ನಾಡಿನ ಜನತೆ ಬಿಜೆಪಿ ವಿರುದ್ಧ ದಂಗೆ ಏಳಬೇಕು: ಸಿಎಂ ಎಚ್‍ಡಿಕೆ

Public TV
3 Min Read
HDK BJP 2

ಹಾಸನ: ಜನಪರ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿರುವ ಬಿಜೆಪಿ ವಿರುದ್ಧ ನಾಡಿನ ಜನತೆ ದಂಗೆ ಏಳಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.

ಚನ್ನರಾಯಪಟ್ಟಣ ತಾಲೂಕಿನ ತೋಟಿ ಗ್ರಾಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಜನಪರ ಸರ್ಕಾರವನ್ನು ಉರುಳಿಸಲು ಬಿಜೆಪಿಯವರು ಮುಂದಾಗಿದ್ದಾರೆ. ಇಂತವರ ವಿರುದ್ಧ ನಾಡಿನ ಜನ ದಂಗೆ ಏಳಬೇಕು. ಈ ನಾಡಿನ ಜನರಿಗೆ ಈ ಪುಣ್ಯ ಭೂಮಿಯಿಂದಲೇ ನಾನು ದಂಗೆಗೆ ಕರೆ ನೀಡುತ್ತೇನೆ. ಅಷ್ಟೇ ಅಲ್ಲದೇ ನನ್ನಿಂದಲೂ ಏನದರೂ ತಪ್ಪಾಗಿದ್ದರೆ ಅಥವಾ ನಾನೇದರೂ ನಿಮಗೆ ದ್ರೋಹವನ್ನು ಮಾಡಿದ್ದರೆ, ಈ ನಾಡಿನ ಜನತೆ ನನ್ನ ವಿರುದ್ಧವೂ ದಂಗೆ ಏಳಿ ಎಂದು ಹೇಳಿದ್ದಾರೆ.

42124743 1851539194894536 5306977434795507712 n

ನಾನು ಮಜಾ ಮಾಡಲು ಮುಖ್ಯಮಂತ್ರಿ ಆಗಿಲ್ಲ. ನಾಡಿನ ಯುವಕರು, ಮಹಿಳೆಯರು ಹಾಗೂ ಅಂಗವಿಕಲರು ಸ್ವಾವಲಂಬಿ ಜೀವನ ನಡೆಸಲು ಶಾಶ್ವತ ವ್ಯವಸ್ಥೆ ಮಾಡುವುದು ನನ್ನ ಕನಸಾಗಿದೆ. ಯಡಿಯೂರಪ್ಪ ಸರ್ಕಾರ ಟೇಕಾಫ್ ಆಗ್ತಿಲ್ಲ ಅಂತ ಹೇಳಿಕೆ ನೀಡುತ್ತಿದ್ದಾರೆ. ಅವರು ಸುಮ್ಮನೇ ಇದ್ದರೆ ಟೇಕಾಫ್ ಆಗುತ್ತೆ. ಈಗಾಗಲೇ ನಾವು ರೈತರ 45 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದೇವೆ. ಇನ್ನು ಸ್ವಲ್ಪ ದಿನಗಳಲ್ಲಿ ರಾಜ್ಯದ ಸಹಕಾರಿ ಬ್ಯಾಂಕುಗಳಲ್ಲಿರುವ ರೈತರ ಒಂದು ಲಕ್ಷದ ವರೆಗಿನ ಸುಮಾರು 9,450 ಕೋಟಿ ರೂಪಾಯಿ ಚಾಲ್ತಿ ಸಾಲಮನ್ನಾಗೆ ಆದೇಶ ಸಿದ್ದವಾಗಿದ್ದು, ಶೀಘ್ರದಲ್ಲಿಯೇ ಆದೇಶ ಹೊರಬೀಳಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಕರ್ತ ಮಿತ್ರರಿಗೆ ನನ್ನ ಮೇಲೆ ಪ್ರೀತಿ ಇದೆ. ಆದರೆ ಮಾಧ್ಯಮಗಳಲ್ಲಿ ಕೆಲವರ ಮೇಲೆ ಬೇರೆ ಬೇರೆ ರೀತಿಯ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಅವರು ಸದಾ ಸರ್ಕಾರ ಬೀಳುತ್ತದೆ ಎನ್ನುವ ಸುದ್ದಿ ಪ್ರಸಾರ ಮಾಡುತ್ತಿದ್ದಾರೆ. ಮಾಧ್ಯಮಗಳು ಮೊದಲು ನನ್ನ ಕಾರ್ಯಕ್ರಮವನ್ನು ಅರ್ಥ ಮಾಡಿಕೊಳ್ಳಬೇಕು. ನನ್ನ ಶಾಸಕರನ್ನು ಯಾರೂ ಸಹ ಹಣ ಕೊಟ್ಟು ಕೊಂಡುಕೊಂಡು ಸರ್ಕಾರ ಉರುಳಿಸಲು ಸಾಧ್ಯವಿಲ್ಲವೆಂದು ಹೇಳಿದರು.

42182165 1851539208227868 8249524907277287424 n

ಇದಾದ ಬಳಿಕ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪ್ರತಿನಿಧಿಸುವ ಚನ್ನರಾಯಪಟ್ಟಣದ ಉದಯಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಕುಟುಂಬದ ಮೇಲೆ ಜಿಲ್ಲೆಯ ಋಣಭಾರ ಬಹಳ ಇದೆ. ದೇವೇಗೌಡರು ತಮ್ಮ ಜೀವನದ ಬಹುಕಾಲವನ್ನು ವಿರೋಧ ಪಕ್ಷದಲ್ಲೇ ಕಳೆದಿದ್ದಾರೆ. ಅವರು ಕೇವಲ ನಾಲ್ಕುವರೆ ವರ್ಷ ಮಾತ್ರ ಅಧಿಕಾರದಲ್ಲಿದ್ದರು. ಅವರು ಹೆಚ್ಚು ಕಾಲ ವಿರೋಧ ಪಕ್ಷದಲ್ಲಿದ್ದರೂ ಸಹ ಜಿಲ್ಲೆಯ ಜನತೆ ಅವರೊಂದಿಗೆ ಇದ್ದಾರೆ ಎಂದು ಸಂತೋಷ ಹಂಚಿಕೊಂಡರು.

ನಮ್ಮ ರೇವಣ್ಣನವರಿಗೆ ಆತುರ ಜಾಸ್ತಿ. ಕಳೆದ ಹತ್ತು ವರ್ಷಗಳಲ್ಲಿ ಅವರ ಜಿಲ್ಲೆ ಹಿಂದುಳಿದಿದೆ ಎನ್ನುವ ಬೇಸರ ಅವರಲ್ಲಿದೆ. ಹೀಗಾಗಿ ಅವರು ಒಂದೇ ರಾತ್ರಿಯಲ್ಲಿ ಎಲ್ಲಾ ಕೆಲಸಗಳು ಆಗಬೇಕು ಎನ್ನುವ ಹುಚ್ಚು ಕಲ್ಪನೆಯಲ್ಲಿದ್ದಾರೆ. ಆದರೆ ಅವರೂ ಸಹ ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಜಿಲ್ಲೆಯ ಅಭಿವೃದ್ಧಿಗೆ ರೇವಣ್ಣನವರು ಅತಿಯಾದ ಉತ್ಸುಕತೆಯನ್ನು ಹೊಂದಿದ್ದಾರೆ ಎನ್ನುವ ಮೂಲಕ ಪ್ರಶಂಸೆ ತೋರಿಸಿದರು.

3333

ಈ ಹಿಂದೆ ಬಿಜೆಪಿ ಜೊತೆಯಲ್ಲಿ ಮೈತ್ರಿಯಲ್ಲಿದ್ದಾಗಲೂ ಒತ್ತಡ ಅನುಭವಿಸಿದ್ದೆ. ಈಗಲೂ ಸಹ ಒತ್ತಡದಿಂದಲೇ ಕಾರ್ಯನಿರ್ವಹಿಸುತ್ತಿದ್ದೇನೆ. ಆದರೆ ನನ್ನ ರಾಜಕೀಯ ಒತ್ತಡದ ಕಾರಣದಿಂದ ನನ್ನ ಜವಾಬ್ದಾರಿಯಿಂದ ನಾನು ಎಂದಿಗೂ ಹಿಂದೆ ಸರಿಯುವವನಲ್ಲ. ಬಿಜೆಪಿಯ ಮಹಾನ್ ನಾಯಕರು ಸರ್ಕಾರ ಟೇಕಾಫ್ ಆಗಿಲ್ಲ ಅಂತಾರೆ. ಅಲ್ಲದೇ ಈ ರಾಜ್ಯದ ಖಜಾನೆಯನ್ನು ಅಪ್ಪ-ಮಕ್ಕಳು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ. ನೀವೇ ಹೇಳಿ ಯಾರಾದರೂ ಸಭ್ಯಸ್ಥರು ಈ ಮಾತನ್ನು ಹೇಳಿದ್ದರೆ, ನಾವು ಕೂಡ ಯೋಚನೆ ಮಾಡಬಹುದಿತ್ತು. ಆದರೆ ಮಾಡಬಾರದ್ದನ್ನು ಮಾಡಿದವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಬಿಎಸ್‍ವೈ ವಿರುದ್ಧ ಕಿಡಿಕಾರಿದರು.

BSY 2

ತಪ್ಪು ಮಾಡಿದ್ದವರು ಯಾರೇ ಆಗಲಿ ಅದು ನಮ್ಮ ಕುಟುಂದವರೇ ಇರಲಿ, ಇಲ್ಲಾ ಸಹೋದರನೇ ಇರಲಿ, ನಾನು ಯಾರಿಗೂ ರಾಜಿಯಾಗುವವನಲ್ಲ. ಕಾಂಗ್ರೆಸ್ ಮಾಜಿ ಸಚಿವ ಎ.ಮಂಜುರವರು ರೇವಣ್ಣನವರ ವಿರುದ್ಧ ಭೂ-ಕಬಳಿಕೆ ಆರೋಪದ ಬಗ್ಗೆ ಈಗಾಗಲೇ ಮಾಹಿತಿ ಪಡೆದುಕೊಂಡಿದ್ದೇನೆ. ಶೀಘ್ರವೇ ಇದಕ್ಕೆ ಅಧಿಕಾರಿಗಳೇ ಉತ್ತರ ನೀಡುತ್ತಾರೆ. ರಾಜ್ಯದ ಖಜಾನೆಯನ್ನು ಸುಭದ್ರವಾಗಿಟ್ಟು ಆಡಳಿತ ನಡೆಸಲು ನಾನು ಮುಖ್ಯಮಂತ್ರಿಯಾಗಿರುವುದು ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=hoxHPHIYsCA

Share This Article
2 Comments

Leave a Reply

Your email address will not be published. Required fields are marked *