ಬೆಂಗಳೂರು: ಮೈಸೂರು ದಸರಾ (Mysuru Dasara) ಉದ್ಘಾಟನೆಗೆ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ (Banu Mushtaq) ಆಯ್ಕೆ ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ರಾಜ್ಯ ಹೈಕೋರ್ಟ್ (High Court) ವಜಾಗೊಳಿಸಿದೆ.
ಪ್ರತಾಪ್ ಸಿಂಹ ಸೇರಿದಂತೆ ಮೂವರು ಸಲ್ಲಿಸಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ ಜೋಶಿ ನೇತೃತ್ವದ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರ ಆಯೋಜಿಸುವ ಕಾರ್ಯಕ್ರಮದಲ್ಲಿ ಭಿನ್ನ ಧರ್ಮದ ವ್ಯಕ್ತಿ ಭಾಗಿಯಾಗುವುದು, ಅರ್ಜಿದಾರರ ಯಾವುದೇ ಕಾನೂನು ಅಥವಾ ಸಾಂವಿಧಾನಿಕ ಹಕ್ಕನ್ನು ಹೇಗೆ ಉಲ್ಲಂಘಿಸುತ್ತದೆ? ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳಿಗೆ ವಿರುದ್ಧ ಹೇಗೆ ಎಂಬುದನ್ನು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲವಾಗಿದ್ದಾರೆ ಎಂದು ಅಭಿಪ್ರಾಯಪಟ್ಟು ಅರ್ಜಿಗಳನ್ನು ವಜಾಗೊಳಿಸಿತು.
ಪ್ರತಾಪ್ ಸಿಂಹ ಪರ ವಕೀಲ ಎಸ್ ಸುದರ್ಶನ್ ವಾದ ಮಂಡಿಸಿದರೆ ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದಿಸಿದರು.
ಪ್ರತಾಪ್ ಸಿಂಹ ವಕೀಲರ ವಾದ ಏನು?
ಬಾನು ಮುಷ್ತಾಕ್ ಹಿಂದೂ ಸಂಪ್ರದಾಯ ವಿರೋಧಿ ಮತ್ತು ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ. ದಸರಾ ಉದ್ಘಾಟನೆಗೆ ಆಯ್ಕೆಯಾದವರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುವುದು ಶಿಷ್ಟಾಚಾರ. ಇದನ್ನು ಪಾಲಿಸಲಾಗಿಲ್ಲ. ಬಾನು ಮುಷ್ತಾಕ್‌ಗೆ ಅರಿಶಿಣ-ಕುಂಕುಮದ ಮೇಲೆ ನಂಬಿಕೆ ಇಲ್ಲ. ದಸರಾ ಹಿಂದೂ ಹಬ್ಬವಾಗಿದ್ದು, ಜಾತ್ಯತೀತ ಹಬ್ಬವಲ್ಲ
ಸರ್ಕಾರದ ವಾದ ಏನು?
ಪ್ರತಾಪ್ ಸಂಸದರಾಗಿದ್ದಾಗ ನಿಸಾರ್ ಅಹ್ಮದ್ ದಸರಾ ಉದ್ಘಾಟಿಸಿದ್ದರು. ಬಾನು ಮುಷ್ತಾಕ್ ಬುಕರ್ ಪ್ರಶಸ್ತಿ ಪುರಸ್ಕೃತರಾಗಿದ್ದು ಆಹ್ವಾನಿಸಲಾಗಿದೆ. ನಿಸಾರ್ ಅಹ್ಮದ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದಾಗ ಪ್ರತಾಪ್ ಸಿಂಹ ಈ ವಿಚಾರ ಎತ್ತಿಲ್ಲ.
ಇದು ರಾಜ್ಯದ ಹಬ್ಬವಾಗಿದ್ದು, ಸರ್ಕಾರದ ನಿರ್ಧಾರವು ಸಂವಿಧಾನದ 15ನೇ ವಿಧಿಗೆ ಪೂರಕವಾಗಿದೆ. ಎಲ್ಲಾ ಪಕ್ಷಗಳ ಮುಖಂಡರ ದಸರಾ ಸಮಿತಿಯು ಅತಿಥಿ ಆಯ್ಕೆಯನ್ನು ಮುಖ್ಯಮಂತ್ರಿಗಳಿಗೆ ನೀಡಿತ್ತು. ಸಿಎಂ ಅವರು ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದಾರೆ.
ದಸರಾ ಜಾತ್ಯತೀತ ಹಬ್ಬ, ಆದರೆ ಧಾರ್ಮಿಕ ಕಾರ್ಯಕ್ರಮ ಎಂದು ಬಿಂಬಿಸಲಾಗುತ್ತಿದೆ. ಹಿಂದೂ-ಮುಸ್ಲಿಂ ಎಂದು ಕಂದಕ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮವಾಗಬೇಕು. ಇದನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು. ಅರ್ಜಿದಾರ ಪ್ರತಾಪ್ ಸಿಂಹ ಅವರಿಗೆ ದಂಡ ವಿಧಿಸಬೇಕು.
ಕೋರ್ಟ್ ಹೇಳಿದ್ದೇನು?
ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸಲು ನಿಮಗೆ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಹಕ್ಕು ಏನಿದೆ ಹೇಳಿ? ಶಿಷ್ಟಾಚಾರ ಪಾಲಿಸುವುದು ಬಾನು ಮುಷ್ತಾಕ್ ಅವರಿಗೆ ಸೇರಿದ ವಿಚಾರ. ವಿಜಯದಶಮಿ ಎಂದರೇನು? ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯ ಅಲ್ವಾ? ಈ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ .
ಈ ವೇಳೆ ವಾದಕ್ಕೆ ಮುಂದಾದ ಪ್ರತಾಪ್ ಸಿಂಹ ವಕೀಲ ಸುದರ್ಶನ್ ಮುಂದಾದಾಗ ನೀವು ಹೀಗೇ ವಾದಿಸಿದರೆ ಆದೇಶ ಆಗಿದೆ.. ದಂಡ ವಿಧಿಸ್ಬೇಕಾ ಎಂದು ಕಟುವಾಗಿ ಪ್ರಶ್ನಿಸಿ ಈ ನ್ಯಾಯಾಲಯದಲ್ಲಿ ನೀವು ಹೀಗೆಲ್ಲಾ ಮಾಡಲಾಗದು ಎಂದು ಹೇಳಿತು.