ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಅವರಿಗೆ ಹೈ ಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಖಲಿಸಿದ್ದ ಎಫ್‍ಐಆರ್ ಗೆ ತಡೆಯಾಜ್ಞೆ ನೀಡಿದೆ.
ಎಫ್‍ಐಆರ್ ರದ್ದು ಕೋರಿ ಆರ್.ಅಶೋಕ್ ಹೈಕೋರ್ಟ್ ಮೊರೆ ಹೋಗಿದ್ದರು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಆರ್.ಬಿ.ಬೂದಿಹಾಳ್ ಅವರಿದ್ದ ನ್ಯಾಯಪೀಠ ಎಫ್‍ಐಆರ್ ಗೆ ತಡೆ ನೀಡಿ ಆದೇಶ ಪ್ರಕಟಿಸಿದರು.
ಅಶೋಕ್ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ, ಚುನಾವಣೆ ಹತ್ತಿರ ಬರುವ ಸಂದರ್ಭದಲ್ಲಿ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಸುಳ್ಳು ದೂರು ದಾಖಲಿಸಲಾಗಿದೆ. ಈಗಾಗಲೇ ಲೋಕಾಯುಕ್ತ ತನಿಖೆ ನಡೆಯುತ್ತಿದ್ದು, ಒಂದೇ ಆರೋಪಗಳ ಮೇಲೆ ದೂರು ದಾಖಲಿಸಲಾಗಿದೆ ಎಂದು ವಾದಿಸಿದ್ದರು.
ಎಸಿಬಿ ಪರ ವಕೀಲ ಎನ್. ಜಗದೀಶ್ ಅವರು, 3 ವರ್ಷದ ಮಕ್ಕಳಿಗೂ ವ್ಯವಸಾಯಗಾರರೆಂದು ಜಮೀನು ಹಂಚಿಕೆ ಮಾಡಲಾಗಿದೆ. ಅರ್ಜಿ ಸಲ್ಲಿಸದೇ ಇದ್ದರೂ ಅಕ್ರಮವಾಗಿ ಜಮೀನು ಹಂಚಿಕೆ ಮಾಡಲಾಗಿದೆ. ಅರ್ಜಿದಾರರು ತಪ್ಪು ಮಾಡದೇ ಇದ್ದರೆ ಎಫ್‍ಐಆರ್ ಗೆ ತಡೆ ಕೋರಿ ಅರ್ಜಿ ಸಲ್ಲಿಸುತ್ತಿರಲಿಲ್ಲ. ಒಂದು ವೇಳೆ ತಡೆ ನೀಡಿದರೆ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆಯಿದೆ ಎಂದು ಆಕ್ಷೇಪಣೆ ಸಲ್ಲಿಸಿದ್ದರು.
ಏನಿದು ಪ್ರಕರಣ?
ಬೆಂಗಳೂರು ದಕ್ಷಿಣ ತಾಲೂಕು ಬಗರ್ ಹುಕುಂ ಸಾಗುವಳಿ ಜಮೀನು ಸಕ್ರಮ ಸಮಿತಿ ಅಧ್ಯಕ್ಷರಾಗಿದ್ದ ಆರ್.ಅಶೋಕ್ ಸೇರಿದಂತೆ ಹತ್ತು ಜನರ ವಿರುದ್ಧ ಎಸಿಬಿ ಎಫ್‍ಐಆರ್ ದಾಖಲಿಸಿತ್ತು. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಕಲಂ 13(1)(ಸಿ), 13(1)(ಡಿ) ಜತೆಗೆ 13(2) ಹಾಗೂ ಐಪಿಸಿ ಕಲಂ 420 ಹಾಗೂ 120 (ಬಿ) ಅನ್ವಯ ಎಫ್‍ಐಆರ್ ದಾಖಲಾಗಿದೆ.
1998ರಿಂದ 2006ರ ಅವಧಿಯಲ್ಲಿಬೆಂಗಳೂರು ದಕ್ಷಿಣ ತಾಲೂಕಿನ ಭೂ ಸಕ್ರಮ ಸಮಿತಿ ಅಧ್ಯಕ್ಷ ಮತ್ತು ಉತ್ತರಹಳ್ಳಿ ಕ್ಷೇತ್ರದ ಅಂದಿನ ಶಾಸಕ ಆರ್.ಅಶೋಕ್ ಇತರೆ ಸರ್ಕಾರಿ ನೌಕರರು ಹಾಗೂ ಅಕ್ರಮ ಫಲಾನುಭವಿಗಳನ್ನು ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಉಲ್ಲೇಖಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ತಾಲೂಕು ಹಿಂದಿನ ತಹಸೀಲ್ದಾರ್ ರಾಮಚಂದ್ರಯ್ಯ, ಹೆಮ್ಮಿಗೆಪುರ ವೃತ್ತದ ಹಿಂದಿನ ಕಂದಾಯ ನಿರೀಕ್ಷಕ ಗವಿಗೌಡ, ನೆಲಗುಳಿ ವೃತ್ತದ ಕಂದಾಯ ನಿರೀಕ್ಷಕ ಚೌಡರೆಡ್ಡಿ ಮತ್ತು ಅಗರ ಗ್ರಾಮದ ಗ್ರಾಮ ಲೆಕ್ಕಿಗ ಶಶಿಧರ್ ಅವರನ್ನು ಎಸಿಬಿ ಬಂಧಿಸಿತ್ತು. ಆರ್.ಅಶೋಕ್ ಎಫ್‍ಐಆರ್ ನಲ್ಲಿ ಮೊದಲನೇ ಆರೋಪಿಯಾಗಿದ್ದರೆ ಬಂಧಿತ ನಾಲ್ವರು ಕ್ರಮವಾಗಿ 2, 3, 4 ಮತ್ತು ಐದನೇ ಆರೋಪಿಗಳಾಗಿದ್ದಾರೆ.