ಶಿವಮೊಗ್ಗ: ಮಹಾನಗರ ಪಾಲಿಕೆಗೆ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. 35 ವಾರ್ಡ್ ಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ. ಕಾಂಗ್ರೆಸ್ ಕೇವಲ 7 ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಕಿಂಗ್ ಮೇಕರ್ ಆಗುವ ಆಸೆ ಇಟ್ಟುಕೊಂಡಿದ್ದ ಜೆಡಿಎಸ್ ಗೆ ಕೇವಲ ಎರಡು ಸ್ಥಾನಗಳು ಮಾತ್ರ ದೊರಕಿವೆ. ಪಕ್ಷೇತರರು ಐವರು ಗೆದ್ದಿದ್ದು, ಎಸ್ ಡಿಪಿಐ ಒಂದು ಸ್ಥಾನದಲ್ಲಿ ಗೆದ್ದಿದೆ. ಹಾಲಿ ಪಾಲಿಕೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುತ್ತಿವೆ.
ಸತತವಾಗಿ ಐದು ಬಾರಿ ಗೆದ್ದಿದ್ದ ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ ಬಿಜೆಪಿಯ ಗನ್ನಿ ಶಂಕರ್ ಎದರು ಸೋತಿದ್ದಾರೆ. ಕಾಂಗ್ರೆಸ್ ನ ನರಸಿಂಹಮೂರ್ತಿ, ಜೆಡಿಎಸ್ ನ ಮಾಜಿ ಮೇಯರ್ ಪತ್ನಿ ಗೀತಾ ಏಳುಮಲೈ, ಮಾಜಿ ಉಪಮೇಯರ್ ಪಾಲಾಕ್ಷಿ ಸೋಲಿನ ರುಚಿ ನೋಡುವಂತಾಗಿದೆ.
Advertisement
15ನೇ ವಾರ್ಡ್ ನಲ್ಲಿ ಕಾಂಗ್ರೆಸ್ ನ ರಾಜಶೇಖರ್ ಹಾಗೂ ಜೆಡಿಎಸ್ ನ ಸತ್ಯನಾರಾಯಣ ಇಬ್ಬರೂ ಸಮ ಸಮ ಮತಗಳನ್ನು ಪಡೆದರು. ಅಂತಿಮವಾಗಿ ಚೀಟಿ ಮೂಲಕ ಆಯ್ಕೆ ಮಾಡಿದಾಗ ಜೆಡಿಎಸ್ ಸತ್ಯನಾರಾಯಣ ಅವರಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ.
Advertisement
Advertisement
35 ವಾರ್ಡ್ ಹಾಗೂ ಇಬ್ಬರು ಶಾಸಕರು ಹಾಗೂ ಮೂವರು ವಿಧಾನ ಪರಿಷತ ಸದಸ್ಯರು ಸೇರಿ ಒಟ್ಟು ಸದಸ್ಯರ ಸಂಖ್ಯೆ 40. ಪಾಲಿಕೆ ಅಧಿಕಾರ ಹಿಡಿಯಲು 21 ಸದಸ್ಯರ ಬೆಂಬಲ ಬೇಕು. ಈ ಹಿನ್ನೆಲೆಯಲ್ಲಿ ಬಿಜೆಪಿ ಗೆದ್ದ ಅಭ್ಯರ್ಥಿಗಳು 20 ಜನ ಹಾಗೂ ನಾಲ್ವರು ಶಾಸಕರು ಸೇರಿ ಸದಸ್ಯ ಬಲ 25 ತಲುಪಿದೆ. ಈ ಮೂಲಕ ಬಿಜೆಪಿ ನಿಚ್ಚಳ ಬಹುಮತ ಪಡೆದಿದೆ.
Advertisement
ಕಾಂಗ್ರೆಸ್ ಹಿನ್ನಡೆಗೆ ಕಾರಣಗಳೇನು?
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಕಾಂಗ್ರೆಸ್ ತಿದ್ದುಕೊಳ್ಳಲಿಲ್ಲ. ಪಕ್ಷದೊಳಗಿನ ಭಿನ್ನಮತ ಶಮನಗೊಳಿಸಲು ಹಿರಿಯ ನಾಯಕರು ದಿಟ್ಟ ಹೆಜ್ಜೆ ಇಡಲೇ ಇಲ್ಲ. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕಾಶಿ ವಿಶ್ವನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್ ಇನ್ನಿತರ ಮುಖಂಡರಿಗೆ ಕಾಂಗ್ರೆಸ್ ಟಿಕೆಟ್ ದೊರಕಲಿಲ್ಲ. ಇದು ಒಟ್ಟಾರೆಯಾಗಿ ಕಾಂಗ್ರೆಸ್ ಕಾರ್ಯಕರ್ತರ ಆತ್ಮವಿಶ್ವಾಸ ಕುಗ್ಗಿಸಿತು. ಇದಲ್ಲದೇ, ಪ್ರಚಾರ ವಿಷಯದಲ್ಲೂ ಕೂಡ ಒಗ್ಗಟ್ಟಾದ ಪ್ರಯತ್ನ ಕಾಂಗ್ರೆಸ್ ನಾಯಕರಲ್ಲಿ ಕಂಡು ಬರಲಿಲ್ಲ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಇಲ್ಲಿಗೆ ಬಂದು ಪ್ರಚಾರ ಮಾಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ.
ಕಿಂಗ್ ಮೇಕರ್ ಆಗುವ ನಿರೀಕ್ಷೆಯಲ್ಲಿದ್ದ ಜೆಡಿಎಸ್!
ಕಳೆದ ಬಾರಿ ಕೇವಲ ಐದು ಸ್ಥಾನದಲ್ಲಿ ಗೆದ್ದಿದ್ದ ಜೆಡಿಎಸ್ ಕಾಂಗ್ರೆಸ್ ಜೊತೆ ಸೇರಿ ಅಧಿಕಾರ ಹಿಡಿದಿತ್ತು. ಈ ಬಾರಿಯೂ ಸಹ 8-10 ಸ್ಥಾನ ಗೆದ್ದು ಕಿಂಗ್ ಮೇಕರ್ ಆಗುವ ಉಮೇದಿನಲ್ಲಿ ಜೆಡಿಎಸ್ ನಾಯಕರು ಇದ್ದರು. ಆದರೆ, ನಗರದಲ್ಲಿ ಜೆಡಿಎಸ್ ಒಟ್ಟಾರೆಯಾಗಿ ಶಿಥಿಲಗೊಂಡಿದೆ. ಮೂರು ವಾರ್ಡ್ ಗಳಲ್ಲಿ ಜೆಡಿಎಸ್ ಗೆ ಅಭ್ಯರ್ಥಿಗಳೇ ಸಿಕ್ಕಿಲ್ಲ. ಹಾಲಿ ಮೇಯರ್ ಆಗಿದ್ದ ಜೆಡಿಎಸ್ ನಾಗರಾಜ್ ಕಂಕಾರಿ ಹಾಗೂ ಚೀಟಿ ಮೂಲಕ ಆಯ್ಕೆ ಗೊಂಡ ಸತ್ಯನಾರಾಯಣ ಇಬ್ಬರೇ ಇಬ್ಬರು ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಇನ್ನುಳಿದ ಕಡೆ ತೆನೆಹೊತ್ತ ಮಹಿಳೆ ಹೀನಾಯ ಸೋಲು ಕಂಡಿದ್ದಾಳೆ.
ಬಸವನಗುಡಿ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಹೆಗ್ಡೆ 2246 ಮತಗಳ ಅಂತರ ದಿಂದ ಗೆದ್ದಿದ್ದಾರೆ. ಇದು ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ದೊರಕಿರುವ ಅತ್ಯಧಿಕ ಅಂತರ. ಮೆಲ್ಲೇಶ್ವರ ವಾರ್ಡ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಲ್ಲಾ ಬಜರಂಗದಳ ಸಂಚಾಲಕ ದೀನದಯಾಳು ಕಾಂಗ್ರೆಸ ಅಭ್ಯರ್ಥಿ ಎದುರು ಸೋತಿದ್ದಾರೆ.
ಬಿಜೆಪಿ ಗೆದ್ದಿದ್ದು ಹೇಗೆ?
ಮುಖ್ಯವಾಗಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯ ಕೆ.ಎಸ್.ಈಶ್ವರಪ್ಪ ಅವರಿಗೆ ಒಂದು ಲಕ್ಷಕ್ಕೂ ಅಧಿಕ ಮತಗಳು ದೊರಕಿದ್ದವು. ಇದೇ ಹವಾ ಪಾಲಿಕೆ ಚುನಾವಣೆಯಲ್ಲಿ ಪುನಾರವರ್ತನೆ ಆಗಿದೆ. ಬಿಜೆಪಿಯಲ್ಲಿ ಅತೀ ಹೆಚ್ಚು ಬಂಡಾಯ ಅಭ್ಯರ್ಥಿಗಳೂ ಇದ್ದರು. ಅವರನ್ನು ಮನವೊಲಿಸಿ ಕಣದಿಂದ ನಿವೃತ್ತಿಗೊಳಿಸುವಲ್ಲಿ ಹಿರಿಯ ನಾಯಕರು ಸಫಲರಾಗಿದ್ದರು. ಆದರೂ, ಕಣದಲ್ಲಿ ಇದ್ದ ಬಿಜೆಪಿ ಅಭ್ಯರ್ಥಿಗಳೂ ಗೆಲವು ಸಾಧಿಸಿದ್ದಾರೆ. ಬಿಜೆಪಿ- ಕೆಜೆಪಿ ಭಿನ್ನತೆ ಈ ಚುನಾವಣೆಯಲ್ಲಿ ಕಂಡರೂ ಕೂಡ ಅದು ಗೆಲವಿನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.
ಮುಖ್ಯವಾಗಿ ಬಿಜೆಪಿಗೆ ಬಲ ತಂದು ಕೊಟ್ಟದ್ದು ಅವರ ನಾಯಕರು ಹೇಳುವ ಪ್ರಕಾರ ಹಿಂದುತ್ವದ ಅಂಶ. ಇದರೊಂದಿಗೆ ನಾಯಕರ ಸಂಘಟಿತ ಪ್ರಯತ್ನ. ಶಾಸಕರಾದ ಕೆ.ಎಸ್.ಈಶ್ವರಪ್ಪ, ಅಶೋಕ್ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಆಯನೂರು ಮಂಜುನಾಥ ವಾರ್ಡ್ ಗಳನ್ನು ಹಂಚಿಕೊಂಡು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿದರು. ಇವುಗಳ ಜೊತೆ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಸಮ್ಮಿಶ್ರ ಸರ್ಕಾರದ ಬಗ್ಗೆ ನಗರದ ಜನತೆಗೆ ಇರುವ ತಿರಸ್ಕಾರ ಮನೋಭಾವ ಕೂಡ ಬಿಜೆಪಿ ಪರವಾಗಿ ಕೆಲಸ ಮಾಡಿದೆ. ಈ ಎಲ್ಲಾ ಕಾರಣಗಳಿಂದ ಬಿಜೆಪಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ.
ಇಷ್ಟೇ ಕಾರಣಗಳೇ?
ಮೊಟ್ಟ ಮೊದಲ ಬಾರಿಗೆ ನಡೆದ ಮಹಾನಗರ ಪಾಲಿಕೆ ಚುನಾವಣೆ ಹಲವು ಅಂಶಗಳಿಂದ ಗಮನ ಸೆಳೆಯಿತು. ಮುಖ್ಯವಾಗಿ ಈ ಬಾರಿ ಪಕ್ಷಾತೀತವಾಗಿ ಮತದಾರರನ್ನು ಕೊಳ್ಳುವ ಪ್ರಯತ್ನಗಳು ನಡೆದವು. ಈ ಕಾರಣದಿಂದ ಮತ ಖರೀದಿ ಬಗ್ಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದರೂ ಯಾವುದೇ ದೂರು ದಾಖಲಾಗಿಲ್ಲ. ಪಕ್ಷಗಳ ತತ್ವ ಸಿದ್ಧಾಂತದ ಜೊತೆ ಹಣವೂ ಈ ಭಾರಿಯ ಚುನಾವಣೆಯಲ್ಲಿ ಪ್ರಾಮುಖ್ಯಗಳಿಸಿತು. ಹಣವಿಲ್ಲದೆ ಚುನಾವಣೆ ಸಾಧ್ಯವಿಲ್ಲ ಎಂಬುದನ್ನು ದೃಢಪಡಿಸಿತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv