-ಮತದಾನದಲ್ಲಿ ಮಂಡ್ಯ ಫಸ್ಟ್, ಬೆಂಗಳೂರು ಉತ್ತರ ಲಾಸ್ಟ್
ಬೆಂಗಳೂರು: ಭವಿಷ್ಯದ ಬಲಿಷ್ಠ ಭಾರತಕ್ಕಾಗಿ ಕರ್ನಾಟಕದ ಮೊದಲ ಹಂತದಲ್ಲಿ ದಕ್ಷಿಣಾರ್ಧ ಭಾಗದ 14 ಕ್ಷೇತ್ರಗಳಲ್ಲಿ ನಡೆದ ಚುನಾವಣೆ ಮುಗಿದಿದೆ. ಕಾಂಗ್ರೆಸ್-ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳ ಭವಿಷ್ಯ ಈಗ ಇವಿಎಂ-ವಿವಿಪ್ಯಾಟ್‍ಗಳಲ್ಲಿ ಭದ್ರವಾಗಿದ್ದು, ಸ್ಟ್ರಾಂಗ್‍ರೂಂ ಸೇರಿವೆ. ಚುನಾವಣೆ ನಡೆದ ಕರ್ನಾಟಕದ 14 ಕ್ಷೇತ್ರಗಳಲ್ಲಿ ಶೇ. 67.67 ಮತದಾನವಾಗಿದೆ.
ಎಲ್ಲೆಲ್ಲಿ ಎಷ್ಟು ಮತದಾನ?
1. ಮಂಡ್ಯ: ಸಕ್ಕರೆ ನಾಡು ಮಂಡ್ಯದ 2014ರ ಚುನಾವಣೆಯಲ್ಲಿ ಶೇ.71.47ರಷ್ಟು ಮತದಾನವಾಗಿತ್ತು. ಇಂದು ನಡೆದ ಚುನಾವಣೆಯಲ್ಲಿ ಶೇ.79.98 ರಷ್ಟು ಮತದಾನವಾಗಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿದ್ದರಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಬೆಂಬಲ ಸೂಚಿಸಿದೆ. ನಟ ಅಂಬರೀಶ್ ಪತ್ನಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಬಿಜೆಪಿ ಸಹ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಸುಮಲತಾರಿಗೆ ಬೆಂಬಲ ಸೂಚಿಸಿತ್ತು.
Advertisement
Advertisement
2. ಹಾಸನ: ಜೆಡಿಎಸ್ ಭದ್ರಕೋಟೆ ಎಂದು ಕರೆಸಿಕೊಳ್ಳುವ 2014ರ ಹಾಸನದ ಚುನಾವಣೆಯಲ್ಲಿ ಶೇ.73.49ರಷ್ಟು ಮತದಾನ ಆಗಿತ್ತು. ಇಂದು ನಡೆದ ಚುನಾವಣೆಯಲ್ಲಿ ಶೇ.77.28 ರಷ್ಟು ಮತದಾನವಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಕ್ಷೇತ್ರವನ್ನು ತ್ಯಾಗ ಮಾಡಿ ತುಮಕೂರುದಿಂದ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್‍ನಿಂದ ಹೊರ ಬಂದ ಮಾಜಿ ಸಚಿವ ಎ.ಮಂಜು ಬಿಜೆಪಿ ಬಾವುಟ ಹಿಡಿದು ಕಣದಲ್ಲಿದ್ದಾರೆ.
Advertisement
3. ತುಮಕೂರು: ಕಲ್ಪವೃಕ್ಷಗಳ ನಾಡು ತುಮಕೂರಿನ 2014ರ ಚುನಾವಣೆಯಲ್ಲಿ ಶೇ.72.57 ಮತದಾನವಾಗಿತ್ತು. ಇಂದು ನಡೆದ ಚುನಾವಣೆಯಲ್ಲಿ ಶೇ.77.01 ರಷ್ಟು ಮತದಾನವಾಗಿದೆ. ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಬಿಜೆಪಿಯಿಂದ ಜಿ.ಎಸ್.ಬಸವರಾಜು ಕಣದಲ್ಲಿದ್ದಾರೆ.
Advertisement
4. ಮೈಸೂರು: ಅರಮನೆಗಳ ನಗರಿ ಮೈಸೂರು-ಕೊಡಗು ಕ್ಷೇತ್ರದ 2014ರ ಚುನಾವಣೆಯಲ್ಲಿ ಶೇ.68.72 ರಷ್ಟು ಮತದಾನವಾಗಿತ್ತು. ಇಂದು ನಡೆದ ಚುನಾವಣೆಯಲ್ಲಿ ಶೇ.67.24ರಷ್ಟು ಮತದಾನವಾಗಿದೆ. ಕಾಂಗ್ರೆಸ್‍ನಿಂದ ವಿಜಯ್ ಶಂಕರ್, ಬಿಜೆಪಿಯಿಂದ ಪ್ರತಾಪ್ ಸಿಂಹ ಕಣದಲ್ಲಿರುವ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.
5. ಚಿಕ್ಕಬಳ್ಳಾಪುರ: ಕಾಂಗ್ರೆಸ್ ಭದ್ರಕೋಟೆ ಎಂದು ಕರೆಸಿಕೊಳ್ಳುವ ಚಿಕ್ಕಬಳ್ಳಾಪುರದ 2014ರ ಚುನಾವಣೆಯಲ್ಲಿ ಶೇ.76.21ರಷ್ಟು ಮತದಾನವಾಗಿತ್ತು. ಇಂದು ನಡೆದ ಚುನಾವಣೆಯಲ್ಲಿ ಶೇ.76.14 ರಷ್ಟು ಮತದಾನವಾಗಿದೆ. ಕಾಂಗ್ರೆಸ್‍ನಿಂದ ಎಂ.ವೀರಪ್ಪ ಮೊಯ್ಲಿ, ಬಿಜೆಪಿಯಿಂದ ಬಿ.ಎನ್.ಬಚ್ಚೇಗೌಡ ಮತ್ತು ಬಿಎಸ್‍ಪಿ ಪಕ್ಷದಿಂದ ಸಿ.ಎಸ್.ದ್ವಾರಕನಾಥ್ ಚಿಕ್ಕಬಳ್ಳಾಪುರ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.
6. ಚಾಮರಾಜನಗರ: 2014ರ ಚುನಾವಣೆಯಲ್ಲಿ ಶೇ.72.85 ರಷ್ಟು ಮತದಾನ ಆಗಿತ್ತು. ಇಂದು ನಡೆದ ಚುನಾವಣೆಯಲ್ಲಿ ಶೇ.73.45 ರಷ್ಟು ಮತದಾನವಾಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಧೃವ ನಾರಾಯಣ್ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಶ್ರೀನಿವಾಸ್ ಪ್ರಸಾದ್ ಕಣದಲ್ಲಿದ್ದಾರೆ.
7. ಕೋಲಾರ: 2014ರ ಚುನಾವಣೆಯಲ್ಲಿ ಶೇ.75.51 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.75.94 ರಷ್ಟು ಮತದಾನ ನಡೆದಿದೆ. ಕಾಂಗ್ರೆಸ್‍ನಿಂದ ಕೆ.ಎಚ್.ಮುನಿಯಪ್ಪ ಮತ್ತು ಬಿಜೆಪಿಯ ಎಸ್.ಮುನಿಸ್ವಾಮಿ ಕಣದಲ್ಲಿದ್ದಾರೆ.
8. ಬೆಂಗಳೂರು ಉತ್ತರ: 2014ರ ಚುನಾವಣೆಯಲ್ಲಿ ಶೇ. 56.53 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.50.03 ರಷ್ಟು ಮತದಾನವಾಗಿದೆ. ರಾಜ್ಯ ಮೈತ್ರಿಯಲ್ಲಿ ಈ ಕ್ಷೇತ್ರ ಜೆಡಿಎಸ್ ಪಾಲಾಗಿತ್ತು. ಸೂಕ್ತ ಅಭ್ಯರ್ಥಿಗಳ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿತ್ತು. ಬಿಜೆಪಿಯಿಂದ ಡಿ.ವಿ.ಸದಾನಂದಗೌಡ ಎರಡನೇ ಬಾರಿ ಬೆಂಗಳೂರು ಉತ್ತರದಲ್ಲಿ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್‍ನಿಂದ ಸಚಿವ ಕೃಷ್ಣಬೈರೇಗೌಡರು ಸ್ಪರ್ಧೆಯಲ್ಲಿದ್ದಾರೆ.
9. ಬೆಂಗಳೂರು ಗ್ರಾಮಾಂತರ: 2014ರ ಚುನಾವಣೆಯಲ್ಲಿ ಶೇ.66.45 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.64.09 ರಷ್ಟು ಮತದಾನವಾಗಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಅಶ್ವಥ್ ನಾರಾಯಣದಲ್ಲಿ ಬೆಂಗಳೂರು ಗ್ರಾಮಾಂತರ ಕಣದಲ್ಲಿರುವ ಪ್ರಮುಖರು.
10. ಬೆಂಗಳೂರು ಕೇಂದ್ರ: 2014ರ ಚುನಾವಣೆಯಲ್ಲಿ ಶೇ.55.64ರಷ್ಟು ಮತದಾನ ನಡೆದಿತ್ತು. ಈ ಬಾರಿ ಶೇ.49.76 ರಷ್ಟು ಮತದಾನವಾಗಿದೆ. ಬೆಂಗಳೂರು ಕೇಂದ್ರದಿಂದ ಮೊದಲ ಬಾರಿಗೆ ನಟ ಪ್ರಕಾಶ್ ರೈ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿಯಿಂದ ಪಿ.ಸಿ.ಮೋಹನ್ ಮತ್ತು ಕಾಂಗ್ರೆಸ್‍ನಿಂದ ರಿಜ್ವಾನ್ ಅರ್ಷದ್ ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ ಬೆಂಗಳೂರು ಕೇಂದ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
11. ಬೆಂಗಳೂರು ದಕ್ಷಿಣ: 2014ರ ಚುನಾವಣೆಯಲ್ಲಿ ಶೇ.55.75 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.53.53 ರಷ್ಟು ಮತದಾನವಾಗಿದೆ. ಬೆಂಗಳೂರು ದಕ್ಷಿಣದಿಂದ ಯುವ ನಾಯಕ ತೇಜಸ್ವಿ ಸೂರ್ಯರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಕಾಂಗ್ರೆಸ್‍ನಿಂದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಕಣದಲ್ಲಿದ್ದಾರೆ.
12. ಚಿತ್ರದುರ್ಗ: 2014ರ ಚುನಾವಣೆಯಲ್ಲಿ ಶೇ.66.07ರಷ್ಟು ಮತದಾನವಾಗಿತ್ತು. ಈ ಬಾರಿ 70.59 ರಷ್ಟು ಮತದಾನ ನಡೆದಿದೆ. ಚಿತ್ರದುರ್ಗದಲ್ಲಿ ಕೈ ಅಭ್ಯರ್ಥಿಯಾಗಿ ಬಿ.ಎನ್.ಚಂದ್ರಪ್ಪ ಮತ್ತು ಬಿಜೆಪಿಯಿಂದ ಎ.ನಾರಾಯಣ ಸ್ವಾಮಿ ಸ್ಪರ್ಧೆಯಲ್ಲಿದ್ದಾರೆ.
13. ದಕ್ಷಿಣ ಕನ್ನಡ: 2014ರ ಚುನಾವಣೆಯಲ್ಲಿ ಶೇ. 77.15ರಷ್ಟು ಮತದಾನ ಆಗಿತ್ತು. ಈ ಬಾರಿ ಶೇ.77.70 ರಷ್ಟು ಮತದಾನ ನಡೆದಿದೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್‍ನಿಂದ ಮಿಥುನ್ ರೈ ಸ್ಪರ್ಧಿಸಿದ್ದಾರೆ.
14. ಉಡುಪಿ-ಚಿಕ್ಕಮಗಳೂರು: 2014ರ ಚುನಾವಣೆಯಲ್ಲಿ ಶೇ.74.56ರಷ್ಟು ಮತದಾನ ನಡೆದಿತ್ತು. ಇಂದು ನಡೆದ ಚುನಾವಣೆಯಲ್ಲಿ ಶೇ.75.26 ರಷ್ಟು ಮತದಾನವಾಗಿದೆ. ಇಲ್ಲಿ ಶೋಭಾ ಕರಂದ್ಲಾಜೆ ಬಿಜೆಪಿ ಅಭ್ಯರ್ಥಿಯಾಗಿ ಎರಡನೇ ಬಾರಿ ಸ್ಪರ್ಧೆ ಮಾಡಿದ್ದರೆ, ಮೈತ್ರಿಯ ಒಮ್ಮತ ಅಭ್ಯರ್ಥಿಯಾಗಿ ಜೆಡಿಎಸ್‍ನಿಂದ ಪ್ರಮೋದ್ ಮಧ್ವರಾಜ್ ಕಣದಲ್ಲಿದ್ದಾರೆ.