕೂ ಹಾಜರಾಗಲು ನಿರ್ಧಾರ ಮಾಡಿದ್ದೇವೆ. ಜೂನ್ ನಂತರ ನಮ್ಮ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.