– ಮಾತುಕತೆ ಮೂಲಕವೇ ಸಮಸ್ಯೆ ಇತ್ಯರ್ಥವಾಗಲಿ
ನವದೆಹಲಿ: ಕರ್ನಾಟಕ- ಕೇರಳ ಗಡಿ ಬಂದ್ ವಿವಾದವನ್ನು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಜೊತೆಗೆ ಎರಡು ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಮಾತುಕತೆ ನಡೆಸಿ ಬಗೆಹರಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಎರಡು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.
ಲಾಕ್‍ಡೌನ್ ಹಿನ್ನೆಲೆ ಹಾಗೂ ಕೊರೊನಾ ಸೋಂಕು ಹರಡಂತೆ ತಡೆಯುವ ನಿಟ್ಟಿನಲ್ಲಿ ಮುಚ್ಚಲ್ಪಟ್ಟಿರುವ ಕೇರಳ -ಕರ್ನಾಟಕ ಗಡಿಯನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಸರ್ಕಾರವು ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತು. ಇದನ್ನೂ ಓದಿ: ಮಂಗ್ಳೂರು-ಕಾಸರಗೋಡು ಗಡಿ ದಿಗ್ಬಂಧನ ತೆರವುಗೊಳಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ
Advertisement
Advertisement
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವಕೇಟ್ ಜನರಲ್ ಉದಯ್ ಹೊಳ್ಳ, ಕೊರೊನಾ ವೈರಸ್ ಭೀತಿ ಹಿನ್ನೆಲೆ ಕರ್ನಾಟಕವು ಕೇರಳ ಗಡಿ ಬಂದ್ ಮಾಡಿದೆ. ಜೊತೆಗೆ ಕೇಂದ್ರ ಸರ್ಕಾರದ ನಿರ್ದೇಶನ ಮೇರೆಗೆ ಗಡಿ ಬಂದ್ ಮಾಡಲಾಗಿದೆ. ಗಡಿ ತೆರವುಗೊಳಿಸುವುದರಿಂದ ವಾಹನಗಳ ಸಂಚಾರ ಆರಂಭವಾಗುವ ಸಾಧ್ಯತೆ ಇದೆ. ಈ ವೇಳೆ ಸೋಂಕಿತರ ಸಂಚರಿಸಲು ಆರಂಭಿಸಿದರೆ ವೈರಸ್ ಹರಡುವ ಭೀತಿ ಇದೆ. ಹೀಗಾಗಿ ಗಡಿ ತೆರವು ಸಾಧ್ಯವಿಲ್ಲ ಎಂದರು.
Advertisement
ಆದರೆ ಗಡಿ ಬಂದ್ ನಿಂದ ಕೇರಳಕ್ಕೆ ಸಂಕಷ್ಟ ಎದುರಾಗಲಿದೆ. ತುರ್ತು ಆರೋಗ್ಯ ಸೇವೆಗಳಿಗೆ ತೊಂದರೆ ಆಗಲಿದೆ. ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತು ಬರುವ ಟ್ರಕ್‍ಗಳ ಸಂಚಾರಕ್ಕೆ ಗಡಿಯಲ್ಲಿ ತೊಂದರೆಯಾಗಲಿದ್ದು, ಆಂಬುಲೆನ್ಸ್ ಮತ್ತು ಮೂಲ ಅವಶ್ಯಕತೆ ವಸ್ತುಗಳನ್ನು ಸಾಗಿರುವ ವಾಹನಗಳ ಸಂಚಾರಕ್ಕೆ ತೊಂದರೆ ಆಗಲಿದೆ ಎಂದು ಕೇರಳ ವಾದ ಮಂಡಿಸಿತು.
Advertisement
ಎರಡು ಬದಿಯ ವಾದ ಆಲಿಸಿದ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರ, ಕರ್ನಾಟಕ ಮತ್ತು ಕೇರಳ ರಾಜ್ಯ ಸರ್ಕಾರಗಳಿಗೆ ಮತ್ತಷ್ಟು ಮಾಹಿತಿ ಕೋರಿ ನೋಟಿಸ್ ನೀಡಿ ಎಪ್ರೀಲ್ ಏಳಕ್ಕೆ ವಿಚಾರಣೆ ಮುಂದೂಡಿಕೆ ಮಾಡಿತು. ಈ ವೇಳೆ ಏಪ್ರಿಲ್ 7ರವರೆಗೂ ಗಡಿ ತೆರವು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.
ಆರೋಗ್ಯ ಸಂಬಂಧಿ ತುರ್ತು ಪರಿಸ್ಥಿತಿಗಳಿದ್ದರೇ ಎರಡು ಸರ್ಕಾರದ ಕಾರ್ಯದರ್ಶಿಗಳ ಮಾತುಕತೆ ಮೇಲೆ ಕ್ರಮ ತೆಗೆದುಕೊಳ್ಳಬಹುದು ಮತ್ತು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಜೊತೆಗೆ ಮಾತುಕತೆ ಮೂಲಕವೂ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.