ಬೆಂಗಳೂರು: ಕಳೆದ ಕೆಲ ತಿಂಗಳಿನಿಂದ ಸುದ್ದಿಯಾಗುತ್ತಿರುವ ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Second International Airport) ನಿರ್ಮಾಣದ ಸ್ಥಳ ಗುರುತಿಸುವಿಕೆಗೆ ಕೆಲಸವನ್ನು ಸರ್ಕಾರ ಫೈನಲ್ ಮಾಡಿದೆ. ಒಟ್ಟು ಮೂರು ಸ್ಥಳಗಳನ್ನು ಗುರುತು ಮಾಡಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾಪವನ್ನು ಕಳುಹಿಸಿದೆ.
ಕನಕಪುರ (Kanakapura) ರಸ್ತೆಯ ಎರಡು ಸ್ಥಳ ಮತ್ತು ನೆಲಮಂಗಲ-ಕುಣಿಗಲ್ (Nelamangala-Kunigal) ರಸ್ತೆಯಲ್ಲಿ ಒಂದು ಜಾಗವನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ಕನಕಪುರ ರಸ್ತೆಯ ಒಂದು ಜಾಗ 4,800 ಎಕ್ರೆ ಇದ್ದರೆ ಇನ್ನೊಂದು ಜಾಗ 5,000 ಎಕ್ರೆ ಇದೆ. ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿರುವ ಜಾಗ 5,200 ಎಕ್ರೆ ಇದೆ.
ಈ ಮೂರು ಸ್ಥಳಗಳು ನಗರ ಕೇಂದ್ರದಿಂದ 50 ಕಿ.ಮೀ ವ್ಯಾಪ್ತಿಯಲ್ಲಿ ಬರಲಿದೆ. ಪ್ರಸ್ತಾವಿತ ಜಾಗಕ್ಕೆ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕವೂ ಸಿಗಲಿದೆ. ಯಾವ ಸ್ಥಳದಲ್ಲಿ ನಿರ್ಮಿಸಿದರೂ ಆರ್ಥಿಕವಾಗಿ ಲಾಭ ಎಂದು ತಿಳಿಸಿದೆ. ಈ ಸ್ಥಳಗಳಲ್ಲಿ ಒಂದು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬಂದರೆ, ಇನ್ನೊಂದು ರಾಮನಗರ ಜಿಲ್ಲೆಯಲ್ಲಿದೆ. ಇವುಗಳಲ್ಲಿ ಹಾರೋಹಳ್ಳಿ ಬಳಿಯ ಒಂದು ಸ್ಥಳವು ಮೆಟ್ರೋದ ಹಸಿರು ಮಾರ್ಗದ ಕೊನೆಯ ನಿಲ್ದಾಣದಿಂದ 10 ಕಿ.ಮೀ ದೂರದಲ್ಲಿದೆ. ಇದನ್ನೂ ಓದಿ: HAL ವಿಮಾನ ನಿಲ್ದಾಣವನ್ನು ಆದಷ್ಟು ಬೇಗ ತೆರೆಯಬೇಕು: ತೇಜಸ್ವಿ ಸೂರ್ಯ
ಮುಂದೇನು?
ಕೇಂದ್ರದ ವಿಮಾನಯಾನ ಪ್ರಾಧಿಕಾರ ಸ್ಥಳ ವರದಿಗೆ ತಂಡವನ್ನು ಕಳುಹಿಸಿ ಕೊಡಲಿದೆ. ಈ ವರದಿಯ ಶಿಫಾರಸ್ಸಿನ ನಂತರ ಸ್ಥಳವನ್ನು ಫೈನಲ್ ಮಾಡಲಾಗುತ್ತದೆ.
2ನೇ ವಿಮಾನ ನಿಲ್ದಾಣ ಯಾಕೆ?
ಬೆಂಗಳೂರಿನ ಪ್ರಯಾಣಿಕರನ್ನು ಸೆಳೆಯಲು ಮತ್ತು ತಮಿಳುನಾಡಿಗೂ ಅನುಕೂಲವಾಗುವಂತೆ ಕರ್ನಾಟಕ ಗಡಿ ಭಾಗವಾದ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಣಕ್ಕೆ ತಮಿಳುನಾಡು ಸರ್ಕಾರ ಸಿದ್ಧತೆ ನಡೆಸುತ್ತಿದೆ.
ಸದ್ಯ ಈಗ ದೇವನಹಳ್ಳಿಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ ಬೆಂಗಳೂರು ಉತ್ತರ ಭಾಗದಲ್ಲಿದೆ. ಈ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದಕ್ಷಿಣ ಭಾಗ, ಎಲೆಕ್ಟ್ರಾನಿಕ್ ಸಿಟಿಯಿಂದ ಪ್ರಯಾಣಿಕರು ಹೋಗುತ್ತಿದ್ದಾರೆ. ಒಂದು ವೇಳೆ ಹೊಸೂರಿನಲ್ಲಿ ನಿಲ್ದಾಣವಾದರೆ ದಕ್ಷಿಣ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುವ ಸಾಧ್ಯತೆಯಿದೆ. ಈ ಕಾರಣಕ್ಕೆ ದಕ್ಷಿಣ ಭಾಗದಲ್ಲಿ ವಿಮಾನ ನಿಲ್ದಾಣಕ್ಕೆ ಜಾಗವನ್ನು ಗುರುತಿಸಲಾಗಿದೆ.
ರಾಜ್ಯ ಸರ್ಕಾರ ನಿಗದಿಪಡಿಸಿರುವ ಕನಕಪುರದ ಎರಡು ಜಾಗ ನೈಸ್ ರಸ್ತೆಯಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿದ್ದು, ಸಮೀಪದ ಮೆಟ್ರೋ ನಿಲ್ದಾಣ ಸಹ 5 ಕಿಲೋಮೀಟರ್ ವ್ಯಾಪ್ತಿಯಲ್ಲಿದೆ. ಈ ಮೂಲಕ ತುಮಕೂರು ಭಾಗದಿಂದ ಬರುವ ಪ್ರಯಾಣಿಕರು ಹಾಗೂ ಬೆಂಗಳೂರು ಸೇರಿದಂತೆ ಮೈಸೂರು ಕಡೆಯಿಂದ ಬರುವ ಪ್ರಯಾಣಿಕರಿಗೂ ಅನುಕೂಲವಾಗುವಂತೆ ಸ್ಥಳ ನಿಗದಿಪಡಿಸಲಾಗಿದೆ.
2033ರವರೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 150 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಹೊಸ ವಿಮಾನ ನಿಲ್ದಾಣ ಇರಬಾರದು ಎಂಬ ಒಪ್ಪಂದ ಇದೆ. ಈ ಒಪ್ಪಂದ ಅಂತ್ಯವಾಗಲು ಇನ್ನು 8 ವರ್ಷ ಇರುವಾಗಲೇ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗ ಕರ್ನಾಟಕ ಮತ್ತು ತಮಿಳುನಾಡು ಮುಂದಾಗುತ್ತಿವೆ. ಇದನ್ನೂ ಓದಿ: 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರ್ನಾಟಕ ಮುಂದಾಗುತ್ತಿದ್ದಂತೆ ಹೊಸೂರಿನಲ್ಲಿ ಏರ್ಪೋರ್ಟ್ ಘೋಷಿಸಿದ ಸ್ಟಾಲಿನ್
ಕಳೆದ ಅಕ್ಟೋಬರ್‌ನಲ್ಲಿ ವಿಮಾನ ನಿಲ್ದಾಣ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್, ಎಂಬಿ ಪಾಟೀಲ್, ಪ್ರಿಯಾಂಕ್ ಖರ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಸಭೆಯ ನಂತರ ಪ್ರತಿಕ್ರಿಯಿಸಿದ್ದ ಎಂಬಿ ಪಾಟೀಲ್, ಎರಡನೇ ವಿಮಾನ ನಿಲ್ದಾಣ (Second Airport) ನಿರ್ಮಾಣಕ್ಕೆ 5 ಸ್ಥಳ ಗುರುತಿಸಲಾಗಿದೆ. ಆದರೆ ಯಾವುದೇ ಸ್ಥಳ ಅಂತಿಮವಾಗಿಲ್ಲ. ದಾಬಾಸ್ ಪೇಟೆ, ನೆಲಮಂಗಲ, ಕುಣಿಗಲ್ ರಸ್ತೆಯಲ್ಲಿಎರಡು ಜಾಗ, ಹಾರೋಹಳ್ಳಿ ಹಾಗೂ ಬಿಡದಿ ಜಾಗ ಗುರುತಿಸಿದ್ದೇವೆ ಎಂದು ಮಾಹಿತಿ ನೀಡಿದ್ದರು.
ಈ ಹಿಂದೆ ರಾಮನಗರ, ಕನಕಪುರ ಭಾಗದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಡಿಕೆ ಶಿವಕುಮಾರ್, ಈ ಭಾಗದ ಜನರಿಗೆ ಮನವಿ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ನಿಮ್ಮ ಆಸ್ತಿಯನ್ನು ಮಾರಬೇಡಿ. ಮುಂದಿನ ದಿನಗಳಲ್ಲಿ ಇಲ್ಲಿನ ಭೂಮಿಗೆ ಚಿನ್ನದ ಬೆಲೆ ಬರಲಿದೆ. ಆದ್ದರಿಂದ ಆಸ್ತಿಯನ್ನ ಮಾರದೇ ಉಳಿಸಿಕೊಳ್ಳಿ. ಒಂದಲ್ಲ ಒಂದು ದಿನ ಇಲ್ಲಿನ ಗ್ರಾಮಗಳು ಬೆಂಗಳೂರು ಆಗೇ ಆಗುತ್ತವೆ. ಪ್ರತಿ ಅಡಿ ಲೆಕ್ಕದಲ್ಲಿ ಬೆಲೆ ಕಟ್ಟಲಾಗುತ್ತದೆ. ಆದ ಕಾರಣ ನನ್ನ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಎಂದಿದ್ದರು.
ರಾಮನಗರವನ್ನು ಬೆಂಗಳೂರು ದಕ್ಷಿಣಕ್ಕೆ ಸೇರಿಸಬೇಕು ಎಂದು ಈ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಒತ್ತಾಯ ಮಾಡಿದ್ದರು. ಈ ಒತ್ತಾಯದ ಬೆನ್ನಲ್ಲೇ ವಿಮಾನ ನಿಲ್ದಾಣ ತರಲು ಪ್ಲ್ಯಾನ್ ಮಾಡಲಾಗಿದ್ಯಾ ಎಂಬ ಪ್ರಶ್ನೆ ಎದ್ದಿದೆ.