ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಬರುವ ಕರ್ನಾಟಕ ವಸತಿ ಶಾಲಾ-ಕಾಲೇಜುಗಳಲ್ಲಿ (Residential School and Colleges) ಧಾರ್ಮಿಕ ಹಬ್ಬಗಳ ಆಚರಣೆ ಮಾಡಬಾರದು ಎಂದು ಹೊರಡಿಸಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ.
ಆದೇಶ ವಿವಾದದ ಸ್ಮರೂಪ ಪಡೆದುಕೊಂಡ ಬೆನ್ನಲ್ಲೇ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಆದೇಶವನ್ನು ವಾಪಸ್ ಪಡೆದಿದೆ. ಇದನ್ನೂ ಓದಿ: ವಸತಿ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆಗೆ ಸರ್ಕಾರ ಬ್ರೇಕ್
ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಬರುವ ಕರ್ನಾಟಕ ವಸತಿ ಶಾಲಾ-ಕಾಲೇಜುಗಳಲ್ಲಿ ಇನ್ಮುಂದೆ ಧಾರ್ಮಿಕ ಹಬ್ಬಗಳನ್ನು ಆಚರಣೆ ಮಾಡದಂತೆ ಆದೇಶ ಹೊರಡಿಸಲಾಗಿತ್ತು. ಸರ್ಕಾರದ ಸೂಚನೆ ಮೇರೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಯಾವುದೇ ಧರ್ಮದ ಧಾರ್ಮಿಕ ಹಬ್ಬಗಳನ್ನ ಇನ್ನು ಮುಂದೆ ವಸತಿ ಶಾಲಾ-ಕಾಲೇಜುಗಳಲ್ಲಿ ಆಚರಣೆ ಮಾಡದಂತೆ ಸುತ್ತೋಲೆ ಹೊರಡಿಸಿತ್ತು.
ಯುಗಾದಿ, ರಂಜಾನ್, ಕ್ರಿಸ್ಮಸ್, ಸಂಕ್ರಾಂತಿ, ಈದ್ ಮಿಲಾದ್ ಸೇರಿ ಯಾವುದೇ ಧರ್ಮದ ಧಾರ್ಮಿಕ ಹಬ್ಬಗಳನ್ನು ಆಚರಣೆ ಮಾಡಬಾರದು. ಕೇವಲ ರಾಷ್ಟ್ರೀಯ ಹಬ್ಬಗಳು, ನಾಡಹಬ್ಬ ಮತ್ತು ಆಯ್ದ ಮಹಾ ಪುರುಷರು ಜಯಂತಿ ಸೇರಿ 10 ಆಚರಣೆಗಳನ್ನ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಇದನ್ನೂ ಓದಿ: ವಿಧಾನ ಪರಿಷತ್ನಲ್ಲಿ ಗಲಾಟೆ ಸೃಷ್ಟಿಸಿದ ಕೇಂದ್ರ ಸರ್ಕಾರದ ಅನುದಾನ ಫೈಟ್
ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ, ಕನ್ನಡ ರಾಜ್ಯೋತ್ಸವ, ಅಂಬೇಡ್ಕರ್ ಜಯಂತಿ, ವಾಲ್ಮೀಕಿ ಜಯಂತಿ, ಕನಕದಾಸರ ಜಯಂತಿ, ಬಸವ ಜಯಂತಿ, ಸಂವಿಧಾನ ದಿನಾಚರಣೆ ಹಾಗೂ ಯೋಗ ದಿನಾಚರಣೆ ಮಾತ್ರ ಆಚರಣೆ ಮಾಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಒಂದು ವೇಳೆ ನಿಯಮ ಮೀರಿ ಧಾರ್ಮಿಕ ಹಬ್ಬಗಳು ಆಚರಣೆ ಮಾಡಿದರೆ ಶಾಲಾ-ಕಾಲೇಜುಗಳ ಮುಖ್ಯಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ನೀಡಲಾಗಿತ್ತು.