ಬೆಂಗಳೂರು: ಚಿಕನ್ ಪ್ರಿಯರಿಗೆ ಶಾಕ್ ನೀಡುವಂತಹ ಸುದ್ದಿಯೊಂದು ಹರಿದಾಡ್ತಿದೆ. ಈ ಬಗ್ಗೆ ಯಾವುದೇ ಅಧ್ಯಯನ ನಡೆದಿಲ್ಲ ಅಥವಾ ಪಶುಸಂಗೋಪನಾ ಇಲಾಖೆಗೆ ಇಂತಹ ಯಾವುದೇ ಪ್ರಕರಣ ಬಂದಿಲ್ಲ. ಆದ್ರೂ ಪೌಲ್ಟ್ರಿ ಫಾರ್ಮ್‍ಗಳಲ್ಲಿ ಕೋಳಿಗಳನ್ನ ದಪ್ಪ ಮಾಡೋಕೆ ಮದ್ಯಪಾನ ನೀಡ್ತಾರೆ ಅಂತ ಕುಣಿಗಲ್ ತಾಲೂಕಿನಲ್ಲಿ ಸುದ್ದಿ ಹರಿದಾಡ್ತಿದೆ.
ಮೂಲಗಳ ಮಾಹಿತಿಯ ಪ್ರಕಾರ ಕುಣಿಗಲ್‍ನಲ್ಲಿ ಸುಮಾರು 50 ರಿಂದ 60 ಕೋಳಿ ಫಾರ್ಮ್‍ಗಳಿದ್ದು, ಇವುಗಳಲ್ಲಿ ಕೆಲವು ಫಾರ್ಮ್‍ಗಳು ಕಡಿಮೆ ಬೆಲೆಯ ಮದ್ಯವನ್ನ ಕೋಳಿಗಳ ಮೇವಿನಲ್ಲಿ ಬೆರೆಸಿ ಕೊಡ್ತಿದ್ದಾರೆ ಎನ್ನಲಾಗಿದೆ. ಮದ್ಯದ ಅಮಲಿನಲ್ಲಿ ಕೋಳಿಗಳು ಹೆಚ್ಚಿನ ಮೇವು ಹಾಗೂ ನೀರು ಸೇವಿಸುತ್ತವೆ. ಹೀಗಾಗಿ ಅವುಗಳ ತೂಕ ಹೆಚ್ಚಾಗಿ ಮಾಲೀಕನಿಗೆ ಲಾಭ ಸಿಗುತ್ತದೆ ಎಂದು ಹೇಳಲಾಗಿದೆ.
ಆದ್ರೆ ಕುಣಿಗಲ್‍ನ ಪ್ರಭಾರಿ ಸಹಾಯಕ ನಿರ್ದೇಶಕರಾದ ಡಾ. ನವೀನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇಂತಹ ಯಾವುದೇ ದೂರುಗಳು ಬಂದಿಲ್ಲ. ಆದ್ರೆ ಕಡಿಮೆ ಬೆಲೆಯ ಮದ್ಯವನ್ನ ಪೌಲ್ಟ್ರಿಗಳಲ್ಲಿ ನೀಡಲಾಗ್ತಿದೆ ಅಂತ ಜನ ಹೇಳ್ತಿದ್ದಾರೆ. ಆದ್ರೆ ನಿರ್ದಿಷ್ಟವಾದ ಪ್ರಕರಣಗಳಿಲ್ಲ. ಅಲ್ಲದೆ ಮದ್ಯದ ಅಮಲಿನಲ್ಲಿ ಕೋಳಿಗಳು ಹೆಚ್ಚು ಮೇವು ಸೇವಿಸುತ್ತವೆ ಎಂಬ ಬಗ್ಗೆ ಯಾವುದೇ ಅಧ್ಯಯನ ನಡೆದಿಲ್ಲ ಎಂದಿದ್ದಾರೆ.
ದೇಹದೊಳಗೆ ಮದ್ಯ ಹೋದ ನಂತರ ನಿರ್ಜಲೀಕರಣವಾಗುತ್ತದೆ. ಇದರಿಂದ ಕೋಳಿ ಹೆಚ್ಚು ನೀರು ಕುಡಿಯಬಹುದು ಮತ್ತು ಆಹಾರ ಸೇವಿಸಬಹುದು ಎಂದು ಊಹಿಸಬಹುದು. ಆದ್ರೆ ಕೇವಲ ಊಹೆ ಮೇಲೆ ಕೋಳಿಗಳ ತೂಕ ಹೆಚ್ಚಾಗುತ್ತದೆ ಎಂಬ ನಿರ್ಧಾರಕ್ಕೆ ಬಂದು ಮಾಲೀಕರು ಲಾಭ ಮಾಡಿಕೊಳ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಇವೆಲ್ಲಾ ಅವೈಜ್ಞಾನಿಕ ವರದಿ ಎಂದಿದ್ದಾರೆ.