ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಎಫ್‌ಐಆರ್‌ಗೆ (FIR) ಹೈಕೋರ್ಟ್ (High Court) ತಡೆ ನೀಡಿದೆ.
ಪ್ರಕರಣ ರದ್ದು ಮಾಡುವಂತೆ ಬಿ.ವೈ.ವಿಜಯೇಂದ್ರ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಎಫ್‌ಐಆರ್‌ಗೆ ತಡೆ ನೀಡಿ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿತು.
ಏನಿದು ಪ್ರಕರಣ?
ಮೀಸಲಾತಿಗೆ ಸಂಬಂಧಿಸಿದಂತೆ ವಿಡಿಯೊ ತುಣುಕನ್ನು ಬಿಜೆಪಿ ರಾಜ್ಯ ಘಟಕದ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ದ್ವೇಷ ಸೃಷ್ಟಿಸಲು ಯತ್ನಿಸಿದ್ದ ಆರೋಪದ ಮೇಲೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಮತ್ತು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ದೂರು ನೀಡಿದ್ದರು.
ಜನ ಪ್ರತಿನಿಧಿಗಳ ಕಾಯ್ದೆ ಹಾಗೂ ಸೆಕ್ಷನ್ 505 (2) (ವರ್ಗಗಳ ನಡುವೆ ದ್ವೇಷ, ದ್ವೇಷ ಅಥವಾ ದುಶ್ಚಟವನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು) ಅಡಿಯಲ್ಲಿ ಮೂವರು ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ‘ಕರಿಯಾ’ ಚಿತ್ರ ರೀ-ರಿಲೀಸ್ ವೇಳೆ ದರ್ಶನ್ ಪುಂಡಾಭಿಮಾನಿಗಳಿಗೆ ಖಾಕಿ ವಾರ್ನಿಂಗ್
ವಿಡಿಯೋದಲ್ಲಿ ಏನಿತ್ತು?
ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳನ್ನು ಮೊಟ್ಟೆಗಳೆಂದು ಬಿಂಬಿಸಿ, ಆ ಮೊಟ್ಟೆಗಳಿರುವ ಬುಟ್ಟಿಗೆ ಮುಸ್ಲಿಂ ಮೊಟ್ಟೆಯನ್ನು ರಾಹುಲ್ ಗಾಂಧಿ (Rahul Gandhi) ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಂದಿಡುವಂತೆ ತೋರಿಸಲಾಗಿತ್ತು. ಮರಿಯಾದ ಬಳಿಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮರಿಗಳಿಗೆ ಸೇರಬೇಕಾದ ಅನುದಾನವನ್ನು ಮುಸ್ಲಿಂ ಮರಿಗಳಿಗೆ ಮಾತ್ರ ನೀಡಲಾಗುತ್ತದೆ ಎಂದು ಬಿಂಬಿಸುವ ವಿಡಿಯೋ ತುಣಕು ಇರುವ ಪೋಸ್ಟ್ ಅನ್ನು ಬಿಜೆಪಿ ಅಪ್ಲೋಡ್ ಮಾಡಿತ್ತು.