ರಾಮನಗರ: ರಾಜ್ಯದಲ್ಲಿ ನಡೆಯುತ್ತಿರುವ ಕುರ್ಚಿ ಕಿತ್ತಾಟಕ್ಕೆ (Karnataka Power Tussle) ಟ್ವಿಸ್ಟ್ ಸಿಕ್ಕಿದೆ. ಜನವರಿ 6ಕ್ಕೆ ಡಿಕೆ ಶಿವಕುಮಾರ್ ಅವರಿಗೆ ಪಟ್ಟಾಭಿಷೇಕವಾಗಲಿದೆ ಎಂದು ಡಿಸಿಎಂ ಆಪ್ತ ಇಕ್ಬಾಲ್ ಹುಸೇನ್(Iqbal Hussain) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ (DK Shivakumar) ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು, ಅವರಿಗೆ ಅವಕಾಶ ಸಿಗಬೇಕು.ಇದಕ್ಕೆ ಹೈಕಮಾಂಡ್ ಸ್ಪಂದಿಸುತ್ತಿದೆ. ಬಹುಶ: ಜ.6ರಂದು ಸ್ಥಾನ ಸಿಗುವ ಸ್ಥಾನ ಸಿಗುವ ಸಾಧ್ಯತೆಯಿದ್ದು ನನಗೆ ಶೇ.99ರಷ್ಟು ವಿಶ್ವಾಸ ಇದೆ ಎಂದು ಹೇಳಿದರು.
ಡಿಕೆ ಶಿವಕುಮಾರ್ ಅವರಿಗೆ ಜ.6 ಮತ್ತು ಜ. 9 ಅದೃಷ್ಟ ಸಂಖ್ಯೆ. ನಮ್ಮಲ್ಲಿ ಯಾವುದೇ ಬಣ ಇಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರೂ ರಾಜ್ಯದ ಆಸ್ತಿ. ಡಿಕೆಶಿ ಅವರ ಹೋರಾಟಕ್ಕೆ, ಶ್ರಮಕ್ಕೆ ಪ್ರತಿಫಲ ಸಿಗಬೇಕು ಎನ್ನುವುದು ನಮ್ಮ ಬೇಡಿಕೆ ಎಂದರು.
ನಾಳೆ ನಾನು ಡಿಕೆಶಿವಕುಮಾರ್ ನೇತೃತ್ವದಲ್ಲಿ ದೆಹಲಿಗೆ ಹೋಗಿ ವೋಟ್ ಚೋರಿ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇನೆ. ದೆಹಲಿ ಭೇಟಿ ಸಮಯದಲ್ಲಿ ನಾವು ಯಾವುದೇ ವರಿಷ್ಠರನ್ನ ಭೇಟಿ ಮಾಡುವುದಿಲ್ಲ. ಈಗಾಗಲೇ ನಮ್ಮ ಮನವಿಯನ್ನ ವರಿಷ್ಠರಿಗೆ ತಿಳಿಸಿದ್ದು ಸ್ಪಂದನೆ ಸಿಗುವ ವಿಶ್ವಾಸವಿದೆ. ಶೀಘ್ರವಾಗಿ ತೀರ್ಮಾನ ತೆಗದುಕೊಳ್ಳುತ್ತಾರೆ ಎಂದು ಹೇಳಿದರು.
ಯತೀಂದ್ರ ಸಿದ್ದರಾಮಯ್ಯ (Siddaramaiah) ನಾಯಕತ್ವ ಬದಲಾವಣೆ ಇಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರು ಏನೇ ಹೇಳಿಕೊಳ್ಳಲಿ. ರಾಜ್ಯದ ಜನ ಹಾಗೂ ಈ ಭಾಗದ ಶಾಸಕರು ಡಿಕೆಶಿಗೆ ಅವಕಾಶ ಕೊಡಿ ಎಂದು ಕೇಳಿದ್ದೇವೆ. ಡಿಕೆ ಶಿವಕುಮಾರ್ ಸಿಎಂ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮಲ್ಲಿ 140 ಜನ ಶಾಸಕರಿದ್ದು ಸಂಖ್ಯಾಬಲದ ವಿಚಾರ ಬರುವುದಿಲ್ಲ. ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷವಾಗಿದ್ದು ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿದ್ದೇವೆ ಎಂದರು.

