ಬೆಂಗಳೂರು: ಜನ ಈಗ ಏನೇ ಬೇಕಾದರೂ ಆನ್‌ಲೈನ್‌ನಲ್ಲೇ ಆರ್ಡರ್ ಮಾಡ್ತಾರೆ. ಈ ಕಾಲಕ್ಕೆ ತಕ್ಕಂತೆ ರಾಜ್ಯ ಸರ್ಕಾರ, ತನ್ನ ವ್ಯಾಪ್ತಿಯಲ್ಲಿರೋ ಮುಜರಾಯಿ ದೇಗುಲಗಳಲ್ಲಿಯೂ (Temples) ಆನ್‌ಲೈನ್ ಸೇವೆ ನೀಡುತ್ತಿದೆ. ದೇವಾಲಯಗಳ ಈ ಆನ್‌ಲೈನ್ ಸೇವೆಗೆ ಅರ್ಚಕರಿಂದ ವಿರೋಧ ವ್ಯಕ್ತವಾಗುತ್ತಿದೆ.
ಆನ್‌ಲೈನ್‌ನಲ್ಲಿ ಕೆಲ ಭಕ್ತರು ಸಂಜೆ ಅಥವಾ ರಾತ್ರಿ ಅಭಿಷೇಕ, ಪ್ರಸಾದ ಇತ್ಯಾದಿ ಸೇವೆಗಳನ್ನು ಬುಕ್ ಮಾಡ್ತಾರೆ. ಮರುದಿನ ಬೆಳಗ್ಗೆಯೇ ಬುಕ್ ಮಾಡಿದ ಭಕ್ತಾದಿಗಳ ಸೇವೆ ಮಾಡಲು ಕಷ್ಟವಾಗುತ್ತದೆ. ದೇವಾಲಯಗಳಲ್ಲಿ ಪುರೋಹಿತರಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಇದರಿಂದ ಭಕ್ತಾದಿಗಳು ತಕ್ಷಣವೇ ಬುಕ್ಕಿಂಗ್ ಮಾಡಿದ ಮಾಹಿತಿ ದೊರಕುವುದಿಲ್ಲ. ಜೊತೆಗೆ ಪ್ರಸಾದ ಹೋಟೆಲ್ ರೀತಿ ತಕ್ಷಣವೇ ರೆಡಿ ಮಾಡಿಕೊಡಲು ಆಗುವುದಿಲ್ಲ ಎಂದು ಅರ್ಚಕರ ಒಕ್ಕೂಟ ( Priests Asssiation) ಧಾರ್ಮಿಕ ದತ್ತಿ ಆಯುಕ್ತರಿಗೆ (Department of Religious Endowments) ಪತ್ರ ಬರೆದಿದೆ.
ಬಿ ದರ್ಜೆಯ ಬಹುತೇಕ ದೇವಾಲಯಗಳಲ್ಲಿ ಅಡುಗೆಯವರು ಹಾಗೂ ಉಗ್ರಾಣದ ವ್ಯವಸ್ಥೆ ಇಲ್ಲ. ಜೊತೆಗೆ ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಪೂಜಾ ಸೇವೆಗೆ ನೀಡಿದ ಹಣ ಯಾವಾಗಲೋ ಅರ್ಚಕರ ಕೈ ಸೇರುತ್ತದೆ. ಪೂಜಾ ಹಾಗೂ ಪ್ರಸಾದ ಪದಾರ್ಥಗಳನ್ನು ತರಲು ತೊಂದರೆ ಆಗುತ್ತಿದೆ. ಹೀಗಾಗಿ ಈ ಆನ್‌ಲೈನ್ ಸೇವೆಯನ್ನು ಹಾಗೂ ಈ ಮೊಬೈಲ್ ಆ್ಯಪ್‌ನ್ನು ರದ್ದು ಮಾಡಬೇಕೆಂದು ಅರ್ಚಕರ ಒಕ್ಕೂಟ ಒತ್ತಾಯಿಸಿದೆ.
ಪೂಜಾ ಸೇವೆಗಳನ್ನು ಆನ್‌ಲೈನ್ ಮೂಲಕ ಬುಕ್ ಮಾಡಲು ಮೊದಲ ಹಂತವಾಗಿ ಬೆಂಗಳೂರಿನ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ಪೋರ್ಟಲ್ ಹಾಗೂ ಮೊಬೈಲ್ ಆ್ಯಪ್‌ನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಡುಗಡೆ ಮಾಡಿದ್ದರು. ರಾಜ್ಯದ ಮುಜರಾಯಿ ಇಲಾಖೆಯ ದೇಗುಲಗಳ ಸೇವೆಯನ್ನು ಹಂತ ಹಂತವಾಗಿ ಆನ್‌ಲೈನ್ ಮೂಲಕ ಕಾಯ್ದಿರಿಸೋದಕ್ಕೆ ಅವಕಾಶ ನೀಡಲಾಗುತ್ತಿದೆ.
ಮೊಬೈಲ್ ಆ್ಯಪ್ ಹಾಗೂ ಆನ್‌ಲೈನ್ ಸೇವೆಯನ್ನು ದೊಡ್ಡ ದೊಡ್ಡ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯ, ಚಾಮುಂಡಿಬೆಟ್ಟ, ನಂಜನಗೂಡು, ಮೇಲುಕೋಟೆ ಮೊದಲಾದ ಕಡೆ ಅಡುಗೆ ಕೆಲಸದವರು, ಸಿಬ್ಬಂದಿಗಳು ಹಾಗೂ ಉಗ್ರಾಣಗಳು ಇರುವ ಕಡೆ ನಡೆಸಲು ಯಾವುದೇ ತೊಂದರೆ ಇಲ್ಲ ಎಂದು ಅರ್ಚಕರ ಒಕ್ಕೂಟ ಹೇಳಿದೆ.