ಬೆಂಗಳೂರು: ಸರ್ಕಾರಿ ರಜಾ ದಿನ ಮತ್ತು ವೀಕೆಂಡ್ ನಲ್ಲಿ ಸಿನಿಮಾ ನೋಡುವ ಮಂದಿಗೆ ಕಹಿ ಸುದ್ದಿ. ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ನೀವು ರಾಜ್ಯ ಸರ್ಕಾರ ನಿಗದಿ ಪಡಿಸಿದ ಗರಿಷ್ಠ 200 ರೂ.ಗಳ ಬದಲಾಗಿ ಮಲ್ಟಿಪ್ಲೆಕ್ಸ್ ಗಳು ವಿಧಿಸಿದ ದರದಲ್ಲಿ ಸಿನಿಮಾ ನೋಡಬೇಕು.
ಹೌದು. ರಾಜ್ಯ ಸರ್ಕಾರ ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಗರಿಷ್ಠ 200 ರೂ. ಗಳ(ತರಿಗೆ ಹೊರತಾಗಿ) ಪ್ರವೇಶದರ ನಿಗದಿ ಪಡಿಸಿ ಹೊರಡಿಸಿದ್ದ ಆದೇಶ ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಿಗೆ ಅನ್ವಯವಾಗದಂತೆ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ನೀಡಿದೆ.
Advertisement
ಚಿತ್ರಮಂದಿರಗಳಲ್ಲಿ ಗರಿಷ್ಠ 200 ರೂ. ಗಳ ಪ್ರವೇಶದರ ನಿಗದಿ ಪಡಿಸಿ ಹೊರಡಿಸಿದ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಎಫ್‍ಐಸಿಸಿಐ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಐನಾಕ್ಸ್ ಲೀಷರ್ ಲಿಮಿಟೆಡ್‍ನ ನಿರ್ದೇಶಕ ದೀಪಕ್ ಅಶೆರ್ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ಇಂದು ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ರಜಾಕಾಲದ ನ್ಯಾಯಪೀಠದಲ್ಲಿ ಗುರುವಾರ ನಡೆಯಿತು.
Advertisement
ಮಲ್ಟಿಪ್ಲೆಕ್ಸ್ ಗಳ ವಾದ ಏನು?
ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ವಾದಿಸಿ, ಮಲ್ಟಿಪ್ಲೆಕ್ಸ್‍ಗಳಲ್ಲಿ ಕೋಟ್ಯಂತರ ರೂ. ಗಳನ್ನು ಖರ್ಚು ಮಾಡಿ ಮಾಡಿ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ. ಏಕರೂಪದ ದರವನ್ನು ನಿಗದಿ ಪಡಿಸುವುದರಿಂದ ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಭಾರೀ ನಷ್ವವಾಗುತ್ತದೆ. ಅಷ್ಟೇ ಅಲ್ಲದೇ ಕರ್ನಾಟಕ ಸಿನಿಮಾಗಳ (ನಿಯಂತ್ರಣ) ಕಾಯ್ದೆ-1964ರ ಸೆಕ್ಷನ್ 12ರ ಅನುಸಾರ ಗರಿಷ್ಠ ಮಿತಿಯನ್ನು ನಿಗದಿ ಪಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಈ ಎಲ್ಲ ಕಾರಣದಿಂದ ಸರ್ಕಾರದ ಆದೇಶ ರದ್ದುಪಡಿಸಬೇಕೆಂದು ಮನವಿ ಮಾಡಿದರು.
Advertisement
ಸರ್ಕಾರದ ವಾದ ಏನಿತ್ತು?
ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಜಿ.ಶಿವಣ್ಣ ಸರ್ಕಾರದ ಪರ ವಾದಿಸಿ, ಗರಿಷ್ಠ ದರವನ್ನು ನಿಗದಿ ಪಡಿಸುವ ಮುನ್ನ ಮಲ್ಟಿಪ್ಲೆಕ್ಸ್ ಮಾಲೀಕರ ಸಂಘದ ಜೊತೆ ಮಾತುಕತೆ ನಡೆಸಲಾಗಿತ್ತು. ಈ ವೇಳೆ ಅವರು 200 ರೂ. ಗರಿಷ್ಠ ದರ ನಿಗದಿಪಡಿಸಲು ಒಪ್ಪಿಗೆ ಸೂಚಿಸಿದ್ದರು. ಈ ರೀತಿಯ ಆದೇಶ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಜಾರಿಯಾಗಿದೆ. ಕರ್ನಾಟಕ ಸಿನಿಮಾಗಳ (ನಿಯಂತ್ರಣ) ಕಾಯ್ದೆಯ ಸೆಕ್ಷನ್ 19ರ ಅಡಿಯಲ್ಲಿ ದರ ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದ್ದು, ಸಾರ್ವಜನಿಕರಿಂದ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಏಕರೂಪದ ಪ್ರವೇಶ ದರ ನಿಗದಿ ಪಡಿಸಿದ್ದೇವೆ ಎಂದು ನ್ಯಾಯಮೂರ್ತಿಗಳಿಗೆ ಮನವರಿಕೆ ಮಾಡಿಕೊಟ್ಟರು.
Advertisement
ಮಲ್ಟಿಪ್ಲೆಕ್ಸ್ ಗಳ ಆಕ್ಷೇಪ ಏನು?
ಸರ್ಕಾರದ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಏಕರೂಪದ ದರ ನಿಗದಿ ಪಡಿಸಲು ಕರೆಯಲಾದ ಸಭೆಯಲ್ಲಿ ಒಪ್ಪಿಗೆ ನೀಡುವಾಗ ವಾರಾಂತ್ಯ ಹಾಗೂ ಸರ್ಕಾರಿ ರಜೆಗಳಂದು ವಿನಾಯಿತಿ ನೀಡಬೇಕೆಂದು ಮನವಿ ಮಾಡಲಾಗಿತ್ತು. ಆದರೆ ಸರ್ಕಾರ ಆದೇಶ ಪ್ರಕಟವಾಗುವಾಗ ನಮ್ಮ ಮನವಿಯನ್ನು ಪುರಸ್ಕರಿಸದೇ ರಾಜ್ಯದ ಎಲ್ಲ ಭಾಗಗಳಲ್ಲೂ ಗರಿಷ್ಠ 200 ರೂ. ಗಳ ಪ್ರವೇಶದರ ನಿಗದಿ ಪಡಿಸಿದೆ. ಈ ಹಿಂದೆ ವಾರದ ದಿನಗಳಲ್ಲಿ ಟಿಕೆಟ್ ದರ ಕಡಿಮೆ ಇತ್ತು. ಆದರೆ ಈಗ ಈ ಆದೇಶದಿಂದ ಎಲ್ಲ ದಿನಗಳಲ್ಲಿ ಒಂದೇ ದರ ನಿಗದಿ ಪಡಿಸಿದ ಕಾರಣ ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಹೊರಯಾಗುತ್ತಿದೆ ಎಂದು ವಾದಿಸಿದರು.
ವಾದ ಪ್ರತಿವಾದ ಅಲಿಸಿದ ಪೀಠ, ಅರ್ಜಿಯ ಸಂಬಂಧ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು. ಅಷ್ಟೇ ಅಲ್ಲದೇ ಈ ಅರ್ಜಿಯ ಇತ್ಯರ್ಥವಾಗುವರೆಗೆ ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ತಿಳಿಸಿ ಮಧ್ಯಂತರ ಆದೇಶ ನೀಡಿತು.
ಸರ್ಕಾರದ ಆದೇಶದಲ್ಲಿ ಏನಿದೆ?
ಮಲ್ಟಿಪ್ಲೆಕ್ಸ್ ಗಳಲ್ಲಿ ಗರಿಷ್ಟ ಟಿಕೆಟ್ ದರ ತೆರಿಗೆ ಹೊರತು ಪಡಿಸಿ 200 ರೂ. ಫಿಕ್ಸ್ ಆಗಿದ್ದು, ಮೇ 2ರಂದು ಅಧಿಕೃತ ಆದೇಶ ಜಾರಿಯಾಗಿತ್ತು. ಎಲ್ಲ ಭಾಷೆಯ ಚಿತ್ರಗಳಿಗೆ ಇದು ಅನ್ವಯವಾಗುವಂತೆ ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆಯಿಂದ ಆದೇಶ ಪ್ರಕಟವಾಗಿತ್ತು. ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಚಿತ್ರವನ್ನು ಒಂದು ಪರದೆಯಲ್ಲಿ ಮಧ್ಯಾಹ್ನ 1.30 ರಿಂದ ಸಂಜೆ 7.30 ರವರೆಗಿನ ಪ್ರಮುಖ ಅವಧಿಯಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉಲ್ಲೇಖಿಸಲಾಗಿದೆ. ಐ-ಮ್ಯಾಕ್ಸ್, 4ಡಿಎಕ್ಸ್ ಚಿತ್ರಮಂದಿರಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಜೊತೆಗೆ ಗೋಲ್ಡ್ ಕ್ಲಾಸ್ ಗೂ ಈ ಆದೇಶ ಅನ್ವಯವಾಗುವುದಿಲ್ಲ. ಆದರೆ ಪ್ರತಿ ಚಿತ್ರಮಂದಿರದಲ್ಲೂ ಗೋಲ್ಡ್ ಕ್ಲಾಸ್ ಶೇ.10 ರಷ್ಟು ಸೀಟುಗಳನ್ನು ಮೀರಬಾರದು ಎನ್ನುವ ಅಂಶ ಆದೇಶದಲ್ಲಿದೆ.
ಇದನ್ನೂ ಓದಿ: ಮಲ್ಟಿಪ್ಲೆಕ್ಸ್ ಗಳಲ್ಲಿ ಇದೀಗ ಏಕರೂಪ ದರ- ಮನರಂಜನಾ ತೆರಿಗೆ ಸೇರಿ ಒಂದು ಟಿಕೆಟ್‍ಗೆ ಇಷ್ಟು ಬೆಲೆ