ಬೆಂಗಳೂರು: ಕಬ್ಬು ಪ್ರತಿ ಟನ್‌ಗೆ 3,300 ರೂ. ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ನಿನ್ನೆ ಕಾರ್ಖಾನೆಗಳ ಮಾಲೀಕರು, ರೈತರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದರು. ಹೆಚ್ಚುವರಿಯಾಗಿ 100 ರೂಪಾಯಿ ರೈತರಿಗೆ ನೀಡಲು ಸಭೆಯಲ್ಲಿ ನಿರ್ಣಯ ಆಗಿತ್ತು. 50 ರೂ. ಮಾಲೀಕರು ಮತ್ತು 50 ರೂ. ಸರ್ಕಾರ ನೀಡುವಂತೆ ಆಗಿದ್ದ ನಿರ್ಣಯಕ್ಕೆ ಸರ್ಕಾರ ಆದೇಶ ಮುದ್ರೆಯೊತ್ತಿದೆ.
ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ರಾಜ್ಯದ ಹಲವೆಡೆ ರೈತರು ಪ್ರತಿಭಟನೆ ನಡೆಸಿದ್ದರು. ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಸರ್ಕಾರ ಶುಕ್ರವಾರ ಸಭೆ ನಡೆಸಿತು. ಕಾರ್ಖಾನೆ ಮಾಲೀಕರು ಮತ್ತು ರೈತರ ಜೊತೆ ಸಿಎಂ ಸಿದ್ದರಾಮಯ್ಯ 6 ಗಂಟೆಗಳ ಸುದೀರ್ಘ ಸಭೆ ನಡೆಸಿದರು.
ಅಂತಿಮವಾಗಿ ಟನ್ ಕಬ್ಬಿಗೆ 3,300 ರೂ. ನೀಡುವುದಾಗಿ ಸರ್ಕಾರ ಒಪ್ಪಿಕೊಂಡಿತು. ರೈತರು ತಮ್ಮ ಪ್ರತಿಭಟನೆ ಕೈಬಿಟ್ಟರು.

