ಬೆಂಗಳೂರು: ಖಾಸಗಿ ಆಸ್ಪತ್ರೆಗಳ ವೈದ್ಯರು ತಕ್ಷಣವೇ ಮುಷ್ಕರವನ್ನು ಕೈಬಿಟ್ಟು ಸೇವೆಗೆ ಹಾಜರಾಗುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸಿದೆ.
ವೈದ್ಯರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ವಕೀಲರಾದ ಎನ್.ಪಿ.ಅಮೃತೇಶ್, ಜಿ.ಆರ್.ಮೋಹನ್ ಹಾಗೂ ಆದಿನಾರಾಯಣ ಎಂಬುವರು ಸಲ್ಲಿಸಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಶುಕ್ರವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
Advertisement
ಜನಸಾಮಾನ್ಯರು ಕೂಡ ಅನ್ಯಾಯ ಆದರೆ ಕೋರ್ಟ್‍ಗೆ ಬರುತ್ತಾರೆ. ಆದರೆ ಬುದ್ಧಿವಂತರಾದ ನಿಮಗೆ ಸಾಮಾನ್ಯ ಜ್ಞಾನ ಇಲ್ಲವೇ? ಒಂದು ವೇಳೆ ಅನ್ಯಾಯ ಆದರೆ ನ್ಯಾಯಾಲಯಕ್ಕೆ ಬನ್ನಿ. ಅದನ್ನು ಬಿಟ್ಟು ಆಸ್ಪತ್ರೆಗಳನ್ನು ಮುಚ್ಚಿ ಪ್ರತಿಭಟನೆ ಮಾಡುವುದು ಎಷ್ಟು ಸರಿ ಎಂದು ನ್ಯಾ. ಎಚ್.ಜಿ ರಮೇಶ್ ವೈದ್ಯರ ಪರ ವಕೀಲ ಬಸವರಾಜ್ ಅವರಿಗೆ ಪ್ರಶ್ನೆ ಮಾಡಿದರು.
Advertisement
ಒಂದು ಬಾರಿ ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ ಆದರೆ ಅದೇ ಅಂತಿಮ ಎಂದು ತಿಳಿದುಕೊಂಡಿದ್ದಾರಾ? ಎಲ್ಲರೂ ಅನ್ಯಾಯ ಆಗಿದೆ ಎಂದು ಖಂಡಿಸಿ ಬೀದಿಗಿಳಿದು ಪ್ರತಿಭಟನೆ ಮಾಡಲು ಶುರುಮಾಡಿದರೆ ಕೋರ್ಟ್ ಗಳು ಇರವುದು ಏನಕ್ಕೆ? ವಕೀಲರು ಯಾಕೆ ಬೇಕು ಎಂದು ಖಾರವಾಗಿಯೇ ಪ್ರಶ್ನಿಸಿದರು.
Advertisement
ವೈದ್ಯರು ಸಮಾಜದ ಉನ್ನತ ವರ್ಗದಲ್ಲಿ ಇರುವವರು. ಇವರೇ ಈ ರೀತಿ ಮಾಡಿದರೆ ರಾಜ್ಯದಲ್ಲಿ ಆಗಿರುವ ಸಾವಿಗೆ ಹೊಣೆ ಯಾರು ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು ಗುರುವಾರ ನಮ್ಮ ಮನವಿಯನ್ನು ನೀವು ಪರಿಗಣಿಸಬಹುದು ಎಂದು ಭಾವಿದ್ದೆವು. ಆದರೆ ಈಗ ನಾವು ಆದೇಶ ಮಾಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿ ಚಾಟಿ ಬೀಸಿದರು.
Advertisement
ಮಸೂದೆ ಮಂಡನೆಯಾಗುವ ಮುನ್ನವೇ ಬೀದಿಗಿಳಿಯುವುದು ಎಷ್ಟು ಸರಿ? ಜನರ ಜೀವಗಳ ಜೊತೆ ಚೆಲ್ಲಾಟ ಆಡುತ್ತಿರುವ ನೀವು ನಾಗರಿಕರೆ? ನಿಮ್ಮ ಬಗ್ಗೆ ನಮಗೆ ಗೌರವ ಇದೆ ಅದನ್ನು ಉಳಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ಮುಷ್ಕರದ ಬಗ್ಗೆ ಅವರ ನಿಲುವೇನು? ನಿಮ್ಮ ಮುಖ್ಯಮಂತ್ರಿಗಳ ಬಳಿ ಈಗಲೇ ಫೋನ್ ಮಾಡಿ ಮಾತನಾಡಿ ಬನ್ನಿ ಎಂದು ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್ ಅವರಿಗೆ ಪೀಠ ಆದೇಶಿಸಿತು. ಫೋನ್ ಮಾಡಿದ ಬಳಿಕ ಕಲಾಪಕ್ಕೆ ಹಾಜರಾದ ಅಡ್ವೋಕೇಟ್ ಜನರಲ್ ನನ್ನ ಕರೆಯನ್ನು ಸ್ವೀಕರಿಸುತ್ತಿಲ್ಲ. ಮುಖ್ಯಮಂತ್ರಿಗಳು ಈಗ ಸಭೆಯಲ್ಲಿದ್ದಾರೆ ಎಂದು ತಿಳಿಸಿದರು.
ಕೊನೆಗೆ ನ್ಯಾಯಮೂರ್ತಿಗಳು, ಮುಷ್ಕರ ಕೈಬಿಟ್ಟು ಸೇವೆಗೆ ಕೂಡಲೇ ವೈದ್ಯರು ಹಾಜರಾಗಬೇಕು. ಯಾವುದೇ ಸಮಸ್ಯೆಗಳಿದ್ದರೂ ನ್ಯಾಯಾಲಯದ ಮುಂದೆ ಬನ್ನಿ. ಒಂದು ವೇಳೆ ನಮ್ಮ ಆದೇಶವನ್ನು ಉಲ್ಲಂಘಿಸಿದ್ದೆ ಆದಲ್ಲಿ ಮುಂದೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಾಸಗಿ ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಿ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದರು.
ಇದನ್ನೂ ಓದಿ: ಖಾಸಗಿ ವೈದ್ಯರ ಜೊತೆಗಿನ ಸಿಎಂ ಸಂಧಾನ ಸಭೆ ಯಶಸ್ವಿಯಾಗಿದ್ದು ಹೇಗೆ?