Tuesday, 17th July 2018

ಸಿಎಂ ಈಗ ಪ್ರವಾಸದಲ್ಲಿದ್ದು, ಬಂದ ಮೇಲೆ ಪಿಎಫ್‍ಐ ಬ್ಯಾನ್ ಚರ್ಚೆ ಮಾಡ್ತೀವಿ: ರಾಮಲಿಂಗಾ ರೆಡ್ಡಿ

ಬಾಗಲಕೋಟೆ: ಪಿಎಫ್‍ಐ ಸಂಘಟನೆಯನ್ನು ಬ್ಯಾನ್ ಮಾಡುವಂತೆ ಬಿಜೆಪಿಯವರು ಆಗ್ರಹ ಮಾಡುತ್ತಿದ್ದಾರೆ. ಆದ್ರೆ ಸದ್ಯ ಪಿಎಫ್‍ಐ ಸೇರಿದಂತೆ ಯಾವುದೇ ಸಂಘಟನೆಗಳನ್ನು ಬ್ಯಾನ್ ಮಾಡುವ ಪ್ರಸ್ತಾಪವಿಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರವಾಸದಲ್ಲಿರೋದರಿಂದ ಅವರು ಬಂದ ಮೇಲೆ ಈ ಬಗ್ಗೆ ಚರ್ಚಿಸಲಾಗುವುದು. ಸಂಘಟನೆ, ಬಿಜೆಪಿ ಈ ವಿಚಾರದಲ್ಲಿ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ಪಿಎಫ್ ಐ ಬ್ಯಾನ್ ಮಾಡಬೇಕೆಂದು ಇವರು ಒತ್ತಾಯ ಮಾಡುತ್ತಿದ್ದಾರೆ. ಆದರೆ ದಕ್ಷಿಣ ಕನ್ನಡದ ಗ್ರಾಮ ಪಂಚಾಯಿತಿ ಮತ್ತು ಪಟ್ಟಣಪಂಚಾಯನ್ ನಲ್ಲಿ ಇವರು ಪಿಎಫ್‍ಐ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅಂದ್ರು.  ಇದನ್ನೂ ಓದಿ; ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಹೆಚ್ಚಿದ ಒತ್ತಡ- ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆಗೆ ಬಿಜೆಪಿ ಕರೆ

ಬಿಜೆಪಿಯವರು ಚುನಾವಣೆಗೋಸ್ಕರ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ ಅವರು, ಬಿಜೆಪಿಯವರು ಮುಂದಿನ ಬಾರಿ ಅಧಿಕಾರಕ್ಕೆ ಬರುತ್ತೇವೆ ಎಂದು ಹಗಲುಗನಸು ಕಾಣುತ್ತಿದ್ದಾರೆ. ಆದರೆ ಮುಂದಿನ ಬಾರಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ದೀಪಕ್ ರಾವ್ ಹತ್ಯೆಗೆ ಫಾರಿನ್ ಫಂಡಿಂಗ್- ಟಾರ್ಗೆಟ್ ಗ್ರೂಪ್ ಮೂಲಕ ಸುಪಾರಿ

ಎನ್‍ಐಎ ಹೆಗಲಿಗೆ ಕೇಸ್: ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೋಮು ಸಂಘರ್ಷ ಹಾಗೂ ಹತ್ಯೆಯಂತಹ ಘಟನೆಗಳಿಗೆ ಕುಮ್ಮಕ್ಕು ನೀಡುವ ಎಲ್ಲ ಸಂಘಟನೆಗಳೂ ನಿಷೇಧವಾಗಲಿ ನಮಗೆ ಸಿಬಿಐ ಮೇಲೂ ವಿಶ್ವಾಸವಿದೆ, ಎನ್‍ಐಎ ಮೇಲೂ ವಿಶ್ವಾಸವಿದೆ. ನಮ್ಮ ಪೊಲೀಸರ ಮೇಲೂ ವಿಶ್ವಾಸವಿದೆ ಎಂದು ಬರೆದುಕೊಂಡಿದ್ದಾರೆ.

ಮಂಗಳೂರಿನ ಕಾಟಿಪಳ್ಳದಲ್ಲಿ ನಡೆದ ದೀಪಕ್ ಹತ್ಯೆ ದುಃಖಕರ ಸಂಗತಿಯಾಗಿದ್ದು, ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಸರ್ಕಾರ ಯಾರ ಪರವು ಇಲ್ಲ ವಿರುದ್ಧವೂ ಇಲ್ಲ , ತಪ್ಪು ಮಾಡಿದವರನ್ನು ಶಿಕ್ಷಿಸುವ ಕೆಲಸ ಮಾಡುತ್ತೇವೆಂದು ರಾಮಲಿಂಗಾ ರೆಡ್ಡಿ ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಎನ್‍ಐಎ ತನಿಖೆ ಒಪ್ಪಿಸಬೇಕೆಂದು ಬಿಜೆಪಿ ನಾಯಕರು ಆಗ್ರಹಿಸಿದ್ದರು.

Leave a Reply

Your email address will not be published. Required fields are marked *