ಗುಜರಾತ್‌ನಿಂದ ಕರ್ನಾಟಕಕ್ಕೆ 3 ಶತಕೋಟಿ ಡಾಲರ್‌ ಹೂಡಿಕೆಯ ಚಿಪ್‌ ಘಟಕ ಶಿಫ್ಟ್‌?

Public TV
2 Min Read
semiconductor

– ಐಎಸ್‌ಎಂಸಿ ಡಿಜಿಟಲ್‌ ಫ್ಯಾಬ್‌ ಜೊತೆ ಮಾತುಕತೆ
– ನೀರು ಹೆಚ್ಚಿರುವ ಮೈಸೂರು ಜಿಲ್ಲೆಯಲ್ಲಿ ಘಟಕ ಸ್ಥಾಪನೆಗೆ ಆಸಕ್ತಿ

ಬೆಂಗಳೂರು: ಎಲ್ಲ ಮಾತುಕತೆಗಳು ಫಲಪ್ರದವಾದರೆ ಇಂಟೆಲ್‌ ಕಂಪನಿಯ ಚಿಪ್‌ ತಯಾರಕ ಘಟಕ ಕರ್ನಾಟಕದಲ್ಲಿ ಸ್ಥಾಪನೆಯಾಗಲಿದೆ.

ಸೆಮಿಕಂಡಕ್ಟರ್‌ ಉತ್ಪಾದನೆ ಸಂಬಂಧ ಕೇಂದ್ರ ಸರ್ಕಾರ 10 ಶತಕೋಟಿ ಡಾಲರ್‌ ಮೌಲ್ಯದ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್ಐ) ಯೋಜನೆಗೆ  ಐಎಸ್‌ಎಂಸಿ ಡಿಜಿಟಲ್‌ ಫ್ಯಾಬ್‌ ಆಯ್ಕೆಯಾಗಿದೆ. ಆರಂಭದಲ್ಲಿ ಗುಜರಾತ್‌ನ ಧೋಲೇರಾದಲ್ಲಿ 3 ಶತಕೋಟಿ ಡಾಲರ್‌(23 ಸಾವಿರ ಕೋಟಿ ರೂ.) ಹೂಡಿಕೆ ಮಾಡಲು ಈ ಕಂಪನಿ ಮುಂದಾಗಿತ್ತು. ಆದರೆ ಈಗ ರಾಜ್ಯದ ಮೈಸೂರಿನಲ್ಲಿ ಘಟಕ ತೆರೆಯಲು ಕಂಪನಿ ಆಸಕ್ತಿ ತೋರಿಸಿದೆ ಎಂದು ವರದಿಯಾಗಿದೆ.

semiconductor chips

ನೀರಿನ ಲಭ್ಯತೆ ಇರುವ ಕಾಣ ಮೈಸೂರಿನಲ್ಲಿ ಘಟಕ ತೆರೆಯುವ ಸಂಬಂಧ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಸೆಮಿಕಂಡಕ್ಟರ್‌ ಘಟಕ ಸ್ಥಾಪಿಸಿದರೆ ದೀರ್ಘಾವಧಿಯಲ್ಲಿ ರಾಜ್ಯಕ್ಕೆ ಲಾಭವಾಗುವುದರಿಂದ ಕರ್ನಾಟಕವೂ ಉತ್ಸಾಹ ತೋರಿಸಿದೆ.

ನೆಕ್ಷ್ಟ್‌ಆರ್ಬಿಟ್‌ ಮತ್ತು ಸೆಮಿಕಂಡಕ್ಟರ್‌ ಟೆಕ್ನಾಲಜಿ ಕಂಪನಿ ಟವರ್‌ ಸೆಮಿಕಂಡಕ್ಟರ್‌ ಕಂಪನಿ ಐಎಸ್‌ಎಂಸಿ ಡಿಜಿಟಲ್‌ ಸ್ಥಾಪಿಸಿತ್ತು. ಈ ಐಎಸ್‌ಎಂಸಿಯನ್ನು 5.4 ಶತಕೋಟಿ ಡಾಲರ್‌ ನೀಡಿ ಇಂಟೆಲ್‌ ಕಂಪನಿ ಇತ್ತೀಚೆಗೆ ಖರೀದಿಸಿದೆ.

ಭಾರತದ ಸರ್ಕಾರದ ಪಿಎಲ್ಐ ಅಡಿ ಐಎಸ್‌ಎಂಸಿ ಡಿಜಿಟಲ್‌ ಫ್ಯಾಬ್‌ ಅಲ್ಲದೇ  ವೇದಾಂತ-ಫಾಕ್ಸ್‌ಕಾನ್‌ ಮತ್ತು ಸಿಂಗಾಪೂರ ಮೂಲದ ಐಜಿಎಸ್‌ಎಸ್‌ ಆಯ್ಕೆಯಾಗಿವೆ. ಚಿಪ್‌ ತಯಾರಿಕಾ ಘಟಕ ಸ್ಥಾಪನೆ ಸಂಬಂಧ ರಾಜ್ಯ ರಾಜ್ಯಗಳ ಮಧ್ಯೆ ಆರೋಗ್ಯಕರ ಸ್ಪರ್ಧೆ ಇದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌ ಸಚಿವಾಲಯದ ಸೆಮಿಕಂಡಕ್ಟರ್‌ ಸಲಹಾ ಸಮಿತಿಯ ಸದಸ್ಯರು ತಿಳಿಸಿದ್ದಾರೆ.

intel

ಐಎಸ್‌ಎಂಸಿಯ ಹೂಡಿಕೆ ಪ್ರಸ್ತಾವನೆಯನ್ನು ಬೊಮ್ಮಾಯಿ ನೇತೃತ್ವದ ಕರ್ನಾಟಕದ ಉನ್ನತ ಮಟ್ಟದ ಸಮಿತಿ ಇನ್ನೂ ಅನುಮೋದನೆ ನೀಡಿಲ್ಲ. 500 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆ ಪ್ರಸ್ತಾವನೆಗಳನ್ನು ಈ ಸಮಿತಿ ಅನುಮೋದಿಸುತ್ತದೆ.

ಏಪ್ರಿಲ್‌ 29 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ Semicon ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಚಿಪ್‌ ಕ್ಷೇತ್ರದ ದಿಗ್ಗಜ ಕಂಪನಿಗಳು ಭಾಗಿಯಾಗಲಿದೆ.  ಇದನ್ನೂ ಓದಿ: ಸೆಮಿಕಂಡಕ್ಟರ್ ಉತ್ಪಾದನೆಗೆ 76,000 ಕೋಟಿ – ಕೇಂದ್ರ ಸಂಪುಟ ಅನುಮೋದನೆ

semiconductor 1 1

ಪ್ರಸ್ತುತ ವಿಶ್ವದ ಚಿಪ್‌ ಮಾರುಕಟ್ಟೆಯಲ್ಲಿ ಚೀನಾ ಮತ್ತು ತೈವಾನ್‌ ಕಂಪನಿಗಳೇ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ. ಭಾರತವನ್ನು ಚಿಪ್‌, ಮೊಬೈಲ್‌ ಉತ್ಪಾದನಾ ಹಬ್‌ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್ಐ) ಯೋಜನೆಯನ್ನು ಆರಂಭಿಸಿದೆ. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಿಎಲ್‌ಐ ಯೋಜನೆ ಅಡಿ ಲಾಭ ಪಡೆದುಕೊಳ್ಳಲು ದೇಶದ ಹಲವು ಕಂಪನಿಗಳು ಆಯ್ಕೆಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *