ನವದೆಹಲಿ: ಸುಪ್ರೀಂಕೋರ್ಟಿನಲ್ಲಿಂದು ದೋಸ್ತಿ ಸರ್ಕಾರದ ಭವಿಷ್ಯ ನಿರ್ಧಾರವಾಗುವ ಸಾಧ್ಯತೆಯಿದೆ. ವಿಪ್ ಗೊಂದಲ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಲ್ಲಿಸಿರುವ ಅರ್ಜಿ, ವಿಶ್ವಾಸಮತಯಾಚನೆಯಲ್ಲಿ ರಾಜ್ಯಪಾಲರ ಮಧ್ಯಪ್ರವೇಶ ಪ್ರಶ್ನಿಸಿ ಜೆಡಿಎಸ್ ಸಲ್ಲಿಸಿರುವ ಅರ್ಜಿಗಳು ವಿಚಾರಣೆಗೆ ಬರಲಿವೆ.
ಈ ಮಧ್ಯೆ ಇವತ್ತು ಪಕ್ಷೇತರರಾದ ಆರ್ ಶಂಕರ್ ಮತ್ತು ನಾಗೇಶ್ ಮತ್ತು ರಾಜೀನಾಮೆ ನೀಡಿರುವ ಅತೃಪ್ತರ ಶಾಸಕರು ಅರ್ಜಿ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಿದ ಶಾಸಕರ ಮೇಲೆ ಒತ್ತಡ ಹೇರಲಾಗುತ್ತಿದೆ. ಹೊಸದಾಗಿ ಕ್ರಮಬದ್ಧವಾಗಿ ರಾಜೀನಾಮೆ ಸ್ವೀಕರಿಸಿದರೂ ಸ್ಪೀಕರ್ ಅಂಗೀಕರಿಸಿಲ್ಲ. ಇದರ ಹಿಂದೆ ಶಾಸಕರನ್ನು ಅನರ್ಹಗೊಳಿಸುವ ಪ್ಲಾನ್ ಇದೆ. ಹೀಗಾಗಿ ಇಂದು ಸಂಜೆಯೊಳಗೆ ವಿಶ್ವಾಸಮತ ಸಾಬೀತಿಗೆ ಸೂಚಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
Advertisement
Advertisement
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಅರ್ಜಿಗಳ ವಿಚಾರಣೆ ನಡೆಯಲಿದೆ. ಕೋರ್ಟ್ ಕಲಾಪ ಆರಂಭವಾಗುತ್ತಲೇ ವಕೀಲರು ಈ ವಿಷಯ ಪ್ರಸ್ತಾಪಿಸಲಿದ್ದು, ತ್ರಿಸದಸ್ಯ ಪೀಠ ತುರ್ತು ವಿಚಾರಣೆಗೆ ಒಪ್ಪಿದಲ್ಲಿ ದೋಸ್ತಿ ಸರ್ಕಾರದ ಭವಿಷ್ಯ ಇಂದೇ ನಿರ್ಧಾರವಾಗಲಿದೆ.
Advertisement
ಕಾಂಗ್ರೆಸ್ ಅರ್ಜಿಯಲ್ಲಿ ಏನಿದೆ?
ಜುಲೈ 17ರಂದು ಅತೃಪ್ತರ ಬಗ್ಗೆ ನೀಡಿರುವ ಮಧ್ಯಂತರ ಆದೇಶದಿಂದ ಗೊಂದಲ ಸೃಷ್ಟಿಯಾಗಿದೆ. ಕಲಾಪಕ್ಕೆ ಹಾಜರಾಗಬೇಕೇ? ಬೇಡವೇ ಎನ್ನುವುದನ್ನು ಶಾಸಕರ ವಿವೇಚನೆಗೆ ಬಿಡಲಾಗಿದೆ. ಈ ಆದೇಶ ರಾಜಕೀಯ ಪಕ್ಷಗಳ ವಿಪ್ ಅಧಿಕಾರವನ್ನು ಕಿತ್ತುಕೊಳ್ಳಲಿದೆ. ಶೆಡ್ಯೂಲ್ 102(1)ಬಿ ಅನ್ವಯ ರಾಜಕೀಯ ಪಕ್ಷಗಳಿಗೆ ವಿಪ್ ಅಧಿಕಾರವಿದೆ. ವಿಶ್ವಾಸಮತ ಸಾಬೀತು ವೇಳೆ ಶಾಸಕರಿಗೆ ವಿಪ್ ನೀಡುವುದು ಅನಿವಾರ್ಯವಾಗಿದೆ. ನೀವು ನೀಡಿರುವ ಆದೇಶ ಈ ವ್ಯಾಪ್ತಿಗೆ ಬರುತ್ತದೋ ಇಲ್ಲವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು.
Advertisement
ಜೆಡಿಎಸ್ ವಾದ ಏನು?
ರಾಜ್ಯಪಾಲರು 2 ಬಾರಿ ಬಹುಮತ ಸಾಬೀತಿಗೆ ಡೆಡ್ ಲೈನ್ ನೀಡಿದ್ದಾರೆ. ಸಿಎಂ ಅವರೇ ವಿಶ್ವಾಸ ಮತಯಾಚನೆ ಕೇಳಿದ್ದು ಈ ಚರ್ಚೆ ನಡೆಯತ್ತಿರುವಾಗಲೇ ಈ ರೀತಿಯ ನಿರ್ದೇಶನ ನೀಡಬಾರದಿತ್ತು. ವಿಶ್ವಾಸಮತದ ಚರ್ಚೆ ಬಳಿಕ ಮತಕ್ಕೆ ಹಾಕುವುದಾಗಿ ಸ್ಪೀಕರ್ ಹೇಳಿದ್ದಾರೆ. ಚರ್ಚೆ ಮುಕ್ತಾಯವಾಗುವವರೆಗೂ ರಾಜ್ಯಪಾಲರು ಸಮಯ ನಿಗದಿಪಡಿಸದಂತೆ ಸೂಚಿಸಿ.