ಬೆಂಗಳೂರು: ಕಳೆದ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಿಂದಾಗಿ ಭಾರೀ ಟೀಕೆಗೆ ಗುರಿಯಾಗಿದ್ದ ಪಿಯು ಬೋರ್ಡ್ ಈ ಬಾರಿಯ ಪರೀಕ್ಷೆಯಲ್ಲಿ ಪಾಸಾಗಿದೆ.
2016-17ನೇ ಸಾಲಿನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಸೋಮವಾರಕ್ಕೆ ಮುಕ್ತಾಯವಾಯಿತು. ಇಂದು ಇಂಗ್ಲಿಷ್ ವಿಷಯದ ಪರೀಕ್ಷೆ ನಡೆದಿದ್ದು ನಾಲ್ಕು ಜನ ಡಿಬಾರ್ ಆಗಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಶಿಖಾ ಮಾತನಾಡಿ, ಈ ಬಾರಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದೇ ಪಿಯು ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಮುಂದಿನ ಏಪ್ರಿಲ್ 5ರಿಂದ ಮೌಲ್ಯಮಾಪನ ಆರಂಭವಾಗಲಿದೆ. ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯನ್ನು 6.84 ಲಕ್ಷ ವಿದ್ಯಾರ್ಥಿಗಳು ಬರೆದಿದ್ದು, ಇಂದಿನದ್ದು ಸೇರಿ ಒಟ್ಟು 38 ಮಂದಿ ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ ಎಂದು ತಿಳಿಸಿದರು.
Advertisement
ಈ ಬಾರಿ ಏನೇನು ಸುಧಾರಣೆಯಾಗಿತ್ತು?
ಕಳೆದ ವರ್ಷ ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಎರಡು ಬಾರಿ ಸೋರಿಕೆಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿಡುವ ಖಜಾನೆ (ಸ್ಟ್ರಾಂಗ್ ರೂಂ) ಬಳಿ ಯಾರದ್ದೇ ಚಲನವಲನ ಕಂಡರೂ ತಕ್ಷಣ ಅದರ ವಿಡಿಯೋ ತುಣುಕು ಸಮೇತ `ಅಲರ್ಟ್’ ಮಾಡುವಂತಹ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯನ್ನು ಈ ಬಾರಿ ಅಳವಡಿಸಿತ್ತು.
Advertisement
ಖಜಾನೆಯ ಕಣ್ಗಾವಲು ಪ್ರದೇಶದ ವ್ಯಾಪ್ತಿಯೊಳಗೆ ಯಾರದ್ದೇ ಚಲನವಲನ ಕಂಡರೂ ಅದರ 15 ಸೆಕೆಂಡ್ ವಿಡಿಯೋ ತುಣುಕು ಸಮೇತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಖಜಾನೆ ಅಧಿಕಾರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಮತ್ತು ಜಿಲ್ಲಾ ಉಪನಿರ್ದೇಶಕರ ಮೊಬೈಲ್‍ಗಳಿಗೆ ಸಂದೇಶ ರವಾನೆ ಆಗುವಂತಹ ಈ ವ್ಯವಸ್ಥೆಯಿಂದಾಗಿ ಈ ಬಾರಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ.
Advertisement
ಅಷ್ಟೇ ಅಲ್ಲದೇ ಜಿಲ್ಲಾ ಕೇಂದ್ರಗಳಲ್ಲಿರುವ ಪ್ರಶ್ನೆಪತ್ರಿಕೆಗಳನ್ನು ದೂರದ ಪರೀಕ್ಷಾ ಕೇಂದ್ರಗಳಿಗೂ ತಲುಪಲು ಸಾಧ್ಯವಾಗುವಂತೆ ಪರೀಕ್ಷಾ ಸಮಯವನ್ನು ಈ ಬಾರಿ ಬದಲಾವಣೆ ಮಾಡಲಾಗಿತ್ತು. ಹಿಂದಿನ ವರ್ಷ ಪರೀಕ್ಷೆಗಳು ಬೆಳಿಗ್ಗೆ 9ರಿಂದ ಆರಂಭವಾಗುತ್ತಿದ್ದರೆ, ಈ ಬಾರಿ ಬೆಳಿಗ್ಗೆ 10.15ರಿಂದ ಆರಂಭಗೊಂಡು ಮಧ್ಯಾಹ್ನ 1.30ರವರೆಗೆ ನಡೆದಿತ್ತು.
ಕೇರಳದಲ್ಲಿ ಸೋರಿಕೆ: ಕೇರಳದಲ್ಲಿ ಮಾರ್ಚ್ 25ರಂದು ಎಸ್‍ಎಸ್‍ಎಲ್‍ಸಿಯ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಮಾರ್ಚ್ 31ರಂದು ಮತ್ತೊಮ್ಮೆ ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಪಿಯು ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದಕ್ಕೆ ಕಾಲೇಜಿನ ಮಾನ್ಯತೆ ರದ್ದು