ಹಾವೇರಿ: ಸಹಾಯಕ ಪ್ರಾಧ್ಯಾಪಕಿಯೊಬ್ಬರ ಮೇಲೆ ಮೌಲ್ಯಮಾಪನ ಕುಲಸಚಿವ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದ ವಿಚಾರಣೆ ನಡೆಸಬೇಕಿದ್ದ ಮಹಿಳಾ ದೌರ್ಜನ್ಯ ತಡೆ ಸಮಿತಿ ಸದಸ್ಯರು ಕಿತ್ತಾಡಿಕೊಂಡಿರುವ ಘಟನೆ ಜಿಲ್ಲೆಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೊಟಗೋಡಿ ಗ್ರಾಮದ ಬಳಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿಗೆ ಮೌಲ್ಯಮಾಪನ ಕುಲಸಚಿವ ಡಾ.ಎಂ.ಎನ್.ವೆಂಕಟೇಶ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತಾಗಿ ಜನವರಿ 26ರಂದು ವಿಚಾರಣೆ ನಡೆಸಲು ವಿವಿಯ ಮಹಿಳಾ ದೌರ್ಜನ್ಯ ತಡೆ ಸಮಿತಿ ಸದಸ್ಯರು ಸೇರಿದ್ದರು. ಈ ವೇಳೆ ಸಭೆಗೆ ವಿಶ್ವವಿದ್ಯಾಲಯ ಸದಸ್ಯರನ್ನು ಹೊರತುಪಡಿಸಿ ಎನ್.ಜಿ.ಓ ದ ಸದಸ್ಯೆಯೊಬ್ಬರು ಬಂದಿದ್ದರು. ಆಗ ಎನ್.ಜಿ.ಓ ದ ಸದಸ್ಯೆ ಹಾಜರಿಗೆ ಸಮಿತಿ ಸದಸ್ಯರು ಹಾಗೂ ವಿವಿಯ ಸಹಾಯಕ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮೀ ಆಕ್ಷೇಪ ವ್ಯಕ್ತಪಡಿಸಿ ಪರಸ್ಪರ ಕಿತ್ತಾಟ ಮಾಡಿದ್ದಾರೆ.
ಸಭೆ ನಡೆಸಲು ಬಂದಿದ್ದ ಸದಸ್ಯರಿಗೆ ಇಂದು ರಜಾ ದಿನ, ಅಧಿಕಾರಿಗಳು ಇದ್ದಾಗ ಬನ್ನಿ ಎಂದು ಸಹಾಯಕ ಕುಲಸಚಿವ ಶಹಜಹಾನ್ ಮುದಕವಿ ಕೊಠಡಿಯಿಂದ ಹೊರಗೆ ಕಳಿಸಿದ್ದರು. ಈ ವೇಳೆ ಡಾ.ವಿಜಯಲಕ್ಷ್ಮಿ ಮತ್ತು ಸಮಿತಿಯ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸ್ ಠಾಣೆಯ ಮೆಟ್ಟಿಲೇರುವವರೆಗೆ ಸದಸ್ಯೆಯರ ಕಿತ್ತಾಟ ಮುಂದುವರಿದಿತ್ತು. ಪ್ರಕರಣದ ಬಗ್ಗೆ ಮಾತನಾಡುವಾಗ ಅವಾಚ್ಯ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆಂದು ಡಾ.ವಿಜಯಲಕ್ಷ್ಮಿ ಸಮಿತಿ ಅಧ್ಯಕ್ಷೆ ಡಾ.ಭಾರತಿ ಮರವಂತೆ ಮತ್ತು ಎನ್.ಜಿ.ಓ ದ ಅನಸೂಯಾ ಬಳಿಗಾರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ಸಮಿತಿ ಸದಸ್ಯರಲ್ಲವಾದರೂ ವಿವಿಯಲ್ಲಿ ಸಭೆಗೆ ಬಂದಿದ್ದಕ್ಕೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆಂದು ಸಹಾಯಕ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮಿ ಮತ್ತು ಸಹಾಯಕ ಕುಲಸಚಿವ ಶಹಜಹಾನ್ ವಿರುದ್ಧ ಪ್ರತಿದೂರನ್ನು ಅನಸೂಯಾ ಅವರು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv