ಬೆಂಗಳೂರು: ಇಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ರಾಜ್ಯದ ಪ್ರವಾಹ ಪರಿಸ್ಥಿತಿಯ ಬಗ್ಗೆ ಯಾವುದೇ ಅಧಿಕೃತ ಚರ್ಚೆ ನಡೆಯದಿರುವುದು ಹಾಗೂ ತುರ್ತು ಕಾರ್ಯಕ್ಕಾಗಿ ಕೇಂದ್ರ ಸರ್ಕಾರ ಪರಿಹಾರ ಘೋಷನೆ ಮಾಡದಿರುವ ನಡೆಯ ಬಗ್ಗೆ ಕರ್ನಾಟಕ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸಚಿವರು ಕ್ಯಾಬಿನೇಟ್ ಸಭೆಯಲ್ಲಿ ಭಾಗವಹಿಸಿದ್ದರೂ ಕೂಡ ಕೇಂದ್ರ ಸರ್ಕಾರದ ಪ್ರವಾಹ ಪರಿಸ್ಥಿತಿಗೆ ಯಾವುದೇ ಪರಿಹಾರ ನೀಡಲು ತೀರ್ಮಾನವನ್ನು ಕೈಗೊಂಡಿರಲಿಲ್ಲ. ಆದರೆ ಪ್ರವಾಹ ಪರಿಸ್ಥಿತಿ ಎದುರಾಗಿರುವುದರಿಂದ ಕನಿಷ್ಠ 5 ಸಾವಿರ ಕೋಟಿ ರೂ.ಗಳನ್ನ ಪರಿಹಾರವಾಗಿ ನೀಡುವ ನಿರೀಕ್ಷೆಯನ್ನು ರಾಜ್ಯದ ಜನತೆ ಮಾಡಿದ್ದರು. ಆದರೆ ಈ ಬಗ್ಗೆ ಯಾವುದೇ ತೀರ್ಮಾನವನ್ನು ಸಂಪುಟ ಸಭೆಯಲ್ಲಿ ಕೈಗೊಂಡಿಲ್ಲ ಎಂಬ ಮಾಹಿತಿ ಲಭಿಸಿದೆ.
ಈ ಕುರಿತಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಸಾರ್ವಜನಿಕರು, ರಾಜ್ಯದಿಂದ 25 ಮಂದಿ ಸಂಸದರನ್ನು ಆಯ್ಕೆ ಮಾಡಿ ಕೇಂದ್ರಕ್ಕೆ ಕಳುಹಿಸಿದ್ದೇವೆ. ಆದರೆ ಪ್ರವಾಹದ ಸಂದರ್ಭದಲ್ಲಿ ರಾಜ್ಯ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರದ ನಾಯಕರಿಗೆ ಮನವರಿಕೆ ಮಾಡಿ ಪರಿಹಾರ ಪಡೆದುಕೊಳ್ಳುವಲ್ಲಿ ಸಂಸದರು ವಿಫಲರಾಗಿದ್ದಾರೆ. ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಅವರು ಒಬ್ಬರೇ ಆಡಳಿತ ಜವಾಬ್ದಾರಿ ವಹಿಸಿದ್ದರೂ ಸಹ ಈ ಕುರಿತು ಕನಿಷ್ಠ ಮಾಹಿತಿಯನ್ನು ಕೇಂದ್ರಕ್ಕೆ ನೀಡುವುದು ಜನಪ್ರತಿನಿಧಿಗಳ ಕಾರ್ಯವಾಗಿತ್ತು, ಆದರೆ ಈ ಇದು ನಡೆದಿಲ್ಲ ಕಿಡಿ ಕಾರಿದ್ದಾರೆ..
ಕಳೆದ 2 ವಾರಗಳಿಂದ ರಾಜ್ಯ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಕೇಂದ್ರದ ಹಣಕಾಸು ಸಚಿವರು, ಗೃಹ ಸಚಿವರು ರಾಜ್ಯಕ್ಕೆ ಭೇಟಿ ನೀಡಿದ್ದರೂ ಕೂಡ ಪರಿಹಾರ ಲಭ್ಯವಾಗಿಲ್ಲ. ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಸರ್ಕಾರ ಇದ್ದರು ಕೂಡ ಪರಿಹಾರ ನೀಡಲು ತಾರಾತಮ್ಯ ಮಾಡಲಾಗಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಗೋ. ಮದುಸೂದನ್ ಅವರು, ರಾಜ್ಯ ಸರ್ಕಾರದಿಂದ ಯಾವ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕಿತ್ತು. ಈ ಬಗ್ಗೆ ಸರ್ಕಾರ ಮಾಹಿತಿ ನೀಡಿದ್ದು, 2 ದಿನಗಳಲ್ಲಿ ಪರಿಹಾರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಕೇಂದ್ರವೂ ಬಗ್ಗೆ ಮಾಹಿತಿ ಪಡೆದಿದೆ ಎಂದರು. ಇತ್ತ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಪ್ರಧಾನಿಗಳಿಗೆ ಹಾಗೂ ಸಂಪುಟ ಸಭೆಯಲ್ಲಿ ರಾಜ್ಯ ಪ್ರವಾಹ ಬಗ್ಗೆ ಮಾಹಿತಿ ನೀಡಿದ್ದೇನೆ. ಸಭೆಯಲ್ಲೂ ಕೂಡ ಈ ಬಗ್ಗೆ ಪ್ರಸ್ತಾಪ ಮಾಡಿದೆ. ಕೇಂದ್ರ ಸರ್ಕಾರದಿಂದ ಸಿಗಬೇಕಾದ ಎಲ್ಲಾ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.