BelgaumBengaluru CityDistrictsKarnatakaLatestLeading NewsMain Post

ನನ್ನಿಷ್ಟದಂತೆ ಬದುಕದಿದ್ದರೆ ಏಕೆ ಇರಬೇಕು? – ಫಿಲ್ಟರ್ ಇಟ್ಕೊಂಡು ಬದುಕುವ ಮಗ ನಾನಲ್ಲ ಎಂದಿದ್ದರು ಉಮೇಶ್ ಕತ್ತಿ

ಬೆಂಗಳೂರು: ಉಮೇಶ್ ಕತ್ತಿ ಉತ್ತರ ಕರ್ನಾಟಕ ಭಾಗದ ಸ್ಟಾರ್ ಪೊಲಿಟಿಶಿಯನ್. ಚಿಕ್ಕ ವಯಸ್ಸಿನಲ್ಲೇ ರಾಜಕೀಯಕ್ಕೆ ಬಂದು ದಾಖಲೆ ಬರೆದವರು. ಯಾವುದಕ್ಕೂ ಜಗ್ಗದೆ, ಯಾವುದನ್ನೂ ಲೆಕ್ಕ ಹಾಕದೇ ನಾನು ನಡೆದಿದ್ದೇ ದಾರಿ ಎಂದು ಸಕ್ಸಸ್ ಕಂಡಿದ್ದ ಅಪರೂಪದ ರಾಜಕಾರಣಿ. ಇನ್ನೂ 15 ವರ್ಷ ಬದುಕುತ್ತೇನೆ, ಮುಂದೆ ಸಿಎಂ ಆಗುತ್ತೇನೆ ಎಂದವರನ್ನು ವಿಧಿ ಬಿಡಲೇ ಇಲ್ಲ. ಉಮೇಶ್ ಕತ್ತಿ ಇನ್ನಿಲ್ಲ.

ಅವರು ಹೀಗೆ ಅಂದುಕೊಳ್ತಾರೆ.. ಇವರು ಹಾಗೆ ಅಂದುಕೊಳ್ತಾರೆ.. ಅಂದ್ಕೊಂಡು ಬದುಕೋದಕ್ಕೆ ಆಗುತ್ತಾ..!? ನನ್ನಿಷ್ಟದಂತೆ ಬದುಕದಿದ್ದರೇ ಏಕೆ ಇರಬೇಕು..!? ಇದು ಉಮೇಶ್ ಕತ್ತಿ ಹೇಳುತ್ತಿದ್ದ ನೇರ ಮಾತು. ನನ್ನ ಮನಸ್ಸಿಗೆ ಬಂದದ್ದು ಬಾಯಿಗೆ ಬರುತ್ತೆ. ಫಿಲ್ಟರ್ ಇಟ್ಕೊಂಡು ಬದುಕುವ ಮಗ ನಾನಲ್ಲ ಅಂತಿದ್ರು ಕತ್ತಿ. ವಿಜಯಪುರದಲ್ಲಿ ಮಾತನಾಡುವಾಗ ನಾನು ಇನ್ನೂ 15 ವರ್ಷ ಬದುಕಿರುತ್ತೇನೆ, ಈಗ ಸಿಎಂ ಬೇಡ.. ಮುಂದೆ ಸಿಎಂ ಆಗ್ತೀನಿ ಅಂತಾ ಹೇಳಿ ನಕ್ಕಿದ್ದ ಉಮೇಶ್ ಕತ್ತಿ ಇನ್ನೂ ನೆನಪು ಮಾತ್ರ. ಇದನ್ನೂ ಓದಿ: ಸದನದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದ ಉಮೇಶ್ ಕತ್ತಿ ತಂದೆ

ಉಮೇಶ್ ಕತ್ತಿ ರಾಜಕಾರಣಿಯೇ ಆಗಬೇಕು ಎಂದು ಬಯಸಿ ಬಂದವರಲ್ಲ. 1985ರಲ್ಲಿ ಶಾಸಕರಾಗಿದ್ದ ತಂದೆ ವಿಶ್ವನಾಥ್ ಮಲ್ಲಪ್ಪ ಕತ್ತಿ ವಿಧಾನಸಭೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು. ತಂದೆಯ ನಿಧನದ ನಂತರ ಚುನಾವಣಾ ರಾಜಕೀಯ ಪ್ರವೇಶಿಸಿದವರು ಉಮೇಶ್ ಕತ್ತಿ. ರಾಮಕೃಷ್ಣ ಹೆಗಡೆ ಅವರ ಪ್ರೀತಿ, ನೆಚ್ಚಿನ ಹುಡುಗ ಉಮೇಶ್ ಕತ್ತಿ ಆಗಷ್ಟೇ ಚುನಾವಣೆಗೆ ನಿಲ್ಲುವ ವಯಸ್ಸು ತಲುಪಿದ್ರು. ಅಲ್ಲಿಂದ ಉಮೇಶ್ ಕತ್ತಿ ಚುನಾವಣೆ ರಾಜಕೀಯ ಗೆಲುವಿನ ಯಾತ್ರೆ ಜೀವನ ಶುರು ಆಯ್ತು. ಆನೆ ನಡೆದದ್ದೇ ದಾರಿ ಎಂಬಂತೆ 9 ಸಲ ವಿಧಾನಸಭೆ ಚುನಾವಣೆಗೆ ನಿಂತು 6 ಪಕ್ಷ ಬದಲಾಯಿಸಿ 8 ಬಾರಿ ಗೆದ್ದು ಬೀಗಿ ದಾಖಲೆ ಬರೆದಿರುವ ಅಪರೂಪದ ರಾಜಕಾರಣಿ ಉಮೇಶ್ ಕತ್ತಿ. 1985 ರಲ್ಲಿ ಮೊದಲ ಬಾರಿಗೆ ಹುಕ್ಕೇರಿ ಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ಪರ್ಧಿಸಿ ಮೊದಲ ಯತ್ನದಲ್ಲೇ ಗೆಲುವು ಸಾಧಿಸಿದ್ರು. ಆ ನಂತರ ಎರಡನೇ ಬಾರಿಗೆ 1989ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಗೆದ್ದರೆ, 1994ರಲ್ಲೂ ಜನತಾದಳದಿಂದಲೇ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಬಳಿಕ 1999ರಲ್ಲಿ ಸಂಯುಕ್ತ ಜನತಾದಳ (ಜೆಡಿಯು)ದಿಂದ ಸ್ಪರ್ಧಿಸಿ ನಾಲ್ಕನೇ ಬಾರಿಗೆ ಜಯಭೇರಿ ಬಾರಿಸಿದ್ರೆ, 2004ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಕೇವಲ 821 ಮತಗಳಿಂದ ಮೊದಲ ಸೋಲು ಕಂಡರು. ವಿಧಾನಸಭೆ ಚುನಾವಣೆಯಲ್ಲಿ ಅವರು ಕಂಡ ಏಕೈಕ ಸೋಲು ಇದು. ಇದೆಲ್ಲದರ ನಡುವೆ 2008ರಲ್ಲಿ ಜೆಡಿಎಸ್‍ಗೆ ಜಂಪ್ ಆಗಿ ಗೆಲುವು ಸಾಧಿಸಿದ್ರೆ ನಂತರ ಆಪರೇಷನ್ ಕಮಲದ ಫಲವಾಗಿ ಬಿಜೆಪಿ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಆರನೇ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ರು. ಇದನ್ನೂ ಓದಿ: ಆಪ್ತನ ನೆನೆದು ಕಣ್ಣೀರಿಟ್ಟ ಬೊಮ್ಮಾಯಿ – ತಲೆ ಸವರಿ ಭಾವುಕರಾದ ಸಿಎಂ

ಅಲ್ಲಿಂದ 2013 ಮತ್ತು 2018ರಲ್ಲಿ ಮತ್ತೆ ಇದೇ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಒಟ್ಟು 8 ಬಾರಿ ಹುಕ್ಕೇರಿ ಕ್ಷೇತ್ರದಲ್ಲಿ ದಾಖಲೆಯ ಗೆಲುವಿನ ಹೆಗ್ಗಳಿಕೆ ಉಮೇಶ್ ಕತ್ತಿ ಅವರದ್ದು. ಇಲ್ಲಿಯವರೆಗೆ ರಾಜ್ಯದಲ್ಲಿ ಧರಂ ಸಿಂಗ್ ಮತ್ತು ಮಲ್ಲಿಕಾರ್ಜುನ ಖರ್ಗೆ ಮಾತ್ರ 8 ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಅವರ ದಾಖಲೆಯನ್ನು ಉಮೇಶ್ ಕತ್ತಿ ಸರಿಗಟ್ಟಿದ್ದಾರೆ.

ಉಮೇಶ್ ಕತ್ತಿ ವರ್ಣರಂಜಿತ ರಾಜಕಾರಣಿ. ಏನ್ ಮಾತಾಡಿದ್ರೆ ಏನಾಗಬಹುದು ಎಂಬುದನ್ನು ಯೋಚಿಸೋದು ಇರಲೇ ತಲೆಯನ್ನೇ ಕೆಡಿಸಿಕೊಳ್ಳುತ್ತಿರಲಿಲ್ಲ. ಸಕ್ಕರೆ, ಲೋಕೋಪಯೋಗಿ, ಬಂಧೀಖಾನೆ, ತೋಟಗಾರಿಕೆ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದ ಕತ್ತಿ ಅನುಭವಿ ರಾಜಕಾರಣಿ. ಈಗ ಆಹಾರ ಮತ್ತು ನಾಗರೀಕ ಸರಬರಾಜು, ಅರಣ್ಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಸರ್ಕಾರದ ಭಾಗವಾಗಿದ್ದರು ಆಗಾಗ್ಗೆ ಪ್ರತ್ಯೇಕ ಉತ್ತರ ಕರ್ನಾಟಕ ಕೂಗನ್ನು ಹಾಕುತ್ತಿದ್ದರು. ಸಾರ್ವಜನಿಕವಾಗಿ ನಡವಳಿಕೆಗಳಿಗೆ ಬದಲಾವಣೆಗಳನ್ನ ಮಾಡಿಕೊಳ್ಳದೇ ಅಧಿಕಾರಿಗಳು, ಜನರ ಮೇಲೂ ಕೋಪತಾಪ ಪ್ರದರ್ಶನ ಮಾಡುತ್ತಿದ್ದರು. ಈ ರೀತಿ ವಿವಾದಗಳು ಪಕ್ಷ, ಸರ್ಕಾರಕ್ಕೆ ಎಫೆಕ್ಟ್ ಆಗುತ್ತಿವೆ ಅಂದ್ರೂ ಕೇರ್ ಮಾಡುತ್ತಿರಲಿಲ್ಲ ಉಮೇಶ್ ಕತ್ತಿ. ಇದನ್ನೂ ಓದಿ: ಚಾಟಿ ಏಟು ನೀಡಲು ಕತ್ತಿ ಕೊಡುತ್ತಿದ್ದ ಹೇಳಿಕೆಗಳನ್ನು ನಾವು ಅರ್ಥ ಮಾಡಿಕೊಳ್ತಿರಲಿಲ್ಲ: ಪ್ರತಾಪ್ ಸಿಂಹ

ಒಟ್ನಲ್ಲಿ ರಾಜಕಾರಣಿ ಅಂದ್ರೆ ಹೀಗೆ ಇರಬೇಕು ಎಂಬ ಪಾಲಿಸಿಯನ್ನೂ ಬದಿಗೆ ಸರಿಸಿ ಬದುಕಿದ ಕತ್ತಿ ನೆನಪು ಮಾತ್ರ. ಒರಟು ಸ್ವಭಾವದ ಮೂಲಕ ಫಿಲ್ಟರ್ ಇಲ್ಲದೆ ಉತ್ತರ ಕರ್ನಾಟಕದ ಭಾಷೆಯಲೇ ಪರ-ವಿರುದ್ಧ ವಾದಗಳಿಗೆ ತಿವಿಯುತ್ತಿದ್ದ ಕತ್ತಿ ಈಗ ಚಿರನಿದ್ರೆಗೆ ಜಾರಿದ್ದು, ಕರ್ನಾಟಕ ರಾಜಕಾರಣದಲ್ಲಿ ಒಬ್ಬ ವರ್ಣರಂಜಿತ ನೇರ ನುಡಿಯ ರಾಜಕಾರಣಿನ್ನು ಕಳೆದುಕೊಂಡಿರುವುದು ಅಕ್ಷರಶಃ ಸತ್ಯ.

Live Tv

Leave a Reply

Your email address will not be published.

Back to top button