Commission ಸರ್ಕಾರವನ್ನು ತೊಲಗಿಸಿ Mission ಸರ್ಕಾರವನ್ನು ತನ್ನಿ: ಪ್ರಧಾನಿ ಮೋದಿ

Public TV
4 Min Read
modi siddaramaiah 1

ಮೈಸೂರು: ಕಾಂಗ್ರೆಸ್ ಸರ್ಕಾರ ಎಷ್ಟು ದಿನ ಅಧಿಕಾರದಲ್ಲಿ ಇರುತ್ತದೋ ಅಷ್ಟು ದಿನ ಕರ್ನಾಟಕವನ್ನು ದಿವಾಳಿ ಮಾಡುತ್ತಿರುತ್ತದೆ. ಹೀಗಾಗಿ ಕಮೀಷನ್ ಸರ್ಕಾರವನ್ನು ತೊಲಗಿಸಿ ಮಿಷನ್ ಸರ್ಕಾರವನ್ನು ತನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ.

ಮಹಾರಾಜ ಕಾಲೇಜಿನಲ್ಲಿ ಆಯೋಜನೆಗೊಂಡಿದ್ದ ಬಿಜೆಪಿ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನದ ಅನುಸಾರ ನಡೆಯುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಇಲ್ಲಿ ಬೇರೆ ರೀತಿಯಲ್ಲಿ ಆಗುತ್ತದೆ. ನಾನು ಇಲ್ಲಿನ ಮುಖ್ಯಮಂತ್ರಿ ಹಾಗೂ ಅವರ ಪಕ್ಷವನ್ನು ಕೇಳಲು ಬಯಸುತ್ತೇನೆ. ಕಳೆದ 60 ವರ್ಷಗಳಿಂದ ನಿಮ್ಮ ಪಕ್ಷವೇ ಅಧಿಕಾರದಲ್ಲಿತ್ತು. ಜನರನ್ನು ಉದ್ರೇಕಿಸುವ ದಾರಿ ತಪ್ಪಿಸುವ ಕೆಲಸವನ್ನು ನೀವು ಈಗ ಮಾಡುತ್ತಿದ್ದಿರಲ್ಲ. ಐವತ್ತು ವರ್ಷಗಳಿಂದ ನಿಮ್ಮ ಬಾಯಿಗೆ ಬೀಗ ಹಾಕಿ ಕೂತಿದ್ದು ಏಕೆ? ಕರ್ನಾಟಕದಲ್ಲಿ ಸಣ್ಣ ಮನಸ್ಸಿನ ಜನ ಅಧಿಕಾರದಲ್ಲಿದ್ದಾರೆ. ಅವರಿಗೆ ಅಧಿಕಾರ ಮುಖ್ಯವೇ ಹೊರತು ಕರ್ನಾಟಕದ ಅಭಿವೃದ್ಧಿಯಲ್ಲ. ಇಂತಹಾ ಪಕ್ಷವನ್ನು ನಂಬಬಹುದೇ ಎಂದು ಪ್ರಶ್ನಿಸಿದರು.

modi in mysuru 12

ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರ 10% ಕಮಿಷನ್ ಸರ್ಕಾರ ಎಂದು ಹೇಳಿದ್ದಕ್ಕೆ ಬಹಳಷ್ಟು ಮಂದಿ ಕೋಪಗೊಂಡು ನನಗೆ ಪ್ರತಿಕ್ರಿಯಿಸಿದ್ದಾರೆ. ಈ ಕರ್ನಾಟಕ ಸರ್ಕಾರ ಹತ್ತು ಪರ್ಸೆಂಟ್ ಅಲ್ಲ ಅದಕ್ಕಿಂತ ಹೆಚ್ಚಿನ ಕಮಿಷನ್ ಸರ್ಕಾರ ಎಂದು ಹೇಳಿದ್ದರು. ಹೀಗಾಗಿ ನಿಮಗೆ ಕಮಿಷನ್ ಸರ್ಕಾರ ಬೇಕೆ ಅಥವಾ ಮಿಷನ್ ಸರ್ಕಾರ ಬೇಕೆ? ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದರೆ ರಾಜ್ಯದ ಅಭಿವೃದ್ಧಿಯ ಗುರಿ ಹೊಂದಿರುವ ಸರ್ಕಾರವಾಗಿ ಕೆಲಸ ಮಾಡುತ್ತದೆ ಎಂದು ಭರವಸೆ ನೀಡಿದರು.

ಕರ್ನಾಟಕದಲ್ಲಿ ಬಂಡಲ್ ಬಂಡಲ್ ನೋಟುಗಳು ಸಿಗುತ್ತವೆ. ಡೈರಿಗಳು ಸಿಗುತ್ತವೆ. ಅವುಗಳಲ್ಲಿ ಏನೇನು ಬರೆದಿದೆ. ಎಷ್ಟೆಷ್ಟು ಹಂಚಿಕೆಯ ವಿವರಗಳಿವೆ ಎಂಬುವುದು ಯಾರಿಗೆ ಗೊತ್ತು. ಅಂತಹ ವ್ಯಕ್ತಿಗಳಿಗೆ ಬೆಂಬಲ ನೀಡಿದರೆ ಮೈಸೂರಿಗೆ ಕೆಟ್ಟ ಹೆಸರು ಬರುತ್ತದೆ. ಮೈಸೂರಿನಲ್ಲಿ ಹುಟ್ಟಿದ ವ್ಯಕ್ತಿ ಕೆಟ್ಟ ಕೆಲಸ ಮಾಡುವುದಿಲ್ಲ. ಆದರೆ ಆ ವ್ಯಕ್ತಿ ಇಲ್ಲಿ ಹುಟ್ಟಿ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ನೈತಿಕತೆ ಬಿಟ್ಟಿದ್ದಾರೆ. ಹಗರಣಗಳ ಮೇಲೆ ಹಗರಣ ಹೊರ ಬರುತ್ತಿದೆ. ಕೇಂದ್ರ ಸರ್ಕಾರ ಕೊಟ್ಟ ಅನುದಾನವನ್ನು ಬಳಕೆ ಮಾಡಿಕೊಳ್ಳದೇ ರಾಜಕಾರಣಕ್ಕಾಗಿ ಹಾಗೂ ಹೈಕಮಾಂಡ್ ನಾಯಕರನ್ನು ಖುಷಿ ಪಡಿಸಲು, ಅವರಿಗೆ ಕಾಣಿಕೆ ಸಲ್ಲಿಸಲು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

modi in mysuru 4

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮುದ್ರಾ ಬ್ಯಾಂಕ್ ಯೋಜನೆ, ಯುವ ಜನತೆಗೆ ಯಾವುದೇ ಗ್ಯಾರಂಟಿ ಕೇಳದೆ ಸ್ವಯಂ ಉದ್ಯೋಗಕ್ಕೆ ಸಾಲ ನೀಡಲಾಗಿದೆ. ಆದರೆ ಕರ್ನಾಟಕ ಸರ್ಕಾರಕ್ಕೆ ಇದರ ಬಗ್ಗೆ ಗಮನವೇ ಇಲ್ಲ. 2022 ರ ವೇಳೆಗೆ ಎಲ್ಲಾ ನಿರಾಶ್ರಿತರಿಗೂ ಸ್ವಂತ ಮನೆ ಸಿಗಬೇಕು ಎನ್ನುವ ಗುರಿ ನಮ್ಮದು. ಸೂರಿಲ್ಲದವರಿಗೆ ಸೂರು, ಉದ್ಯೋಗ ನಿರ್ಮಾಣದ ಕನಸಿನೊಂದಿಗೆ ನಾವು ಹೊರಟಿದ್ದೇವೆ. ಮನೆಯಿಲ್ಲದವರಿಗೆ ಮನೆ ಕಟ್ಟಿಕೊಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಕರ್ನಾಟಕ ಸರ್ಕಾರ ಅದಕ್ಕೆ ಅಡ್ಡಿಯುಂಟು ಮಾಡುತ್ತಿದೆ. ಕರ್ನಾಟಕದಲ್ಲಿ ಸ್ವಂತ ಮನೆಯಿಲ್ಲದ ಬಡವರು, ಮಧ್ಯಮ ವರ್ಗದವರು ಇರದ ಪರಿಸ್ಥಿತಿ ನಿರ್ಮಾಣವಾಗಬೇಕು. ಅದಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತನ್ನಿ ಎಂದರು.

ನಾಲ್ಕು ಕೋಟಿ ಜನರು ಇಂದಿಗೂ 18ನೇ ಶತಮಾನದಲ್ಲಿ ಇರುವಂತೆ ಜೀವಿಸುತ್ತಿದ್ದಾರೆ. ಕಳೆದ ಅರವತ್ತು ವರ್ಷಗಳಿಂದ ನಿರಂತರ ಆಡಳಿತ ನಡೆಸಿದವರ ಕಾರಣ ಇಂದಿಗೂ ಹಲವಾರು ಗ್ರಾಮಗಳಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲ. ಹಿಂದೆ 2 ಕಿ.ಮೀ ದೂರದಲ್ಲಿ ವಿದ್ಯುತ್ ತಂತಿ ಇದ್ದರೂ ಮನೆಗೆ ಬರುತ್ತಿರಲಿಲ್ಲ. ಆದರೆ ಇಗ ಬದಲಾಗಿದೆ. ಈಗ ಮನೆ ದೂರದಲ್ಲಿದ್ದರೂ ಮನೆ ಮನೆಗೆ ವಿದ್ಯುತ್ ಸಂಪರ್ಕ ನೀಡುತ್ತೇವೆ. ಇದರಿಂದಾಗಿ ಈಗ ಆ ಮನೆಯ ಮಕ್ಕಳು ವಿದ್ಯುತ್ ದೀಪದ ಅಡಿ ಓದುತ್ತಿದ್ದಾರೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ವಿವರಿಸಿದರು.

modi in mysuru 8

ಸಂಸದರನ್ನು ಹೊಗಳಿದ್ರು: ನಿಮ್ಮ ಕ್ಷೇತ್ರದ ಸಂಸದರಾದ ಪ್ರತಾಪ ಸಿಂಹ ನಮ್ಮ ಬಳಿಗೆ ಯಾವಾಗಲೂ ಯಾವುದಾದರೂ ಯೋಜನೆ ಹಿಡಿದು ಬರುತ್ತಾರೆ. ನಮ್ಮನ್ನು ನೆಮ್ಮದಿಯಿಂದ ಕೂರಲು ಬಿಡಲ್ಲ. ಬೆಂಗಳೂರು ಮೈಸೂರು ನಡುವೆ ಅಷ್ಟಪಥಗಳ ರಾಷ್ಟ್ರೀಯ ಹೆದ್ದಾರಿ ರಚನೆಗೆ ಕೇಂದ್ರ ಸರ್ಕಾರ ಅನುಮತಿಸಿದೆ. ಅಲ್ಲದೆ ಮೈಸೂರಿಗೆ ಹೊಸ ವಿಶ್ವದರ್ಜೆಯ ಸ್ಯಾಟಲೈಟ್ ರೈಲ್ವೆ ಸ್ಟೇಷನ್ ಅನ್ನು ನಾಗನಹಳ್ಳಿ ಬಳಿ ನಿರ್ಮಾಣ ಮಾಡಲಾಗುತ್ತದೆ. ಇದರಿಂದ 76 ರೈಲುಗಳು ಮೈಸೂರಿಗೆ ಆಗಮಿಸಲು ಹಾಗೂ ನಿರ್ಗಮಿಸಲು ಸಾಧ್ಯವಾಗುತ್ತದೆ ಎಂದರು.

ಹಿಂದಿನ ಸರ್ಕಾರಗಳು ಜನರ ಕಣ್ಣಿಗೆ ಮಣ್ಣೆರೆಚಿವೆ. ಹಿಂದೆ ಇಷ್ಟೊಂದು ಮಾಧ್ಯಮಗಳು ಮೊದಲಾದವು ಇರಲಿಲ್ಲ. ಅವರನ್ನು ಹೇಳುವವರು ಕೇಳುವವರು ಇರಲಿಲ್ಲ. ರೈಲ್ವೆ ಬಜೆಟ್ ನಲ್ಲಿ ಘೋಷಣೆಯಾಗಿದ್ದ ಹಲವು ಯೋಜನೆಗಳು ಜಾರಿಯೇ ಆಗಿರಲಿಲ್ಲ. ಹಾಗಾಗಿಯೇ ಪ್ರತ್ಯೇಕ ರೈಲ್ವೆ ಬಜೆಟ್ ರದ್ದು ಮಾಡಿ. ಅಂದು ಘೋಷಣೆಯಾಗಿದ್ದ ರೈಲ್ವೆ ಯೋಜನೆಗಳನ್ನು ಹುಡುಕಿ ಈಗ ಜಾರಿಗೊಳಿಸುತ್ತಿದ್ದೇವೆ ಎಂದು ಹೇಳಿದರು.

modi in mysuru 9

ಇಂದು ಬೆಂಗಳೂರು-ಮೈಸೂರು ರೈಲ್ವೇ ವಿದ್ಯುದ್ದೀಕರಣ ಯೋಜನೆ ಪೂರ್ಣಗೊಂಡು ಯೋಜನೆಗೆ ಚಾಲನೆ ನೀಡಲಾಗಿದೆ. ಮೈಸೂರು-ಉದಯಪುರ ಮೈಸೂರು ಕ್ವೀನ್ ರೈಲು ಲೋಕಾರ್ಪಣೆ ಮಾಡಿದ್ದೇವೆ. ರೈಲ್ವೇ ಆಧುನೀಕರಣ ಹಾಗೂ ಪ್ರಗತಿಯ ತೀವ್ರಗತಿಗೆ ಆದ್ಯತೆ ನೀಡಲಾಗಿದೆ. ರೈಲ್ವೇ ಲೈನ್ ಡಬ್ಲಿಂಗ್ ಅದರಲ್ಲಿ ಒಂದು ಭಾಗ. ಬಡವರ ಅಭ್ಯುದಯಕ್ಕೆ ರೈಲ್ವೇ ಪ್ರಗತಿ ಅಗತ್ಯ. ನಾಲ್ಕು ವರ್ಷದಿಂದ ರೈಲ್ವೇ ಯೋಜನೆಗಳು ತೀವ್ರಗತಿ ಪಡೆದುಕೊಂಡಿದೆ ಎಂದರು.

ಮೈಸೂರು-ಉದಯಪುರ ನಡುವಿನ ರೈಲ್ವೇ ಯೋಜನೆ ಜಾರಿ ಎಂದರೆ ಕರ್ನಾಟಕ ಮತ್ತು ರಾಜಸ್ಥಾನ ನಡುವೆ ನೇರ ಸಂಪರ್ಕ ಕಲ್ಪಿಸಿದಂತೆ ಆಗುತ್ತದೆ. ಇದರಿಂದ ಎರಡೂ ಕಡೆಯ ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತದೆ. ಅಲ್ಲದೇ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಆಗುವುದರಿಂದ ಆಟೋ ರಿಕ್ಷಾ, ಟ್ಯಾಕ್ಸಿ, ಹೊಟೇಲ್ ನಿರ್ವಾಹಕ, ದೇವಸ್ಥಾನದ ಹೊರಗೆ ಪೂಜಾ ಸಾಮಾಗ್ರಿ ಮಾರುವವರು ಸೇರಿದಂತೆ ಸಣ್ಣಪುಟ್ಟ ಉದ್ಯೋಗ ಮಾಡುವವರ ಆದಾಯ ಹೆಚ್ಚಿಸುತ್ತದೆ ಎಂದರು.

modi in mysuru 10

ಹಿಂದೆಲ್ಲಾ ನೌಕರಿಗೆ ಸಂದರ್ಶನ ಮಾಡುವುದು ಎಂದರೆ ಹಣ ಹೊಡೆಯುವ ಮಾರ್ಗವಾಗಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಿಫಾರಸ್ಸಿನ ಮೇಲೆ ಕೆಲಸಗಳು ಸಿಗುತ್ತಿತ್ತು. ಆದರೆ ನಮ್ಮ ಸರ್ಕಾರದಲ್ಲಿ ಮೆರಿಟ್ ಇದ್ದವರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ ಎಂದು ಹೇಳಿದರು.

ಮೋದಿ ತಮ್ಮ ಭಾಷಣದಲ್ಲಿ ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾದ ಶಾಸಕ, ರೈತ ಸಂಘದ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಸಂತಾಪ ವ್ಯಕ್ತಪಡಿಸಿದರು.

ಭಾಷಣ ಆರಂಭದಲ್ಲಿ ಮೈಸೂರು ವಿಶೇಷತೆಗಳನ್ನು ಪ್ರಸ್ತಾಪಿಸಿದ ಮೋದಿ, ಮೈಸೂರಿನ ನನ್ನ ಪ್ರೀತಿಯ ಬಂಧು ಭಗಿನಿಯರೇ ನಿಮಗೆಲ್ಲಾ ನನ್ನ ನಮಸ್ಕಾರಗಳು. ಚಾಮುಂಡೇಶ್ವರಿ ಮಾತೆಗೆ ಪ್ರಣಾಮಗಳು. ಮೈಸೂರಿನ ಅರಸರು, ಕುವೆಂಪು, ಸರ್.ಎಂ.ವಿಶ್ವೇಶ್ವರಯ್ಯ, ಸುತ್ತೂರು ಶ್ರೀಗಳು, ಬಾಲಗಂಗಾಧರಸ್ವಾಮಿಗಳಿಗೆ ನೆನೆದು ವಂದನೆ ತಿಳಿಸಿದರು. ಈ ವೇಳೆ ಮೈಸೂರು ರೇಷ್ಮೆ, ಶ್ರೀಗಂಧ, ಮೈಸೂರು ಮಲ್ಲಿಗೆ, ಮೈಸೂರುಪಾಕ್ ಇವೆಲ್ಲಾ ಜಗತ್ ಪ್ರಸಿದ್ಧವೋ ಹಾಗೇ ಮೈಸೂರು ಜನರು ಎಂದು ಹೊಗಳಿದರು.

 

modi in mysuru 7

modi in mysuru 2

modi in mysuru 3

modi in mysuru 5

modi in mysuru 6

Share This Article
Leave a Comment

Leave a Reply

Your email address will not be published. Required fields are marked *