ಬೆಂಗಳೂರು: 16ನೇ ಹಣಕಾಸು ಆಯೋಗಕ್ಕೆ ವಿತ್ತೀಯ ಹಂಚಿಕೆ ವಿಷಯಗಳಲ್ಲಿ ರಾಜ್ಯ ಸರ್ಕಾರ ಹಲವು ಶಿಫಾರಸು ಮಾಡಿದೆ. 16ನೇ ಹಣಕಾಸು ಆಯೋಗದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಆಯೋಗದ ಅಧ್ಯಕ್ಷರ ಮುಂದೆ ಶಿಫಾರಸುಗಳನ್ನು ಮಂಡನೆ ಮಾಡಿದರು.
ಹಂಚಿಕೆ ಮಾಡುವ ಬಾಬ್ತಿನಲ್ಲಿ (central divisible pool) ಕನಿಷ್ಟ ಶೇ.50ರಷ್ಟು ಪಾಲನ್ನು ಸಂಬಂಧಿಸಿದ ರಾಜ್ಯಗಳಿಗೆ ನಿಗದಿಪಡಿಸಬೇಕು. ಸೆಸ್ ಮತ್ತು ಸರ್ಚಾರ್ಜ್ ಒಟ್ಟು ತೆರಿಗೆ ಆದಾಯದ ಶೇ.5ಕ್ಕೆ ಮಿತಿಗೊಳಿಸಬೇಕು. ಇದಕ್ಕಿಂತ ಹೆಚ್ಚಾಗುವ ಯಾವುದೇ ಮೊತ್ತವನ್ನು ಹಂಚಿಕೊಳ್ಳುವ ಬಾಬ್ತಿಗೆ ಪರಿಗಣಿಸಬೇಕು. ಇದನ್ನೂ ಓದಿ: 16th Finance Commission | ಬೆಂಗಳೂರು ಅಭಿವೃದ್ಧಿಗೆ 27,000 ಕೋಟಿ ಅನುದಾನ ಬೇಡಿಕೆ ಇಟ್ಟ ಸಿಎಂ
ಕೇಂದ್ರ ಸರ್ಕಾರದ ತೆರಿಗೇತರ ಆದಾಯವನ್ನು ಹಂಚಿಕೊಳ್ಳುವ ತೆರಿಗೆ ಬಾಬ್ತಿನ ವ್ಯಾಪ್ತಿಗೆ ತರುವ ಕುರಿತು ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರಬೇಕು. ಪಾಲಿನ ಹಂಚಿಕೆ ಸಂದರ್ಭದಲ್ಲಿ ದಕ್ಷತೆ ಮತ್ತು ನಿರ್ವಹಣೆಗೆ ಸೂಕ್ತ ಪುರಸ್ಕಾರ ನೀಡುವ ಬಗ್ಗೆ ಆಯೋಗ ದಿಟ್ಟ ನಿಲುವು ತಳೆಯಬೇಕು ಎಂದು ಸಿಎಂ ಆಯೋಗದ ಶಿಫಾರಸು ಮಾಡಿದರು.