ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಅದರಲ್ಲೂ ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ವರುಣ ಅಬ್ಬರಿಸಲಿದ್ದಾನೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ಸೂಚನೆ ನೀಡಿದೆ.
ಈ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕ ಗವಾಸ್ಕರ್, ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಧ್ಯ ಕರ್ನಾಟಕ ಭಾಗದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಂಭವಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು ಅಲ್ಲಲ್ಲಿ ಸಾಧಾರಣ ಚದುರಿದಂತೆ ಮಳೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
Advertisement
Advertisement
ಇನ್ನು ಕಾವೇರಿಕೊಳ್ಳದ ವರ್ಷಧಾರೆಯಿಂದಾಗಿ ಕೆಆರ್‍ಎಸ್‍ಗೆ ಒಂದೇ ದಿನ 1 ಅಡಿಗೂ ಹೆಚ್ಚು ನೀರು ಬಂದಿದೆ. 124.80 ಅಡಿ ಸಾಮಥ್ರ್ಯ ಹೊಂದಿರುವ ಡ್ಯಾಮ್‍ನಲ್ಲಿ ಸದ್ಯ 107.45 ಅಡಿ ನೀರಿದ್ದು, ಒಳ ಹರಿವು 16,600 ಕ್ಯೂಸೆಕ್ ಇದ್ದು, ಹೊರಹರಿವು 3,505 ಕ್ಯೂಸೆಕ್ ಇದೆ. ಉಡುಪಿಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು ಪರಿಣಾಮ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ನದಿಗಳೆಲ್ಲಾ ಉಕ್ಕಿ ಹರಿಯುತ್ತಿವೆ. ಆಗುಂಬೆ ಘಾಟ್‍ನಲ್ಲಿ ಕುಸಿದಿದ್ದ ಗುಡ್ಡ ತೆರವು ಮಾಡಲಾಗಿದ್ದು ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಉತ್ತರ ಕನ್ನಡದ ಜಿಲ್ಲೆಯಾದ್ಯಂತ ದಾಖಲೆಯ ಮಟ್ಟದ ಮಳೆಯಾಗಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಎಚ್ಚರಿಕೆ ನೀಡಲಾಗಿದೆ. ಮೈಸೂರಿನಲ್ಲೂ ಇಂದು ಮಧ್ಯಾಹ್ನ ವೇಳೆಗೆ ಸಾಧಾರಣ ಮಳೆಯಾಗಿದೆ.