ಯೂನಿವರ್ಸಿಟಿ ಮುಚ್ಚುವ ಬದಲು ಕಾಂಗ್ರೆಸ್ ಪಕ್ಷವನ್ನೇ ಮುಚ್ಚಿ ಬಿಡಿ: ಛಲವಾದಿ ನಾರಾಯಣಸ್ವಾಮಿ

Public TV
1 Min Read
chalavadi narayanaswamy 1

– ರಾಜ್ಯ ಸರ್ಕಾರದಿಂದ ಖಜಾನೆಗೆ ಕನ್ನ ಹಾಕುವ ಕೆಲಸ

ಬೆಂಗಳೂರು: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬದಲು ನಿಮ್ಮ ಕಾಂಗ್ರೆಸ್ (Congress) ಪಕ್ಷವನ್ನೇ ಮುಚ್ಚಿಬಿಡಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ಆಗ್ರಹಿಸಿದ್ದಾರೆ.

ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಬಿಜೆಪಿ-ಜೆಡಿಎಸ್ (BJP – JDS) ಪಕ್ಷಗಳ ಪ್ರತಿಭಟನೆ ವೇಳೆ ಅವರು ಮಾತನಾಡಿದರು. ಈ ವೇಳೆ, ಕಾಂಗ್ರೆಸ್ ಮುಚ್ಚಿಬಿಟ್ಟರೆ ದೇಶಕ್ಕೇನೂ ಆಗುವುದಿಲ್ಲ. ಕಾಂಗ್ರೆಸ್ ಇರುವವರೆಗೆ ಈ ದೇಶಕ್ಕೆ ಅಭಿವೃದ್ಧಿ, ನೆಮ್ಮದಿ ಇಲ್ಲ. ಆ ಪಕ್ಷ ದೇಶಕ್ಕೆ ಗಂಡಾಂತರ ತರುವ ಕೆಲಸ ಮಾಡುತ್ತಿದೆ. ಕಾರ್ಯಕರ್ತರಿಗೆ ಖಜಾನೆ ಹಣವನ್ನು ಕೊಡಲು ನಾವು ಬಿಡುವುದಿಲ್ಲ. ಇದನ್ನು ಸಂವಿಧಾನದ ಅಡಿಯಲ್ಲಿ ಕೊಡ್ತಾ ಇದ್ದೀರಾ? ಇದನ್ನು ಕೂಡಲೇ ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ.

ಗ್ಯಾರಂಟಿ ಅನುಷ್ಠಾನ ಸಮಿತಿಗಳು ಕಾನೂನುಬಾಹಿರ ಮತ್ತು ಅಸಾಂವಿಧಾನಿಕವಾಗಿವೆ. ಸಂವಿಧಾನದಂತೆ ಕೆಲಸ ಮಾಡುವುದು ಸರ್ಕಾರದ ಕರ್ತವ್ಯ. ಅವು ಸಾಂವಿಧಾನಿಕ ಹುದ್ದೆಗಳಲ್ಲ. ಆದ್ದರಿಂದ ಕೈಬಿಡಲೇಬೇಕು ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ಸಿನವರು ಖಜಾನೆಗೆ ಕನ್ನ ಹಾಕುತ್ತಿದ್ದಾರೆ. ಪ್ರತಿಯೊಂದು ವಿಷಯಕ್ಕೆ ಕೇಳಿದರೂ ಹಣ ಇಲ್ಲ ಎನ್ನುತ್ತೀರಿ. ಅಂಗನವಾಡಿ ಕಾರ್ಯಕರ್ತರಿಗೆ ಹಣ ಕೊಡುತ್ತಿಲ್ಲ; 9 ಯುನಿವರ್ಸಿಟಿ ಮುಚ್ಚುತ್ತಿದ್ದಾರೆ. ಕಾರ್ಯಕರ್ತರನ್ನು ಕಾಪಾಡಲು ಕಾಂಗ್ರೆಸ್ಸಿನಲ್ಲಿ ಹಣ ಇಲ್ಲವಾದರೆ, ಖಜಾನೆಗೆ ಕನ್ನ ಹಾಕುವುದಲ್ಲ; ಯೂನಿವರ್ಸಿಟಿ ಮುಚ್ಚುವುದು ಸರಿಯಲ್ಲ. ದುಡ್ಡಿಲ್ಲ ಎಂದಾದರೆ ಕಾಂಗ್ರೆಸ್ ಕಚೇರಿಯನ್ನೇ ಮುಚ್ಚಿ ಬಿಡಿ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಸರ್ಕಾರ ದಿನಕ್ಕೊಂದು ಹಗರಣ ಮಾಡಿ ಸಿಕ್ಕಿ ಹಾಕಿಕೊಳ್ಳುತ್ತಿದೆ. ಹಗರಣ ಸಂಬಂಧ ಉತ್ತರಿಸದೇ ವಾಮಮಾರ್ಗದಿಂದ ತಪ್ಪಿಸಿಕೊಳ್ಳುತ್ತಿದೆ. ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಪಾಲ್ಗೊಂಡ ಸಚಿವರು ಯಾರೆಂದು ಹೇಳಲಿ. ಕಾಂಗ್ರೆಸ್ಸಿನ ದುಂಡಾವರ್ತಿ ಕಥೆಗಳನ್ನು ಮಾನ್ಯ ರಾಜ್ಯಪಾಲರ ಮುಂದೆ ಬಿಚ್ಚಿ ಹೇಳಲಿದ್ದೇವೆ ಎಂದು ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜೆಡಿಎಸ್ ವಿಧಾನ ಪರಿಷತ್ತಿನ ನಾಯಕ ಬೋಜೆಗೌಡ ಮತ್ತು ಬಿಜೆಪಿ-ಜೆಡಿಎಸ್ ಶಾಸಕರು ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಭಾಗವಹಿಸಿದ್ದರು.

Share This Article