ಕಾರವಾರ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಆಗಬೇಕು ಎನ್ನುವುದು ಉತ್ತರ ಕನ್ನಡ ಜಿಲ್ಲೆಯ ಜನರ ದಶಕದ ಬೇಡಿಕೆ. ಆದರೆ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ ಮಾಡಿ ನೀಡಿದ ಮನವಿ ಅರ್ಜಿಗೆ ಬರೋಬ್ಬರಿ ಒಂದು ವರ್ಷದ ನಂತರ ಇದೀಗ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸರ್ಕಾರ ಪತ್ರ ಬರೆದು ಮಾಹಿತಿ ಕೇಳಿದೆ.
ಹೌದು, ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎಂದು ಹೋರಾಟಗಾರ ಅನಂತಮೂರ್ತಿಯವರು 2023ರ ನವೆಂಬರ್ ತಿಂಗಳಲ್ಲಿ ಪಾದಯಾತ್ರೆ ನಡೆಸಿ ಕಾರವಾರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಲವು ಸಂಘಟನೆಗಳೊಂದಿಗೆ ಮನವಿ ನೀಡಿದ್ದರು.
Advertisement
ಈ ಮನವಿ ಅಂದೇ ಜಿಲ್ಲಾಧಿಕಾರಿ ಮೂಲಕ ಸ್ವೀಕೃತವಾಗಿ ಸಂಬಂಧಪಟ್ಟ ಇಲಾಖೆಗೆ ತಲುಪಿತ್ತು. ಆದರೆ, ಈ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ ಎಷ್ಟಿದೆ ಎಂದರೆ, ಒಂದು ವರ್ಷದ ನಂತರ ಇದೀಗ 2025 ಜ.6 ರಂದು ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಪತ್ರ ಬರೆದು 15 ದಿನದೊಳಗೆ ಅರ್ಜಿದಾರರಿಗೆ ಹಾಗೂ ಸಂಬಂಧಪಟ್ಟ ನಿರ್ದೇಶನಾಲಯಕ್ಕೆ ಮಾಹಿತಿ ನೀಡಲು ಸೂಚಿಸಿದೆ.
Advertisement
ಹಿಂದೆ ಏನಾಗಿತ್ತು?
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇಲ್ಲದ ಪರಿಣಾಮ ಪ್ರತಿನಿತ್ಯ ಚಿಕಿತ್ಸೆಗಾಗಿ ಹೊರ ಜಿಲ್ಲೆ, ಹೊರ ರಾಜ್ಯದ ಆಸ್ಪತ್ರೆಗಳಿಗೆ ಓಡಾಡುವ ಪರಿಸ್ಥಿತಿ ಇದ್ದು, ಜಿಲ್ಲೆಯಲ್ಲಿಯೇ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಈ ಹಿಂದೆ ಅನೇಕ ಹೋರಾಟಗಳು ನಡೆದಿತ್ತು.
Advertisement
ಅದರಲ್ಲಿ ಮುಖ್ಯವಾಗಿ, ಸಾಮಾಜಿಕ ಜಾಲತಾಣದ ಹ್ಯಾಷ್ ಟ್ಯಾಗ್ ಹೋರಾಟ, ರಕ್ತದಲ್ಲಿ ಪತ್ರ ಬರೆದು ಹೋರಾಟ, ಪಾದಯಾತ್ರೆ ಹಾಗೂ ಉಪವಾಸ ಕುಳಿತು ಜಿಲ್ಲೆಯ ಹಲವು ಸಂಘಟನೆಗಳು ಹೋರಾಟ ನಡೆಸಿದ್ದವು. ಕಳೆದ ಬಿಜೆಪಿ ಸರ್ಕಾರ ಅವಧಿಯಲ್ಲಿ ಈ ಸಂಬಂಧ ದೊಡ್ಡ ಅಭಿಯಾನವೇ ನಡೆದಿತ್ತು. ಅಂದು ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಈ ವಿಚಾರವನ್ನ ರಾಜಕೀಯವಾಗಿ ಬಳಸಿಕೊಂಡಿತ್ತು.
Advertisement
ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಹೋರಾಟದ ಪರಿಣಾಮವಾಗಿ ಸ್ವತಃ ಆರೋಗ್ಯ ಸಚಿವರೇ ಜಿಲ್ಲೆಗೆ ಬಂದು ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಮಾಡಿ ತೆರಳಿದ್ದರು. ಆದರೆ, ಇದು ಕೇವಲ ನೋಡಿ ಪರಿಶೀಲನೆ ಮಾಡುವ ಹಂತದಲ್ಲೇ ಮುಗಿಯಿತೇ ವಿನಾ ಆಸ್ಪತ್ರೆ ನಿರ್ಮಾಣದ ಕಾರ್ಯವಾಗಿರಲಿಲ್ಲ. ಅಂದು ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಈ ವಿಚಾರವನ್ನ ರಾಜಕೀಯವಾಗಿ ಬಳಸಿಕೊಂಡು, ತಮ್ಮ ಸರ್ಕಾರ ಆಡಳಿತಕ್ಕೆ ಬಂದ ಕೆಲವೇ ದಿನದಲ್ಲಿ ಶಂಕುಸ್ಥಾಪನೆ ಮಾಡುವುದಾಗಿ ಹೇಳಿತ್ತು.
ಹೋರಾಟದ ತೀವ್ರತೆಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಮಾಡಿ ಜಾಗ ನಿಗದಿ ಮಾಡಿದ್ದರು. ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು ತಕ್ಷಣ ಶಂಕುಸ್ಥಾಪನೆ ಮಾಡುವ ಹೇಳಿಕೆ ನೀಡಿದ್ದರು. ಆದರೆ, ಮಂಡನೆಯಾದ ಬಜೆಟ್‌ನಲ್ಲಿ ಸಹ ಇದಕ್ಕಾಗಿ ಹಣ ಮೀಸಲಿಡಲಿಲ್ಲ. ಇನ್ನು, ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡದೇ ಇರುವುದು ವಿಧಾನಸಭಾ ಚುನಾವಣೆಯ ಸೋಲಿಗೂ ಕಾರಣವಾಗಿತ್ತು.
ಜನಪ್ರತಿನಿಧಿಗಳ ಕಿತ್ತಾಟ! ಕೊನೆಗೂ ಮರೀಚಿಕೆಯಾಯ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ
ಬಿಜೆಪಿ-ಕಾಂಗ್ರೆಸ್ ಎರಡು ಪಕ್ಷಗಳೂ ಅಂದಿನ ವಿಧಾನಸಭಾ ಚುನಾವಣೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವಿಷಯವನ್ನು ಬಳಸಿಕೊಂಡರು. ಗ್ಯಾರಂಟಿ ಆಶ್ವಾಸನೆ ಕಾರಣದಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಕಾರವಾರದ ಶಾಸಕ ಸತೀಶ್ ಸೈಲ್, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ತಮ್ಮ ಭೂಮಿಯನ್ನು ಕೊಡಲು ಸಿದ್ಧವಾಗಿದ್ದು, ಹೂಡಿಕೆಗಾಗಿ ಉದ್ಯಮಿ ಬಿ.ಆರ್.ಶಟ್ಟಿ ಅವರು ಸಹ ಕಾರವಾರಕ್ಕೆ ಆಗಮಿಸಿ ಮಾತುಕತೆ ನಡೆಸಿದ್ದರು. ಶಾಸಕ ಆರ್.ವಿ ದೇಶಪಾಂಡೆ ಸಹ ಹಳಿಯಾಳದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇಲ್ಲವೇ, ಇರುವ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದಾಗಿ ಹೇಳಿದ್ದರು.
ಕೆಲವು ಜನಪ್ರತಿನಿಧಿಗಳು ಕಾರವಾರದಲ್ಲಿ ಆಗಲಿ ಎಂದರೆ, ಇನ್ನು ಕೆಲವರು ಶಿರಸಿ, ಕುಮಟಾ, ಹೊನ್ನಾವರ ಎಂದು ಗೊಂದಲ ಸೃಷ್ಟಿಸಿದ್ದರು. ಕುದ್ದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸಹ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ಕುಮಟಾ ಅಥವಾ ಹೊನ್ನಾವರದಲ್ಲಿ ಮಾಡ್ಬೇಕು ಎಂದು ಗಲಾಟೆ ಮಾಡ್ತಿದ್ದಾರೆ. ಅಲ್ಲಿ ನಾವು ಮಾಡ್ತೇವೆ ಎಂದು ಅವರಿಗೆ ಆಶ್ವಾಸನೆ ಕೊಟ್ಟಿದ್ದೇವೆ. ಶೀಘ್ರದಲ್ಲೇ ಶಂಕುಸ್ಥಾಪನೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಹೀಗೆ ಗೊಂದಲದಲ್ಲಿ ಜಿಲ್ಲೆಯ ಜನರಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಮೂಗಿಗೆ ತುಪ್ಪ ಸವರಿ ಜನರನ್ನು ತ್ರಿಶಂಕು ಸ್ಥಿತಿಗೆ ತಳ್ಳಿದರೇ ವಿನಃ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕನಸು ಮಾತ್ರ ಗಗನ ಕುಸುಮವಾಗಿದೆ. ಸದ್ಯ ರಾಜ್ಯ ಸರ್ಕಾರ ಬಜೆಟ್ ಮಂಡನೆ ಮಾಡಲಿದ್ದು, ಈ ಬಜೆಟ್‌ನಲ್ಲಿಯಾದರೂ ನಿಗದಿ ಮಾಡಿದ ಸ್ಥಳದಲ್ಲಿ ಮಂಜೂರಾರಿ ನೀಡಿ ಹಣ ಬಿಡುಗಡೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.