ಬೆಂಗಳೂರು: ಮಂಗಳೂರಿನಲ್ಲಿ (Mangaluru) ನಡೆದ ಕುಕ್ಕರ್ ಬಾಂಬ್ ಸ್ಫೋಟ (Cooker Bomb Blast) ಪ್ರಕರಣ ರಾಜ್ಯವನ್ನೇ ತಲ್ಲಣಗೊಳಿಸಿದೆ. ಕಳೆದ ವಾರ ನಡೆದ ಘಟನೆಯ ಹಿಂದೆ ಉಗ್ರರ ದೊಡ್ಡ ಸಂಚೇ ಇತ್ತು ಎಂಬುದು ಬೆಳಕಿಗೆ ಬರುತ್ತಲೇ ಇದರ ತನಿಖೆಯನ್ನು ಎನ್‌ಐಎಗೆ (NIA) ವಹಿಸಬೇಕೆಂಬ ಒತ್ತಾಯ ಕೇಳಿಬರುತ್ತಿತ್ತು. ಇದೀಗ ಮಂಗಳೂರು ಸ್ಫೋಟ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲು ಸರ್ಕಾರ ನಿರ್ಧರಿಸಿರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತಿಳಿಸಿದ್ದಾರೆ.
ಮಂಗಳೂರಿನ ಕಂಕನಾಡಿ ಸಮೀಪ ಕುಕ್ಕರ್ ಬಾಂಬ್ ಸ್ಫೋಟ ಘಟನೆಯ ಮುಂದಿನ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗೆ ವರ್ಗಾಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಯಲ್ಲಿ ಸಂಗ್ರಹಿಸಲಾದ ಸಾಕ್ಷ್ಯ ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಲ್ಲಾ ದೇವಾಲಯಗಳಲ್ಲೂ ಮುಸ್ಲಿಮರ ವ್ಯಾಪಾರ ಬಹಿಷ್ಕಾರ ಮಾಡಬೇಕು – ಪ್ರಮೋದ್ ಮುತಾಲಿಕ್
ನವೆಂಬರ್ 19ರಂದು ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ನಿಗೂಢವಾಗಿ ಸ್ಫೋಟವೊಂದು ಸಂಭವಿಸಿತ್ತು. ಘಟನೆಯಲ್ಲಿ ಆಟೋ ಡ್ರೈವರ್ ಹಾಗೂ ಹಿಂಬದಿ ಪ್ರಯಾಣಿಕನಿಗೆ ಗಂಭೀರ ಗಾಯಗಳಾಗಿತ್ತು. ತನಿಖೆಯ ವೇಳೆ ಪ್ರಯಾಣಿಕನ ಸೋಗಿನಲ್ಲಿ ಬಂದು ಬಾಂಬ್ ಬ್ಲಾಸ್ಟ್ ಮಾಡಿದ್ದ ವ್ಯಕ್ತಿ ಮೋಸ್ಟ್ ವಾಂಟೆಡ್ ಶಾರೀಕ್ (Shariq) ಎಂಬುದು ತಿಳಿದುಬಂದಿದೆ. ಈತ ಮಂಗಳೂರಿನ ದೇವಾಲಯಗಳು ಸೇರಿದಂತೆ ಹಲವು ಸ್ಥಳಗಳನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಲು ಯೋಜಿಸಿದ್ದ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಶಾರೀಕ್ ಅಲ್ಲ ಘಜನಿಯಿಂದ ಟಿಪ್ಪುವರೆಗಿನ ಎಲ್ಲರೂ ದೇವಸ್ಥಾನದ ಮೇಲೆ ದಾಳಿ ಮಾಡ್ಕೊಂಡೇ ಬಂದಿದ್ದಾರೆ: ಮುತಾಲಿಕ್