– ಮೀನುಗಾರರ ಮಾಹಿತಿಯೇ ಫೈನಲ್ ಟಚ್
ಉಡುಪಿ: ಕರ್ನಾಟಕ ಕರಾವಳಿ ಭದ್ರತೆಗೆ ರಾಜ್ಯ ಸರ್ಕಾರ ಇಂಧನ ಕಡಿತ ಆದೇಶ ಹೊಡೆತ ನೀಡಿದೆ. ರಾಜ್ಯದ ಗಡಿ ಕಾಯುವ ಕರಾವಳಿ ಕಾವಲು ಪೊಲೀಸ್ (Coastal Guard Udupi) ಇಲಾಖೆಗೆ ಪೂರೈಸಲಾಗುತ್ತಿದ್ದ ಇಂಧನ ಪ್ರಮಾಣವನ್ನ ಕಡಿತಗೊಳಿಸಿದೆ. ಅರ್ಧಕ್ಕಿಂತ ಜಾಸ್ತಿ ಇಂಧನ ಪ್ರಮಾಣ ಇಳಿಸಿದ್ದು, ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.
ಕರ್ನಾಟಕದ ಭದ್ರತೆಯ ವಿಚಾರದಲ್ಲಿ ಸರ್ಕಾರದ ಜಿಪುಣತನ ಸರಿಯಾ ಎನ್ನುವ ಪ್ರಶ್ನೆ ಎದುರಾಗಿದೆ. ಕರಾವಳಿ ಕಾವಲು ಪೊಲೀಸ್ ಪಡೆ ರಾಜ್ಯ ಕರಾವಳಿ ತೀರದ ಮೂರು ಜಿಲ್ಲೆಯ ಗಡಿಯನ್ನು ಕಾಯುವ ಕೆಲಸ ಮಾಡುತ್ತದೆ. ಸಮುದ್ರದ ಮೂಲಕ ನಡೆಯಬಹುದಾದ ಸಂಭಾವ್ಯ ಅನಾಹುತ ತಡೆಯೋದು ಇಲಾಖೆಯ ಕೆಲಸ. ಅಕ್ರಮ ನಡೆಯದಂತೆ, ಕಾನೂನು ಬಾಹಿರ ಕೃತ್ಯಗಳು ಸಮುದ್ರ ಮುಖೇನ ಘಟಿಸದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಕೇರಳ ಗಡಿಯಿಂದ ಗೋವಾ ಗಡಿವರೆಗೆ ಜವಾಬ್ದಾರಿ ಇದೆ. ಸರ್ಕಾರದ ಹೊಸ ಆದೇಶ ಕರಾವಳಿ ಕಾವಲು ಪಡೆ ಬಳಸೋ ವಾಹನಗಳಿಗೆ ನೀಡಲಾಗುತ್ತಿದ್ದ ಇಂಧನ ಪ್ರಮಾಣವನ್ನ ಕಡಿತಗೊಳಿಸಿದೆ. ಬೋಟ್‌ಗೆ ಮಾಸಿಕ 600 ಲೀಟರ್ ಇಂಧನ ಪೂರೈಕೆ ಮಾಡಲಾಗುತ್ತಿತ್ತು. ಈ ಪ್ರಮಾಣವನ್ನ ಇದೀಗ ಕೇವಲ 250 ಲೀಟರ್ ಮಾತ್ರ ಸೀಮಿತಗೊಳಿಸಲಾಗಿದೆ.
ಈ ಇಂಧನ ಕಡಿತದಿಂದ ದಿನಕ್ಕೆ 10 ತಾಸಿನವರೆಗೂ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಕರಾವಳಿ ಕಾವಲು ಪೊಲೀಸರು ಈಗ ಕೇವಲ ಒಂದು ಗಂಟೆ ಸಮುದ್ರದಲ್ಲಿ ಗಸ್ತು ತಿರುಗೋ ಪರಿಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕಾರವಾರದಲ್ಲಿ ಕಾರ್ಯಚರಿಸುವ ಎಲ್ಲಾ ಇಲಾಖೆಯ ವಾಹನಗಳಿಗೆ ನೀಡಲಾಗುತ್ತಿದ್ದ ಇಂಧನ ಪ್ರಮಾಣದಲ್ಲಿ ಶೇಕಡ 50 ಲೀಟರ್ ಕಡಿತಗೊಳಿಸಲಾಗಿದೆ. ಮೂರು ಜಿಲ್ಲೆಯಲ್ಲಿ 9 ಸ್ಟೇಷನ್‌ಗಳಿದ್ದು, ಸಮುದ್ರದಲ್ಲಿ 15 ಬೋಟ್‌ಗಳಲ್ಲಿ ಗಸ್ತಿನಲ್ಲಿವೆ. ಹವಾಮಾನ ವೈಪರಿತ್ಯ, ಮಳೆಗಾಲ ನಿಯಮಬಾಹಿರ ಚಟುವಟಿಕೆಯನ್ನು ತಡೆಯುವುದು ಪೊಲೀಸರ ಕೆಲಸ. ಸರ್ಕಾರದ ಹೊಸ ಆದೇಶದಿಂದ ಮೀನುಗಾರರ ಮಾಹಿತಿಯನ್ನು ಪೊಲೀಸರು ಅವಲಂಬಿಸಬೇಕಾಗಿದೆ.
ರಾಜ್ಯದ ಭದ್ರತೆಯ ದೃಷ್ಟಿಕೋನದಿಂದ ಸರ್ಕಾರ ನಿರ್ಧಾರ ಸರಿಯಲ್ಲ. ಪುನರ್ ಪರಿಶೀಲನೆ ನಡೆಸಬೇಕಾದ ಅಗತ್ಯತೆ ಇದೆ. ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಏಕೆ ಎದುರಾಗಿದೆ ಎಂಬ ಪ್ರಶ್ನೆ ಕೇಳಿಬರುತ್ತಿದೆ.