ಬೆಂಗಳೂರು: ರಾಜ್ಯದ ಆನ್‌ಲೈನ್ ಬುಕ್ಕಿಂಗ್ ಇಲ್ಲದ ಎಲ್ಲಾ ಚಾರಣ ತಾಣಗಳಿಗೆ ತಾತ್ಕಾಲಿಕ ನಿರ್ಬಂಧ ಹಾಕಲು ಸಚಿವರ ಈಶ್ವರ ಖಂಡ್ರೆ (Eshwar Khnadre) ಸೂಚನೆ ನೀಡಿದ್ದಾರೆ.
ರಾಜ್ಯದ ಆನ್‌ಲೈನ್ ಬುಕ್ಕಿಂಗ್ ಇಲ್ಲದ ಎಲ್ಲಾ ಚಾರಣ ತಾಣಗಳಲ್ಲಿ (Trekking) ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ, ನಿರ್ದಿಷ್ಟ ಸಂಖ್ಯೆಗೆ ಸೀಮಿತಗೊಳಿಸುವ ಪ್ರಮಾಣಿತ ಕಾರ್ಯ ವಿಧಾನ (SOP) ಬರುವವರೆಗೆ ತಾತ್ಕಾಲಿಕ ನಿರ್ಬಂಧ ಹೇರಲು ಸಚಿವರು ಸೂಚಿಸಿದ್ದಾರೆ.
ನಿರ್ಬಂಧ ಯಾಕೆ..?: ಗಣರಾಜ್ಯೋತ್ಸವದಂದು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಬಳಿ ಇರುವ ಕುಮಾರ ಪರ್ವತ ಟ್ರೆಕ್ಕಿಂಗ್ ಮಾಡಲು ಸಾವಿರಾರು ಮಂದಿ ಏಕಾಏಕಿ ಆಗಮಿಸಿದ್ದರು. ಇದರ ಫೋಟೋ ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಸಾವಿರಾರು ಮಂದಿ ಬಂದು ಏಕಾಏಕಿ ಚಾರಣಕ್ಕೆ ಬಂದಿದ್ದರಿಂದ ಅರಣ್ಯ ಪ್ರದೇಶಕ್ಕೆ ತೊಂದರೆ ಆಗಿದೆ ಎನ್ನಲಾಗಿತ್ತು. ಈ ಬೆನ್ನಲ್ಲೇ ಸರ್ಕಾರ ಹೊಸ ರೂಲ್ಸ್ ಜಾರಿಗೆ ತರಲು ಪ್ಲಾನ್ ಮಾಡುತ್ತಿದೆ. ಹೀಗಾಗಿ ಅಲ್ಲಿಯವರೆಗೆ ತಾತ್ಕಾಲಿಕವಾಗಿ ಚಾರಣ ಪ್ರದೇಶಗಳಿಗೆ ನಿರ್ಬಂಧ ಹೇರುವಂತೆ ಸೂಚನೆ ನೀಡಲಾಗಿದೆ.
ಪ್ರಕಟಣೆಯಲ್ಲಿ ಏನಿದೆ?: ಜನವರಿ 26ರಂದು ಕುಮಾರಪರ್ವತಕ್ಕೆ ಸಾವಿರಾರು ಚಾರಣಿಗರು ಆಗಮಿಸಿರುವ ಫೋಟೋ ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲಿ ಸಾಕಷ್ಟು ವೈರಲ್ ಆಗಿತ್ತು. ಕೆಲವರು ಟೆಂಟ್ ಹಾಕಿ ಪರ್ವತದಲ್ಲಿ ರಾತ್ರಿ ಕಳೆಯುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಪರಿಸರ ತಜ್ಞರು ಅರಣ್ಯ ಉಳಿವಿನ ಬಗ್ಗೆ ತಮ್ಮ ಕಳಕಳಿ ಹಾಗೂ ಆತಂಕವನ್ನು ಹೊರಹಾಕಿದ್ದಾರೆ. ಹೀಗೆ ಸಾವಿರಾರು ಸಂಖ್ಯೆಯಲ್ಲಿ ಚಾರಣಕ್ಕೆ ಜನರು ದಟ್ಟ ಅರಣ್ಯವಿರುವ ಗಿರಿ ಪ್ರದೇಶಗಳಿಗೆ, ಪಶ್ಚಿಮಘಟ್ಟಕ್ಕೆ ಪ್ರತಿವಾರವೂ ಆಗಮಿಸಿದರೆ ನಿಯಂತ್ರಿಸುವುದು ಮತ್ತು ಅವರ ತಪಾಸಣೆ ಮಾಡಿ ಬಿಡುವುದು ಅರಣ್ಯ ಇಲಾಖೆಯ ಸಿಬ್ಬಂದಿಗೂ ದೊಡ್ಡ ಸವಾಲಾಗುತ್ತದೆ. ಇದರಿಂದ ಪರಿಸರಕ್ಕೂ ಹಾನಿಯಾಗುತ್ತದೆ. ಜೊತೆಗೆ ಜಲ ಮೂಲಗಳು ಕೂಡ ಕಲುಷಿತಗೊಳ್ಳುವ ಅಪಾಯವಿದೆ.
ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಟ್ರೆಕ್ಕಿಂಗ್ ಪಾಯಿಂಟ್‌ಗಳಲ್ಲೂ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಮತ್ತು ನಿರ್ದಿಷ್ಟ ಸಂಖ್ಯೆಗೆ ಸೀಮಿತಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ SOP ರೂಪಿಸುವವರೆಗೆ ಆನ್‌ಲೈನ್ ಬುಕ್ಕಿಂಗ್ ಇಲ್ಲದ ಎಲ್ಲಾ ಚಾರಣ ತಾಣಗಳಲ್ಲಿ ತಾತ್ಕಾಲಿಕವಾಗಿ ಚಾರಣ ನಿರ್ಬಂಧಿಸುವಂತೆ ಸೂಚಿಸಿರುವುದಾಗಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.