ಬೆಂಗಳೂರು: ಜಂಟಿ ಅಧಿವೇಶನ (Joint Session) ಆರಂಭಕ್ಕೂ ಮುನ್ನವೇ ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್ (Thawar Chand Gehlot) ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್ ನೀಡಿದ್ದಾರೆ. ನಾಳಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಓದಲು ರಾಜ್ಯಪಾಲರು ನಿರಾಕರಿಸಿದ್ದಾರೆ. ಈ ಮೂಲಕ ತಮಿಳುನಾಡು (Tamilnadu) ಬಳಿಕ ಕರ್ನಾಟಕದಲ್ಲೂ ರಾಜ್ಯಪಾಲರು Vs ಸರ್ಕಾರದ ಸಂಘರ್ಷ ಆರಂಭವಾಗಿದೆ.
ದಕ್ಷಿಣ ರಾಜ್ಯಗಳ ಮೇಲೆ ತಾರತಮ್ಯ ವಿಚಾರವಾಗಿ ರಾಜ್ಯ ಸರ್ಕಾರ ಐದಾರು ಬಾರಿ ಕೇಂದ್ರ ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಅಂಶವನ್ನು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸಲಾಗಿದೆ. ಭಾಷಣದಲ್ಲಿ ವಿಚಾರ ಪ್ರಸ್ತಾಪವಾದ ಬೆನ್ನಲ್ಲೇ ರಾಜ್ಯಪಾಲರು ಭಾಷಣ ಓದದೇ ಇರುವ ನಿರ್ಧಾರ ತೆಗೆದುಕೊಂಡಿದ್ದಾರೆ.
ರಾಜ್ಯಪಾಲರು ತಮ್ಮ ನಿರ್ಧಾರ ಪ್ರಕಟಿಸುತ್ತಿದ್ದಂತೆ ಮಧ್ಯಾಹ್ನ 1 ಗಂಟೆಗೆ ರಾಜಭವನದಿಂದ ಕಾನೂನು ಸಚಿವ ಹೆಚ್.ಕೆ.ಪಾಟೀಲ್‌ಗೆ ಕರೆ ಬಂದಿದೆ. ಕರೆಯಲ್ಲಿ ಈ ಭಾಷಣವನ್ನು ರಾಜ್ಯಪಾಲರು ಓದಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ. ಭಾಷಣವನ್ನು ಬದಲಿಸದೇ ಇದ್ದರೆ ರಾಜ್ಯಪಾಲರು ಭಾಷಣಕ್ಕೆ ಬರುವುದಿಲ್ಲ ಎಂದು ಸರ್ಕಾರಕ್ಕೆ ತಿಳಿಸಲಾಗಿದೆ.
ಈಗ ರಾಜ್ಯಪಾಲರ ಮನವೊಲಿಕೆಗೆ ರಾಜ್ಯ ಸರ್ಕಾರ ಕಸರತ್ತು ಮಾಡಲು ಆರಂಭಿಸಿದೆ. ರಾಜಭವನಕ್ಕೆ ಸ್ಪೀಕರ್ ಯುಟಿ ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ಆಗಮಿಸಿ ಮನವೊಲಿಸಲು ಮುಂದಾಗಿದ್ದಾರೆ.

