ಬೆಂಗಳೂರು: “ಪತ್ನಿಗೆ ಬಾಂಬೆ ಬ್ಲಡ್ ಗ್ರೂಪಿನ ರಕ್ತ ಬೇಕು ಎಂದು ಕೇಳಿದಾಗ ನನಗೆ ಏನು ಮಾಡಬೇಕು ಎನ್ನುವುದು ತಿಳಿಯಲಿಲ್ಲ. ಎಷ್ಟು ಹುಡುಕಿದರೂ ರಕ್ತ ಸಿಗದೇ ಇದ್ದಾಗ ಚಿಂತೆಯಾಗಿತ್ತು. ಆದರೆ ಕೊನೆಗೆ ಎಲ್ಲರ ಸಹಕಾರದಿಂದಾಗಿ ರಕ್ತ ಸಿಕ್ಕಿತು” ಇದು ವಿನುತಾ ಗೌಡ ಅವರ ಪತಿ ದಯಾನಂದ ಗೌಡ ಅವರ ಸಂತೋಷದ ಮಾತುಗಳು.
Advertisement
ಮೂಲತಃ ಉಡುಪಿ ಮೂಲದ ಗರ್ಭಿಣಿ ವಿನುತಾ ಕುವೈತ್‍ನ ಅದಾನ್ ಆಸ್ಪತ್ರೆ ದಾಖಲಾಗಿದ್ದರು. ಬಾಂಬೆ ಗ್ರೂಪ್ ರಕ್ತ ಹೊಂದಿದ್ದ ಅವರಿಗೆ ಸಿಸೇರಿಯನ್ ಆಪರೇಷನ್ ಮಾಡಬೇಕಾಗಿತ್ತು. ಭಾರತದಲ್ಲಿ 7,600 ಜನರಲ್ಲಿ ಒಬ್ಬರಲ್ಲಿ ಮಾತ್ರ ಈ ರಕ್ತ ಇರುವ ಕಾರಣ ಬಾಂಬೆ ಗ್ರೂಪ್ ರಕ್ತಕ್ಕೆ ಹುಡುಕಾಟ ಆರಂಭವಾಯಿತು. ಆಸ್ಪತ್ರೆಗೆ ದಾಖಲಾಗಿ ದಿನ ಕಳೆದರೂ ರಕ್ತ ದಾನಿಗಳು ಸಿಗಲೇ ಇಲ್ಲ. ಕೊನೆಗೆ ಕತಾರ್‍ನಲ್ಲಿ ಒಂದು ಹೈಪರ್ ಮಾರ್ಕೆಟ್‍ನಲ್ಲಿ ಕೆಲಸ ಮಾಡುತ್ತಿದ್ದ ನಿಧೀಶ್ ರಘುನಾಥ್ ಕುವೈತ್‍ಗೆ ಆಗಮಿಸಿ ರಕ್ತ ನೀಡಿ ಸಮಸ್ಯೆಯನ್ನು ನಿವಾರಿಸಿದರು.
Advertisement
ಪತ್ನಿಯ ರಕ್ತಕ್ಕಾಗಿ ಏನೆಲ್ಲ ಕಷ್ಟ ಆಗಿತ್ತು? ಬಳಿಕ ಸಿಕ್ಕಿದ್ದು ಹೇಗೆ ಎನ್ನುವುದನ್ನು ದಯಾನಂದ ಗೌಡ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
Advertisement
Advertisement
ಪತಿ ವಿವರಿಸಿದ್ದು ಹೀಗೆ:
ನವೆಂಬರ್ 25 ರಂದು ಪತ್ನಿ ಕುವೈತ್ ಆಸ್ಪತ್ರೆಗೆ ದಾಖಲಾಗಿದ್ದಳು. ಮೆಡಿಕಲ್ ಚೆಕಪ್ ವೇಳೆ ನಾರ್ಮಲ್ ಡೆಲಿವರಿ ಕಷ್ಟ ಸಿಸೇರಿಯನ್ ಮಾಡಬೇಕು ಎಂದು ವೈದ್ಯರು ತಿಳಿಸಿದರು. ಈ ವೇಳೆ ಬಾಂಬೆ ಬ್ಲಡ್ ಬೇಕು ಎಂದು ಹೇಳಿದರು. ರಕ್ತದ ಗುಂಪುಗಳ ಬಗ್ಗೆ ತಿಳಿದಿದ್ದರೂ ಈ ರಕ್ತದ ಗುಂಪು ನನಗೆ ಗೊತ್ತಿರಲಿಲ್ಲ. ಬ್ಲಡ್ ಬ್ಯಾಂಕ್ ಗೆ ತೆರಳಿ ವಿಚಾರಿಸಿದಾಗ ಅಲ್ಲೂ ಸಿಗಲಿಲ್ಲ. ಪರಿಚಯಸ್ಥರಿಗೆ ತಿಳಿಸಿ, ಫೇಸ್‍ಬುಕ್, ವಾಟ್ಸಪ್ ನಲ್ಲಿ ಈ ವಿಚಾರವನ್ನು ಶೇರ್ ಮಾಡಲಾಯಿತು. ಆದರೂ ಈ ರಕ್ತ ಇರುವ ವ್ಯಕ್ತಿಗಳು ಸಿಗಲೇ ಇಲ್ಲ.
ನಾವು ಬಹಳ ಬೇಸರದಲ್ಲಿದ್ದಾಗ ಪಾಸ್ಟರ್ ಒಬ್ಬರಿಗೆ ವಿಚಾರ ತಿಳಿದು ನಾನು ರಕ್ತದಾನಿಗಳನ್ನು ಸಂಪರ್ಕಿಸುತ್ತೇನೆ. ನೀವು ಚಿಂತೆ ಮಾಡಬೇಡಿ ಎಂದು ಹೇಳಿದರು. ಬಳಿಕ ಈ ವಿಚಾರವನ್ನು ‘ಬ್ಲಡ್ ಡೋನರ್ಸ್ ಫೋರಮ್, ಕೇರಳ-ಕುವೈತ್ ಚಾಪ್ಟರ್’ ಆನ್‍ಲೈನ್ ಗ್ರೂಪಿಗೆ ತಿಳಿಸಿದರು. ಈ ಗ್ರೂಪಿನಲ್ಲಿ ಮೆಸೇಜ್ ಶೇರ್ ಆಗಿ ನಿಧೀಶ್ ಅವರಿಗೆ ಗುರುವಾರ ಈ ವಿಚಾರ ತಿಳಿಯಿತು. ಕೂಡಲೇ ನಿಧೀಶ್ ಕತಾರ್‍ನಿಂದ ಬರುವುದಾಗಿ ತಿಳಿಸಿದರು. ಈ ವೇಳೆ ಅಲ್ಲೇ ಒಂದು ವೈದ್ಯಕೀಯ ರಕ್ತ ಪರೀಕ್ಷೆ ನಡೆಯಿತು. ಈ ವೇಳೆ ಮೆಡಿಕಲ್ ಅಗತ್ಯಕ್ಕಾಗಿ ತುರ್ತು ವೀಸಾ ಬೇಕೆಂದು ಮನವಿ ಮಾಡಲಾಯಿತು. ಮರುದಿನ ಅಂದರೆ ಶುಕ್ರವಾರ ಕಚೇರಿಗೆ ರಜೆ ಪಡೆದು ತುರ್ತು ವಿಮಾನದ ಮೂಲಕ ನಿಧೀಶ್ ಕುವೈತ್‍ಗೆ ಆಗಮಿಸಿದರು.
ನಿಧೀಶ್ ಬಂದವರೇ ಜಾಬಿರಿಯಾ ಬ್ಲಡ್ ಬ್ಯಾಂಕಿನಲ್ಲಿ ಪರೀಕ್ಷೆ ಮಾಡಿ ಬಳಿಕ ರಕ್ತದಾನ ಮಾಡಿದರು. ಇಲ್ಲಿ ಎಲ್ಲ ವೈದ್ಯಕೀಯ ಪರೀಕ್ಷೆಗಳನ್ನು ಮುಗಿಸಿ ಒಂದು ದಿನ ಬಳಿಕ ವೈದ್ಯರು ಸಿಸೇರಿಯನ್ ಮಾಡಿ ಡೆಲಿವರಿ ಮಾಡಿದರು. ಗಂಡು ಮಗುವಿಗೆ ಜನ್ಮ ನೀಡಿದ್ದು, ಪತ್ನಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ.
ನಿಧೀಶ್ ಅವರು ವಿನುತಾಗೆ ರಕ್ತ ಕೊಟ್ಟ ಬಳಿಕ ನನ್ನ ಕಣ್ಣಲ್ಲಿ ನೀರು ಬಂತು. ಕಷ್ಟ ಕಾಲದಲ್ಲಿ ಸುಮಾರು ಒಂದೂವರೆ ಗಂಟೆ ವಿಮಾನದಲ್ಲಿ ಪ್ರಯಾಣಿಸಿ ಅಲ್ಲಿಂದ ಇಲ್ಲಿಗೆ ಬಂದು ರಕ್ತ ಕೊಟ್ಟದ್ದಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ತಿಳಿಸಿದರು.
ಅಮ್ಮ ಮತ್ತು ಮಗುವಿನ ಪ್ರಾಣ ರಕ್ಷಿಸಿದ ಕೇರಳದ ಕಣ್ಣೂರಿನ ಇರಿಟ್ಟಿ ಮೂಲದ ನಿಧೀಶ್‍ಗೆ ಕುವೈತ್‍ನಲ್ಲಿರುವ ಅನಿವಾಸಿ ಭಾರತೀಯರು ಧನ್ಯವಾದ ಹೇಳಿದ್ದಾರೆ. ಅಷ್ಟೇ ಅಲ್ಲದೇ ಕುವೈತ್‍ನ ಆರೋಗ್ಯ ವಿಭಾಗವೂ ಅವರನ್ನು ಸನ್ಮಾನಿಸಿದೆ. ಕೇರಳ ಕುವೈತ್ ನಲ್ಲಿರುವ ರಕ್ತದಾನಿಗಳ ಸಂಘ ಸಹ ನಿಧೀಶ್ ಅವರನ್ನು ಸನ್ಮಾನಿಸಿದೆ.
ಮಂಗಳೂರು ದೇರಳಕಟ್ಟೆ ದಯಾನಂದ ಗೌಡ ಅವರು ಕಳೆದ 10 ವರ್ಷಗಳಿಂದ ಕುವೈತ್ ನಲ್ಲಿ ಉದ್ಯೋಗದಲ್ಲಿದ್ದಾರೆ.
ರಸ್ತೆ ಅಪಘಾತವಾದಾಗ ಗಾಯಾಳುಗಳು ರಕ್ಷಿಸಿ ಎಂದು ಕಣ್ಣೀರಿಟ್ಟರೂ ಜನ ನರಳುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಅಲ್ಲಿಂದ ತೆರಳುವುದನ್ನು ನಾವು ನೋಡಿದ್ದೇನೆ. ಈ ಪ್ರಕರಣಗಳು ನಮ್ಮ ಕಣ್ಣಿನ ಮುಂದೆ ಇರುವಾರಗ ಆಸ್ಪತ್ರೆಗೆ ದಾಖಲಾಗಿದ್ದ ವಿನುತಾ ಅವರಿಗೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತುರ್ತಾಗಿ ವಿಮಾನದಲ್ಲಿ ಆಗಮಿಸಿ ರಕ್ತ ನೀಡುವ ಮೂಲಕ ವಿನೀಶ್ ಈಗ ಭಾರತೀಯರ ಮನಗೆದ್ದಿದ್ದಾರೆ.
ಏನಿದು ‘ಬಾಂಬೆ ಗ್ರೂಪ್’ ರಕ್ತ?
ರಕ್ತದ ಕಣಗಳ ಆಧಾರದ ಮೇಲೆ ರಕ್ತದ ಗುಂಪನ್ನು ಗುರುತಿಸಲಾಗುತ್ತದೆ. ಎ ಗುಂಪಿನಲ್ಲಿ ಎ-ಆ್ಯಂಟಿಜನ್, ಬಿ ಗುಂಪಿನಲ್ಲಿ ಬಿ-ಆ್ಯಂಟಿಜನ್, ಎಬಿಯಲ್ಲಿ ಎಬಿ-ಆ್ಯಂಟಿಜನ್ ಮತ್ತು ಒ ಗುಂಪಿನಲ್ಲಿ ಎಚ್ ಆ್ಯಂಟಿಜನ್ ಇರುತ್ತದೆ. ಯಾವ ವ್ಯಕ್ತಿ ಒ ಗುಂಪಿನವರಾಗಿದ್ದು, ಅವರಲ್ಲಿ ಎಚ್-ಆ್ಯಂಟಿಜನ್ ಅಂಶ ಇರುವುದಿಲ್ಲವೋ ಅಂತಹವರನ್ನು ಬಾಂಬೆ ಗುಂಪಿನ ರಕ್ತದವರು ಎಂದು ಗುರುತಿಸಲಾಗುತ್ತದೆ.
ಈ ರಕ್ತದ ಮಾದರಿ ಮೊದಲು ಮುಂಬೈನಲ್ಲಿ ಪತ್ತೆಯಾಗಿತ್ತು. ಹಾಗಾಗಿ ಮುಂಬಯಿನ ಹಳೆಯ ಹೆಸರಾದ ಬಾಂಬೆ ಹೆಸರಿನೊಂದಿಗೆ ‘ಬಾಂಬೆ ಬ್ಲಡ್’ ಎಂದು ಕರೆಯಲಾಗುತ್ತದೆ.