ಕೆಜಿಎಫ್‌ನಲ್ಲಿ ಕೈಗಾರಿಕಾ ಕಾರಿಡಾರ್: ಉನ್ನತ ಪ್ರಾಧಿಕಾರಕ್ಕೆ ಸಚಿವ ಎಂ.ಬಿ ಪಾಟೀಲ್ ಕೋರಿಕೆ

Public TV
2 Min Read
MB Patil

ಬೆಂಗಳೂರು: ಕೆಜಿಎಫ್‌ನಲ್ಲಿ ಬಿಇಎಂಎಲ್ ಗೆ ಸೇರಿದ 3,600 ಎಕರೆ ಜಾಗದಲ್ಲಿ ಕೈಗಾರಿಕಾ ಕಾರಿಡಾರ್ (Industrial Corridor) ನಿರ್ಮಿಸುವ ಬಗ್ಗೆ ಪರಿಗಣಿಸಬೇಕು ಎಂದು ರಾಜ್ಯದ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌ (MB Patil) ಅವರು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಉನ್ನತ ಪ್ರಾಧಿಕಾರವನ್ನು ಮಂಗಳವಾರ
ಕೋರಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಮತ್ತು ಅನುಷ್ಠಾನ ಟ್ರಸ್ಟ್ ನ (NICDIT) ಉನ್ನತಮಟ್ಟದ ಮೇಲ್ವಿಚಾರಣಾ ಪ್ರಾಧಿಕಾರದ ಸಭೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡು ಮಾತನಾಡಿದ ಸಂದರ್ಭದಲ್ಲಿ ಈ ಮನವಿ ಮಾಡಿದರು.

ಶೀಘ್ರವೇ ಈ ಸಂಬಂಧ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರವು ಪ್ರಸ್ತಾವ ಸಲ್ಲಿಸಲಿದೆ. ಈ ಕಾರ್ಯಯೋಜನೆ ಜಾರಿಯಾದರೆ ಇದು ಚೆನ್ನೈ- ಬೆಂಗಳೂರು (Chennai-Bengaluru) ಕೈಗಾರಿಕಾ ಕಾರಿಡಾರ್ ಪ್ರಮುಖ ವಲಯಗಳಲ್ಲಿ ಒಂದಾಗುವ ಜೊತೆಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದನ್ನೂ ಓದಿ: 10 ಕೆಜಿ ಉಚಿತ ಅಕ್ಕಿ – ಸರ್ಕಾರದ ಲೆಕ್ಕಾಚಾರ ಏನು?

ಪಾಟೀಲ್ ಅವರು ಮಾಡಿದ ಈ ಪ್ರಸ್ತಾಪಕ್ಕೆ ಸಭೆಯಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ ಅವರು ಇದಕ್ಕೆ ಸಂಬಂಧಿಸಿದ ವಿವರಗಳೊಂದಿಗೆ ಪ್ರಸ್ತಾವ ಸಲ್ಲಿಸುವಂತೆ ಸಭೆಯಲ್ಲಿದ್ದ ಕೇಂದ್ರ ಸಚಿವರು ಪಾಟೀಲ್ ಅವರಿಗೆ ಸೂಚಿಸಿದರು.

 

ಚೆನ್ನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ತುಮಕೂರು ನೋಡ್ ಬಗ್ಗೆ ತಿಳಿಸಿ, ಇಲ್ಲಿ 1,736 ಎಕರೆ ವಿಸ್ತೀರ್ಣದಲ್ಲಿ ಮೊದಲ ಹಂತದಲ್ಲಿನ ಅಭಿವೃದ್ಧಿ ಕೆಲಸಗಳನ್ನು ಎಲ್ ಅಂಡ್ ಟಿ ಸಂಸ್ಥೆಗೆ ಗುತ್ತಿಗೆ ವಹಿಸಲಾಗಿದೆ. ಇದಕ್ಕಾಗಿ 948 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದರು.

ಬೆಂಗಳೂರು-ಮುಂಬೈ (Bengaluru-Mumbai) ಕೈಗಾರಿಕಾ ಕಾರಿಡಾರ್ ಧಾರವಾಡ ನೋಡ್ ಬಗ್ಗೆ ಮಾತನಾಡಿ, 6,042 ಎಕರೆ ಜಾಗಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಈ ಪೈಕಿ, 2000 ಎಕರೆ ಜಾಗಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಪಾಟೀಲ್ ವಿವರಿಸಿದರು.

 

ಈ ಮೇಲಿನ ಯೋಜನೆಗಳಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಲು ಸರ್ಕಾರ ಒತ್ತು ನೀಡಲಿದೆ ಎಂದು ಹೇಳಿದರು. ಇದನ್ನೂ ಓದಿ: ಕೂದಲು ಹಿಡಿದು ತಲಾಖ್‌ ಕೊಟ್ಟ, ಹೋಗಿ ಸಾಯಿ ಎಂದ: ಕಣ್ಣೀರಿಟ್ಟ ಮಂಗಳೂರಿನ ಮಹಿಳೆ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್, ಕೇಂದ್ರ ಬಂದರು ಸಚಿವ ಸರಬಾನಂದ ಸೋನೋವಾಲ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೈಗಾರಿಕಾ ಸಚಿವರು ಸಭೆಯಲ್ಲಿ ಭಾಗವಹಿಸಿದ್ದರು.

ಕರ್ನಾಟಕ ಸರ್ಕಾರದ ಪರವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಮತ್ತಿತರ ಉನ್ನತ ಅಧಿಕಾರಿಗಳು ವರ್ಚ್ಯುಯಲ್ ಸಭೆಯಲ್ಲಿ ಪಾಲ್ಗೊಂಡಿದ್ದರು.

Share This Article