ಬೆಂಗಳೂರು: ವಿಶೇಷ ಅಧಿವೇಶನದಲ್ಲಿ (Joint Session) ಭಾಷಣ ಮಾಡಲು ರಾಜ್ಯಪಾಲ (Governor) ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಬಾರದೇ ಇದ್ದರೆ ಕಾನೂನು ಹೋರಾಟ ನಡೆಸಲು ಮುಂದಾಗಿದೆ.
ಜ.22ರ 11:15ರ ತನಕ ರಾಜ್ಯಪಾಲರ ಆಗಮನಕ್ಕೆ ಕಾದು, ಆ ಸಮಯದ ಒಳಗಾಗಿ ಬಾರದಿದ್ದರೆ 1 ಗಂಟೆಯೊಳಗೆ ಸುಪ್ರೀಂ ಕೋರ್ಟ್ ಸಂವಿಧಾನಿಕ ಪೀಠ ಕದ ತಟ್ಟಲು ತೀರ್ಮಾನಿಸಿದೆ. ಇದೇ ವಿಚಾರವಾಗಿ ತುರ್ತಾಗಿ ದೆಹಲಿಗೆ ತೆರಳುವಂತೆ ಅಡ್ವೋಕೇಟ್ ಜನರಲ್ ಅವರಿಗೆ ಸಿಎಂ ಸೂಚನೆಯನ್ನೂ ನೀಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಅಧಿವೇಶನಕ್ಕೂ ಮುನ್ನವೇ ಸರ್ಕಾರಕ್ಕೆ ಶಾಕ್ – ಭಾಷಣ ನಾನು ಓದಲ್ಲ ಎಂದ ಗೆಹ್ಲೋಟ್
ರಾಜ್ಯಪಾಲರು ಹೇಳಿದಂತೆ 11 ಪ್ಯಾರಾವನ್ನು ತೆಗೆಯದಿರಲು ಸರ್ಕಾರ ತೀರ್ಮಾನಿಸಿದೆ. ರಾಜ್ಯಪಾಲರು ಅಧಿವೇಶನಕ್ಕೆ ಬರಬೇಕು, ಸರ್ಕಾರದ ಭಾಷಣ ಓದಬೇಕು. ಇಲ್ಲದಿದ್ರೆ ಸುಪ್ರೀಂಕೋರ್ಟ್ ಸಂವಿಧಾನಿಕ ಪೀಠದಲ್ಲೇ ಇತ್ಯರ್ಥಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹೈಕಮಾಂಡ್ ಜೊತೆ ಚರ್ಚಿಸಿ ಸಿಎಂ ಸಿದ್ದರಾಮಯ್ಯ (Siddaramaiah) ಈ ಖಡಕ್ ತೀರ್ಮಾನ ಮಾಡಿದ್ದಾರೆ.
ಅಧಿವೇಶನಕ್ಕೆ ಬಂದೇ ಬರ್ತಾರೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಪೊನ್ನಣ್ಣ, ರಾಜ್ಯಪಾಲರನ್ನು ಭೇಟಿ ಮಾಡಿದ್ದೇನೆ. ಸಿಎಂ, ಕಾನೂನು ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ. ಗುರುವಾರ 10:15ಕ್ಕೆ ಬಂದು ಜಂಟಿ ಅಧಿವೇಶನಕ್ಕೆ ರಾಜ್ಯಪಾಲರನ್ನು ನಾವೇ ಕರೆದುಕೊಂಡು ಹೋಗುತ್ತೇವೆ. ಅವರು ಅಧಿವೇಶನಕ್ಕೆ ಬಂದೇ ಬರುತ್ತಾರೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.
ಸಂವಿಧಾನ ಏನು ಹೇಳುತ್ತದೆ ಎಂಬ ತೀರ್ಪು ಇದೆ. ಭಾಷಣದಲ್ಲಿ ಯಾವುದೇ ಬದಲಾವಣೆ ಮಾಡಲಿಕ್ಕೆ ಆಗೋದಿಲ್ಲ. ಅದನ್ನೇ ಅವರು ಓದಬೇಕು ಅಂತ ಹೇಳಿದ್ದೇವೆ. ಕೆಲ ಬದಲಾವಣೆ ಮಾಡಲು ಹೇಳಿದರು. ಅದು ಸಾಧ್ಯವಿಲ್ಲ ಎಂದು ತಿಳಿಸಿದ್ದೇವೆ. ಇದು ರಾಜ್ಯಪಾಲರ ಸ್ವಂತ ಭಾಷಣ ಅಲ್ಲ, ಸರ್ಕಾರದ ನಿಲುವನ್ನು ಹೇಳುವ ಭಾಷಣ, ರಾಜ್ಯಪಾಲರ ಹುದ್ದೆಯಲ್ಲಿ ಇದ್ದು, ಭಾಷಣ ಮಾಡಬೇಕು, ಸಂವಿಧಾನ ಇದೇ ಹೇಳುತ್ತದೆ ಎಂದಿದ್ದಾರೆ.
ಸಂವಿಧಾನದ ಬಗ್ಗೆ ಬಿಜೆಪಿಯನ್ನು ಖಂಡಿತಾ ಕೇಳಬೇಡಿ. ಸಂವಿಧಾನವನ್ನು ತಿದ್ದೋಕ್ಕೆ ಹೊರಟವರು ಅವರು. ಅವರ ಹತ್ರ ಏನು ಕೇಳೋದು ಎಂದು ಗುಡುಗಿದ್ದಾರೆ. ಇದನ್ನೂ ಓದಿ: ವಿಬಿಜಿರಾಮ್‌ಜಿ ಪರ ಬ್ಯಾಟ್ ಬೀಸಲು ದೋಸ್ತಿ ತಯಾರಿ – ಶಿವರಾಜ್ ಸಿಂಗ್ ಚೌಹಾಣ್‌ರಿಂದ ಉಪನ್ಯಾಸ

