-ಕೇಂದ್ರದಿಂದ SC-ST, ಮಹಿಳೆಯರಿಗೆ 2,946 ಕೋಟಿ ಸಾಲ: ಎಂಪಿ ಕ್ಯಾ.ಚೌಟ ಶ್ಲಾಘನೆ
ನವದೆಹಲಿ: ಕೇಂದ್ರದ ಮೋದಿ ಸರ್ಕಾರವು (Modi Govt), ಎಸ್‌ಸಿ-ಎಸ್‌ಟಿ ಹಾಗೂ ಮಹಿಳಾ ಉದ್ದಿಮೆದಾರರನ್ನು ಉತ್ತೇಜಿಸುವ ಸ್ಟ್ಯಾಂಡ್ ಅಪ್ ಇಂಡಿಯಾ (Stand Up India Scheme) ಯೋಜನೆಯಡಿ ಇಡೀ ದೇಶದಲ್ಲೇ ಕರ್ನಾಟಕ (Karnataka) ರಾಜ್ಯಕ್ಕೆ ಅತೀ ಹೆಚ್ಚಿನ ಸಾಲದ ನೆರವು ನೀಡಿದೆ ಎಂದು ದಕ್ಷಿಣ ಕನ್ನಡ (Dakshina Kannada) ಸಂಸದ ಕ್ಯಾ. ಬ್ರಿಜೇಶ್ ಚೌಟ (Capt Brijesh Chowta) ಶ್ಲಾಘಿಸಿದ್ದಾರೆ.
ಈ ಕುರಿತು ಚೌಟ ಅವರು ಲೋಕಸಭೆಯಲ್ಲಿ ಕೇಳಿದ್ದ ಪ್ರಶ್ನೆಗೆ, ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ನೀಡಿರುವ ಲಿಖಿತ ಉತ್ತರದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಹಣಕಾಸು ಸಚಿವಾಲಯದ (Ministry of Finance) ಈ ಲಿಖಿತ ಪ್ರತಿಕ್ರಿಯೆಯಲ್ಲಿ, ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಹಿಂದುಳಿದ ಸಮುದಾಯಗಳನ್ನು ಸ್ವಂತ ಉದ್ಯಮ ಸ್ಥಾಪಿಸಿ, ಸ್ವಾವಲಂಬಿಯಾಗಿಸುವ ಮೂಲಕ ಯುವ ಉದ್ದಿಮೆದಾರರನ್ನು ತಯಾರಿಸುವಲ್ಲಿ ಈ ಯೋಜನೆಯಡಿ ಕರ್ನಾಟಕಕ್ಕೆ ಹೆಚ್ಚಿನ ಸಾಲದ ನೆರವನ್ನು ಕೇಂದ್ರ ಸರ್ಕಾರ (Central Govt) ನೀಡಿದೆ ಎಂದು ಉಲ್ಲೇಖಿಸಿದೆ.ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಮಳೆ ಪೀಡಿತ ಪ್ರದೇಶದ 11 ಶಾಲೆಗಳ ದುರಸ್ತಿಗೆ ಕೇಂದ್ರ ಸರ್ಕಾರದ ಅನುಮೋದನೆ
ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯು 2016ರಲ್ಲಿ ಪ್ರಾರಂಭವಾಗಿದ್ದು, ಇಲ್ಲಿಯವರೆಗೆ 16,846 ಸಾಲದ ಖಾತೆಗಳನ್ನು ತೆರೆದು ಈ ಮೂಲಕ ಒಟ್ಟು 3,750.40 ಕೋಟಿ ರೂ. ಸಾಲವನ್ನು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಡಿ ಕರ್ನಾಟಕದ ಅರ್ಹ ಫಲಾನುಭವಿಗಳು ಪಡೆದುಕೊಂಡಿದ್ದಾರೆ. ಈ ಯೋಜನೆಯಡಿ ಮಹಿಳೆಯರು ಒಳಗೊಂಡಂತೆ ಪರಿಶಿಷ್ಟ ಜಾತಿಯ ಫಲಾನುಭವಿಗಳು 3,108 ಖಾತೆಗಳನ್ನು ಹೊಂದಿದ್ದು, 661.10 ಕೋಟಿ ರೂ. ಸಾಲ ನೀಡಲಾಗಿದೆ. ಹಾಗೆಯೇ ಪರಿಶಿಷ್ಟ ಪಂಗಡದವರು 868 ಖಾತೆಗಳನ್ನು ಹೊಂದಿದ್ದು, 166.96 ಕೋಟಿ ರೂ. ಸಾಲ ಒದಗಿಸಲಾಗಿದೆ. ಇನ್ನೂ ಸಾಮಾನ್ಯ ಮಹಿಳಾ ವಿಭಾಗದಡಿ 12,870 ಸಾಲದ ಖಾತೆಯನ್ನು ಹೊಂದಿದ್ದು, 2,922.34 ಕೋಟಿ ರೂ. ಸಾಲ ನೀಡಲಾಗಿದೆ. ಈ ಮೂಲಕ ಮೋದಿ ಸರ್ಕಾರದ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗೆ ಕರ್ನಾಟಕದ ಫಲಾನುಭವಿಗಳಿಂದ ಅತೀ ಹೆಚ್ಚಿನ ಸ್ಪಂದನೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಈ ಅಭೂತಪೂರ್ವ ಸ್ಪಂದನೆಯನ್ನು ಶ್ಲಾಘಿಸಿರುವ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯು ಕರ್ನಾಟಕದಲ್ಲಿ ಸಾವಿರಾರು ಮಂದಿಯನ್ನು ಉದ್ದಿಮೆದಾರರನ್ನಾಗಿ ರೂಪಿಸುವಲ್ಲಿ ಬಹುದೊಡ್ಡ ಮಟ್ಟದಲ್ಲಿ ನೆರವಾಗಿದೆ. ಅದರಲ್ಲಿಯೂ ಶೋಷಿತ ಸಮಾಜದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಯುವ ಉದ್ದಿಮೆದಾರರನ್ನು ಕೂಡ ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡಿದೆ. ಜೊತೆಗೆ ಸ್ವಂತ ಉದ್ಯಮವನ್ನು ಕಟ್ಟಿ ಬೆಳೆಸುವುದಕ್ಕೆ ಮೋದಿ ಸರ್ಕಾರದ ಸ್ಟ್ಯಾಂಡ್ ಅಪ್ ಇಂಡಿಯಾ ದೊಡ್ಡ ಪ್ರಮಾಣದಲ್ಲಿ ಬ್ಯಾಂಕ್ ಸಾಲವನ್ನು ನೀಡಿರುವುದು ನಿಜಕ್ಕೂ ಗಮನಾರ್ಹವಾದದ್ದು. ಕೇಂದ್ರ ಸರ್ಕಾರವು ಈ ಯೋಜನೆಯಡಿ ಕರ್ನಾಟಕದ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಉದ್ದಿಮೆದಾರ ಆಕಾಂಕ್ಷಿಗಳನ್ನು ಆರ್ಥಿಕವಾಗಿ ಸೇರ್ಪಡೆಗೊಳಿಸುವಲ್ಲಿ ಭದ್ರ ಅಡಿಪಾಯವನ್ನು ಹಾಕುತ್ತಿದೆ ಎನ್ನುವುದಕ್ಕೆ ಕಳೆದ ಐದಾರು ವರ್ಷಗಳಲ್ಲಿ ನೀಡಿರುವ ಬ್ಯಾಂಕ್ ಸಾಲದ ಪ್ರಮಾಣವೇ ಸಾಕ್ಷಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯು ಸ್ವಂತ ಉದ್ದಿಮೆ ಸ್ಥಾಪಿಸುವುದಕ್ಕೆ 10 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ವಾಣಿಜ್ಯ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯವನ್ನು ಒದಗಿಸುತ್ತದೆ. ವಿಶೇಷವಾಗಿ ಉತ್ಪಾದನೆ, ಸೇವಾ ಕ್ಷೇತ್ರ, ವ್ಯಾಪಾರ ಮತ್ತು ಸಂಬಂಧಿತ ಕೃಷಿ ವಲಯಗಳಲ್ಲಿನ ಗ್ರೀನ್‌ಫೀಲ್ಡ್ ಯೋಜನೆಗಳಿಗೆ ಆರ್ಥಿಕ ಸಹಾಯ ನೀಡುತ್ತದೆ.ಇದನ್ನೂ ಓದಿ: ನಾಳೆ ದರ್ಶನ್ ಪಾಲಿಗೆ ಬಿಗ್ ಡೇ – ಸುಪ್ರೀಂ ಕೋರ್ಟ್ ತೀರ್ಪಿನತ್ತ ಚಿತ್ತ, ಮತ್ತೆ ಜೈಲುಪಾಲಾಗ್ತಾರಾ ನಟ?