Web Stories
ನವದೆಹಲಿ: ಕಾಂಗ್ರೆಸ್ ಸರ್ಕಾರ (Karnataka Congress Government) 10 ಕೆಜಿ ಅಕ್ಕಿಗೆ ಹಣವನ್ನು ನೀಡಬೇಕು ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಆಗ್ರಹಿಸಿದ್ದಾರೆ.
5 ಕೆಜಿ ಅಕ್ಕಿಯ ಬದಲಿಗೆ ಪ್ರತಿ ಕೆಜಿಗೆ 34 ರೂಪಾಯಿಂತೆ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲು ಮುಂದಾದ ಕಾಂಗ್ರೆಸ್ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ನಾಯಕರು 10 ಕೆಜಿ ಅಕ್ಕಿ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಈ ಕಾರಣಕ್ಕೆ 10 ಕೆಜಿ ಅಕ್ಕಿಗೆ ಹಣವನ್ನು ನೀಡಬೇಕು ಎಂದು ಹೇಳಿದರು. ಇದನ್ನೂ ಓದಿ: 5 ಕೆಜಿ ಅಕ್ಕಿಯ ಬದಲು ಖಾತೆಗೆ ಹಣ ಹಾಕಲು ಸರ್ಕಾರ ನಿರ್ಧಾರ: ಮುನಿಯಪ್ಪ
10 ಕೆಜಿ ಬೇಕಾ ಬೇಡ್ವಾ ಕೈ ಎತ್ತಿ ಎಂದು ಸಿದ್ದರಾಮಯ್ಯ (Siddaramaiah) ಭಾಷಣ ಮಾಡಿದ್ದರು. ಸಿದ್ದರಾಮಯ್ಯನವರು ನಾವೇ ಅಕ್ಕಿಕೊಟ್ಟಿದ್ದು ಎಂದು ದಾರಿ ತಪ್ಪಿಸುತ್ತಿದ್ದರು. ಇವತ್ತು ಮೊದಲ ಬಾರಿಗೆ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ. ಕನಿಷ್ಠ ಪಕ್ಷ 5 ಕೆಜಿಗೆ ಹಣ ನೀಡುತ್ತಿದ್ದಾರೆ ಎನ್ನುವುದೇ ಸಮಾಧಾನ ಎಂದು ವಾಗ್ದಾಳಿ ನಡೆಸಿದರು.
10 ಕೆಜಿಗೆ ಅಕ್ಕಿಯ ಹಣ ನೀಡಿದ್ದರೆ ಮರ್ಯಾದಾಸ್ಥರ ಲಕ್ಷಣ ಆಗುತ್ತಿತ್ತು. ಸಿದ್ದರಾಮಯ್ಯ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಎಲ್ಲಾ ರಾಜ್ಯಗಳ 80 ಕೋಟಿ ಜನರಿಗೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿದೆ. ನೈಸರ್ಗಿಕ ವಿಕೋಪ, ತುರ್ತು ಪರಿಸ್ಥಿತಿಯಲ್ಲಿ ಅಕ್ಕಿಕೊಡಬೇಕಾಗುತ್ತದೆ. ಈ ಕಾರಣಕ್ಕೆ ಕೇಂದ್ರ ಸರಕಾರ ಬಫರ್ ಸ್ಟಾಕ್ ಇಟ್ಟುಕೊಳ್ಳಬೇಕು. ಬಿಜೆಪಿ ಸರ್ಕಾರ ಇರುವ ರಾಜ್ಯಗಳಿಗೂ ಹೆಚ್ಚುವರಿ ಅಕ್ಕಿಯನ್ನು ಕೊಟ್ಟಿಲ್ಲ ಎಂದರು.
ಯಾರನ್ನು ಕೇಳದೇ ಸಿದ್ದರಾಮಯ್ಯ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ನಮ್ಮ ಬಳಿ ಅಕ್ಕಿ ಇದ್ದರೆ ಕೊಡುತ್ತಿದ್ದೆವು. ಬೇರೆ ರಾಜ್ಯಗಳು ಕೂಡ 10 ಕೆಜಿ ಕೇಳಿದರೆ ಎಲ್ಲಿಂದ ಕೊಡುವುದು? ದೇಶದಲ್ಲಿ ಅಕ್ಕಿ ಸ್ಟಾಕ್ ಇರಲೇ ಬೇಕು. ನೀವು ಗ್ಯಾರಂಟಿ ಕಾರ್ಡ್‌ನಲ್ಲಿ ಸಹಿ ಹಾಕುವಾಗ ಯೋಚನೆ ಮಾಡಬೇಕಿತ್ತು. ಸುಳ್ಳು ಹೇಳುವುದು ಕಾಂಗ್ರೆಸ್ ಡಿಎನ್‌ಎನಲ್ಲಿದೆ. ಹಿಮಾಚಲ, ರಾಜಸ್ಥಾನದಲ್ಲಿ ಘೋಷಣೆ ಮಾಡಿದ ಗ್ಯಾರಂಟಿ ಪೂರ್ಣವಾಗಿಲ್ಲ. ಈಗ ಕರ್ನಾಟಕದಲ್ಲೂ ಜನರನ್ನು ಸಿದ್ದರಾಮಯ್ಯ ಮೋಸದಿಂದ ವಂಚಿಸಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳು ಶರಣಾಗದಿದ್ದರೆ ಮನೆ ಜಪ್ತಿ
ಪಕ್ಷದ ನಾಯಕರ ವಿರುದ್ಧ ರೇಣುಕಾರ್ಯ ಅಸಮಾಧಾನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾವು ಸೋತಿರಬಹುದು, ನಮ್ಮದು ಐಡಿಯಾಲಜಿ ಪಾರ್ಟಿ. ಯಾವುದೇ ನಾಯಕರು ಬಹಿರಂಗವಾಗಿ ಮಾತನಾಡಬಾರದು. ಬಿಜೆಪಿ ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕು. ಶೀಘ್ರದಲ್ಲೇ ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆಯಾಗಲಿದೆ ಎಂದು ತಿಳಿಸಿದರು.