ಬೆಂಗಳೂರು: ಹಿಜಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಎದುರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ʼವೈʼ ಶ್ರೇಣಿಯ ಭದ್ರತೆ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹಿಜಾಬ್ ತೀರ್ಪು ನೀಡಿದ ಮೂವರೂ ನ್ಯಾಯಮೂರ್ತಿಗಳಿಗೆ ʻವೈʼ ಶ್ರೇಣಿ ಭದ್ರತೆ ನೀಡಲು ನಿರ್ಧರಿಸಿದ್ದೇವೆ. ನ್ಯಾಯಮೂರ್ತಿಗಳಿಗೆ ಕೆಲವರು ಜೀವ ಬೆದರಿಕೆ ಹಾಕಿರುವ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಪೊಲೀಸ್ ಮಹಾನಿರ್ದೇಶಕರು ಹಾಗೂ ಐಜಿ ಅವರಿಗೆ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಜಡ್ಜ್‌ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್
ಮೂವರು ನ್ಯಾಯಮೂರ್ತಿಗಳಲ್ಲಿ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಕೂಡ ಸೇರಿದ್ದಾರೆ. ಹಿಜಬ್ ಬಗ್ಗೆ ತೀರ್ಪು ನೀಡಿದ ತ್ರಿಸದಸ್ಯ ಪೀಠದಲ್ಲಿ ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್ ಮತ್ತು ಖಾಝಿ ಎಂ ಜೈಬುನ್ನಿಸಾ ಅವರೂ ಇದ್ದರು.
ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿರುವ ಮೂವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದರು.
ಸಮುದಾಯದ ಪರವಾಗಿರುವುದು ಜಾತ್ಯತೀತತೆ ಅಲ್ಲ, ಅದು ಕೋಮುವಾದ. ನಾನು ಇದನ್ನು ಖಂಡಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕು. ಇದನ್ನು ಸರ್ಕಾರ ಖಂಡಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್ ತೀರ್ಪು ಪ್ರಕಟಿಸಿದ ಜಡ್ಜ್‌ಗಳಿಗೆ ಕೊಲೆ ಬೆದರಿಕೆ – ಕೇಸ್ ದಾಖಲು
ಹಿಜಬ್ ತೀರ್ಪು ಪ್ರಕಟಿಸಿದ ಹೈಕೋರ್ಟ್ ನ್ಯಾಯಾಧೀಶರಿಗೆ ತಮಿಳುನಾಡು ಮೂಲದ ಮತೀಯ ಸಂಘಟನೆಯೊಂದು ಕೊಲೆ ಬೆದರಿಕೆ ಹಾಕಿದೆ. ತೌಹೀದ್ ಜಮಾತ್ ಸಂಘಟನೆ ಬೆದರಿಕೆ ಹಾಕಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಬೆನ್ನಲೇ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಸಂಘಟನೆ ವಿರುದ್ಧ ಪ್ರಕರಣ ದಾಖಲಾಗಿದೆ.
ತರಗತಿಗಳಲ್ಲಿ ಹಿಜಬ್ ಧರಿಸಿ ಹೋಗುವಂತಿಲ್ಲ. ಸಮವಸ್ತ್ರ ನಿಯಮ ಪಾಲನೆ ಮಾಡಬೇಕು ಎಂದು ಈಚೆಗೆ ತೀರ್ಪು ನೀಡಿದ್ದ ಹೈಕೋರ್ಟ್, ಹಿಜಬ್ ಪರವಾಗಿ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿತ್ತು. ಇದನ್ನೂ ಓದಿ: ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ, ತಲೆಯನ್ನು ತುಂಬಿಸುತ್ತದೆ: ಪ್ರತಾಪ್‍ಸಿಂಹ
ವೈ ಶ್ರೇಣಿ ಭದ್ರತೆ ಹೇಗಿರುತ್ತೆ?
ವೈ ಶ್ರೇಣಿಯಲ್ಲಿ ಒಬ್ಬರು ಅಥವಾ ಇಬ್ಬರು ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 8 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುವುದು.