Connect with us

Bengaluru City

ಕೊನೆಗೂ ಕರ್ನಾಟಕದ ಮಲ್ಟಿಪ್ಲೆಕ್ಸ್ ಗಳಲ್ಲಿ 200 ರೂ. ಗರಿಷ್ಟ ಟಿಕೆಟ್ ದರ ಫಿಕ್ಸ್: ಆದೇಶದ ಪೂರ್ಣ ಪ್ರತಿ ಇಲ್ಲಿದೆ

Published

on

ಬೆಂಗಳೂರು: ಕರ್ನಾಟಕದ ಸಿನಿ ಅಭಿಮಾನಿಗಳಿಗೆ ಗುಡ್ ನ್ಯೂಸ್. ಕೊನೆಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಗರಿಷ್ಟ ಟಿಕೆಟ್ ದರ 200 ರೂ. ಫಿಕ್ಸ್ ಆಗಿದ್ದು, ಇಂದಿನಿಂದಲೇ ಅಧಿಕೃತ ಆದೇಶ ಜಾರಿಯಾಗಿದೆ. ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆಯಿಂದ ಆದೇಶ ಪ್ರಕಟವಾಗಿದ್ದು, ಎಲ್ಲ ಭಾಷೆಯ ಚಿತ್ರಗಳಿಗೆ ಇದು ಅನ್ವಯವಾಗಲಿದೆ.

ಆದೇಶದಲ್ಲಿ ಏನಿದೆ?
ಮಲ್ಟಿಪ್ಲೆಕ್ಸ್ ಗಳ ಪ್ರಮುಖ ಅವಧಿಯಲ್ಲಿ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಚಿತ್ರವನ್ನು ಒಂದು ಪರದೆಯಲ್ಲಿ ಮಧ್ಯಾಹ್ನ 1.30 ರಿಂದ ಸಂಜೆ 7.30 ರವರೆಗಿನ ಪ್ರಮುಖ ಅವಧಿಯಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉಲ್ಲೇಖಿಸಲಾಗಿದೆ.

ಐ-ಮ್ಯಾಕ್ಸ್, 4ಡಿಎಕ್ಸ್ ಚಿತ್ರಮಂದಿರಗಳಗೆ ಈ ಆದೇಶ ಅನ್ವಯವಾಗುವುದಿಲ್ಲ. ಜೊತೆಗೆ ಗೋಲ್ಡ್ ಕ್ಲಾಸ್ ಗೂ ಈ ಆದೇಶ ಅನ್ವಯವಾಗುವುದಿಲ್ಲ. ಆದರೆ ಪ್ರತಿ ಚಿತ್ರಮಂದಿರದಲ್ಲೂ ಗೋಲ್ಡ್ ಕ್ಲಾಸ್ ಶೇ.10 ರಷ್ಟು ಸೀಟುಗಳನ್ನು ಮೀರಬಾರದು ಎನ್ನುವ ಅಂಶ ಆದೇಶದಲ್ಲಿದೆ.

ಸಿಎಂ ಸಿದ್ದರಾಮಯ್ಯ ಸೋಮವಾರ ಯಶವಂತಪುರದಲ್ಲಿರುವ ಒರಾಯನ್ ಮಾಲ್‍ನಲ್ಲಿ 1050 ರೂ. ನೀಡಿ ಬಾಹುಬಲಿ ಸಿನಿಮಾ ವೀಕ್ಷಿಸಿದ್ದರು. ಬಜೆಟ್ ನಲ್ಲಿ 200 ರೂ. ಗರಿಷ್ಟ ದರ ನಿಗದಿ ಪಡಿಸಿ 1050 ರೂ. ನೀಡಿ ಟಿಕೆಟ್ ಖರೀದಿ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಜೆಟ್ ನಲ್ಲಿ ನೀವೇ ಗರಿಷ್ಟ ದರ ಫಿಕ್ಸ್ ಮಾಡಿ ದುಬಾರಿ ಟಿಕೆಟ್ ನೀಡಿ ಸಿನಿಮಾ ವೀಕ್ಷಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು. ಜನರ ಮತ್ತು ಮಾಧ್ಯಮಗಳಿಂದ ಟೀಕೆ ಜಾಸ್ತಿಯಾಗುತ್ತಿದ್ದಂತೆ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಅಧಿಕೃತವಾಗಿ ಈ ಆದೇಶವನ್ನು ಪ್ರಕಟಿಸಿದೆ.

ಏಪ್ರಿಲ್ 26 ರಂದು 2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಲ್ಟಿಪ್ಲೆಕ್ಸ್ ಗಳಲ್ಲಿ ಇನ್ಮುಂದೆ ಟಿಕೆಟ್ ದರ 200 ರೂ. ನಿಗದಿಪಡಿಸುವುದರ ಜೊತೆ ಮಲ್ಟಿಪ್ಲೆಕ್ಸ್ ಗಳಲ್ಲಿ ದಿನಕ್ಕೆ 2 ಶೋಗಳನ್ನು ಕನ್ನಡ ಚಿತ್ರ ಪ್ರದರ್ಶಿಸಲು ನಾಳೆ ಅಥವಾ ನಾಡಿದ್ದು ಸರ್ಕಾರಿ ಆದೇಶ ಮಾಡಲಾಗುವುದು. ಹಾಗೆಯೇ, ಪ್ರೈಮ್ ಸಮಯದಲ್ಲಿ ಕನ್ನಡ ಚಿತ್ರಗಳಿಗಾಗಿ ಎರಡು ಶೋಗಳನ್ನ ಮೀಸಲಿಡಬೇಕು ಎಂದು ಕೂಡ ಆದೇಶಿಸುವುದಾಗಿ ತಿಳಿಸಿದ್ದರು.

ಸಿಎಂ ಈ ಹೇಳಿಕೆಯ ಬಳಿಕ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಏ. 26ರಂದು ಫಿಲಂ ಚೇಂಬರ್ ನಲ್ಲಿ ಸುದ್ದಿಗೋಷ್ಠಿ ನಡೆಸಿ, ಬಜೆಟ್‍ನಲ್ಲಿ ಘೋಷಣೆಯಾಗಿರುವ ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್ ದರ 200 ರೂ.ಗೆ ನಿಗದಿ ಪಡಿಸಿರುವ ಆದೇಶ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಮಂಗಳವಾರ ರಾತ್ರಿ ಸಹಿ ಮಾಡಿದ್ದಾರೆ. ಗುರುವಾರ ಈ ಪತ್ರ ವಾಣಿಜ್ಯ ಮಂಡಳಿಗೆ ತಲುಪಲಿದೆ. ಪತ್ರ ಬಂದ ತಕ್ಷಣವೇ ಏಕರೂಪ ದರ ಜಾರಿಯಾಗಲಿದೆ ಎಂದು ತಿಳಿಸಿದ್ದರು. ಆದರೆ ಇವರಿಬ್ಬರು ಹೇಳಿಕೆ ನೀಡಿದ್ದರೆ ವಿನಾಃ ಆದೇಶ ಮಾತ್ರ ಜಾರಿಯಾಗಿರಲಿಲ್ಲ.

ದರ ಕಡಿಮೆಯಾಗಿದ್ದು ಯಾಕೆ?
ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಮಾಲೀಕರು ಸಿನಿಮಾಗೆ ಹೆಚ್ಚು ದರದ ಟಿಕೆಟ್ ನಿಗದಿ ಮಾಡುವ ಕಾರಣ ಜನ ಥಿಯೇಟರ್ ಗಳಿಗೆ ಬರುತ್ತಿಲ್ಲ. ಒಂದೊಂದು ಮಾಲ್ ನಲ್ಲಿ ಬೇರೆ ಬೇರೆ ರೀತಿಯ ದರವಿದೆ. ಹೀಗಾಗಿ ಟಿಕೆಟ್ ದರವನ್ನು ಕಡಿಮೆ ಮಾಡಿ ಏಕರೂಪದ ದರವನ್ನು ತರಬೇಕು ಎಂದು ಆಗ್ರಹಿಸಿ ಜನ ಮತ್ತು ಸಿನಿಮಾ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಕಳೆದ ವರ್ಷ ಆಂದೋಲನವನ್ನು ನಡೆಸಿದ್ದರು. ತಮಿಳುನಾಡಿನಲ್ಲಿ ಗರಿಷ್ಠ 120 ರೂ. ಟಿಕೆಟ್, ಆಂಧ್ರಪ್ರದೇಶದಲ್ಲಿ ಗರಿಷ್ಠ 150 ರೂ. ನಿಗದಿಯಾಗಿರುವಾಗ ನಮ್ಮಲ್ಲಿ ಯಾಕೆ ದರವನ್ನು ನಿಗದಿ ಮಾಡಬಾರದು ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು.

ಒತ್ತಡ ಜಾಸ್ತಿ ಆಗುತ್ತಿದ್ದಂತೆ ಸರ್ಕಾರ ಈ ಸಮಸ್ಯೆಯ ಬಗ್ಗೆ ಅಧ್ಯಯನ ನಡೆಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ನೇತೃತ್ವದಲ್ಲಿ ಗಿರೀಶ್ ಕಾಸರವಳ್ಳಿ, ಭಾರತಿ ವಿಷ್ಣುವರ್ಧನ್, ರಾಘವೇಂದ್ರ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್, ಭಾಷಾ, ಜಯಮಾಲ, ಥಾಮಸ್ ಡಿಸೋಜಾ, ಕೆ ವಿ ಚಂದ್ರಶೇಖರ್ ಮತ್ತು ಗಂಗಾಧರ್ ಮೊದಲಿಯಾರ್ ಅವರುಗಳನ್ನು ಒಳಗೊಂಡ 17 ಜನರ ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ಟಿಕೆಟ್ ದರಕ್ಕೆ ಗರಿಷ್ಠ ಮಿತಿಯನ್ನು ನಿಗದಿಪಡಿಸಬೇಕು ಹಾಗೂ ಪ್ರೈಮ್ ಟೈಂನಲ್ಲಿ ಪ್ರತಿ ಮಲ್ಟಿಪ್ಲೆಕ್ಸ್ ನಲ್ಲಿ ಎರಡು ಕನ್ನಡ ಸಿನೆಮಾಗಳನ್ನು ಕಡ್ಡಾಯವಾಗಿ ತೋರಿಸಲು ನಿಯಮ ಹೇರುವಂತೆ ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿಯನ್ನು ಅನುಷ್ಠಾನಗೊಳಿಸಲು ಸರ್ಕಾರ ಈಗ ಮುಂದಾಗಿದೆ.

Click to comment

Leave a Reply

Your email address will not be published. Required fields are marked *