ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ತಮಿಳುನಾಡಿಗೆ ಪ್ರತಿನಿತ್ಯ 1 ಟಿಎಂಸಿ ನೀರಿಗೆ ಬದಲಾಗಿ, ಜುಲೈ 31ರ ವರೆಗೆ 8 ಸಾವಿರ ಕ್ಯುಸೆಕ್ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಜುಲೈ 31ರ ವರೆಗೆ ತಮಿಳುನಾಡಿಗೆ (Tamil Nadu) ನಿತ್ಯ 1 ಟಿಎಂಸಿ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣಾ ಸಮಿತಿ ಶಿಫಾರಸು ಹಿನ್ನೆಲೆಯಲ್ಲಿ ಭಾನುವಾರ ವಿಧಾನಸೌಧದಲ್ಲಿ ಸರ್ವಪಕ್ಷಗಳ ಸಭೆ ನಡೆಸಲಾಯಿತು. ಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಘಟಾನುಘಟಿ ನಾಯಕರು ಪಾಲ್ಗೊಂಡಿದ್ದರು. ಸಮಗ್ರ ಚರ್ಚೆಯ ಬಳಿಕ ಎರಡು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
- Advertisement
ನಿರ್ಣಯ – 1
ಲೀಗಲ್ ಟೀಂ ಮೋಹನ್ ಕಾತರಕಿ ಅವರ ಸಲಹೆ ಮೇರೆಗೆ ತಮಿಳುನಾಡಿಗೆ 1 ಟಿಎಂಸಿ ಬದಲಾಗಿ 8 ಸಾವಿರ ಕ್ಯುಸೆಕ್ ನೀರು ಬಿಡಲು ತೀರ್ಮಾನ.
- Advertisement
ನಿರ್ಣಯ – 2
1 ಟಿಎಂಸಿ ನೀರು ಬಿಡಬೇಕು ಎಂಬ ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶಕ್ಕೆ ವಿರುದ್ಧವಾಗಿ ಕಾವೇರಿ ನೀರು ನಿರ್ವಹಣಾ ಸಮಿತಿ (ಸಿಡಬ್ಲ್ಯೂಎಂಎ) ಮುಂದೆ ಮೇಲ್ಮನವಿ ಸಲ್ಲಿಸಲು ತೀರ್ಮಾನ.
ಸಭೆಯ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸರ್ವಪಕ್ಷಗಳ ಸಭೆಯಲ್ಲಿ ತಮಿಳುನಾಡಿಗೆ ಪ್ರತಿನಿತ್ಯ 1 ಟಿಎಂಸಿ ನೀರಿಗೆ ಬದಲಾಗಿ, 8 ಸಾವಿರ ಕ್ಯೂಸೆಕ್ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೇ ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶಕ್ಕೆ ವಿರುದ್ಧವಾಗಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಕಾವೇರಿ ವಿಚಾರವಾಗಿ ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದಿನ ಸರ್ವ ಪಕ್ಷಗಳ ಸಭೆ ಕರೆಯಲಾಗಿತ್ತು. ಅಶೋಕ್, ಸದಾನಂದಗೌಡ, ಜಿ.ಟಿ ದೇವೇಗೌಡ, ಸಿಟಿ ರವಿ, ಎ.ಮಂಜು, ರೈತ ಸಂಘದವರು, ಯದವೀರ್, ಕಾವೇರಿ ಭಾಗದ ಶಾಕಸರ ಇದ್ದರು. ಸಭೆಯಲ್ಲಿ ವಸ್ತು ಸ್ಥಿತಿಯನ್ನ ನಾನು, ಡಿಕೆ ಶಿವಕುಮಾರ್ ಕೊಟ್ಟಿದ್ದೇವೆ. ಲೀಗಲ್ ಟೀಂ ಕಾತರಕಿ, ಎ.ಜಿ ಶಶಿಕಿರಣ್ ಶೆಟ್ಟಿ ಅವರು ಸಭೆಯಲ್ಲಿ ಇದ್ದರು.
ಸಂಗ್ರಹವಿರುವ ನೀರು 2 ತಿಂಗಳಿಗೆ ಆಗುತ್ತೆ:
ಜುಲೈ 11 ರಂದು ನಡೆದ ಕಾವೇರಿ ನೀರು ನಿಯಂತ್ರಣಾ ಸಮಿತಿ ಸಭೆಯಲ್ಲಿ 31ರ ವರೆಗೆ ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಬಿಡುವಂತೆ ಶಿಫಾರಸು ಮಾಡಲಾಗಿತ್ತು. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ 9.14 ಟಿಎಂಸಿ ನೀರು ಬಿಡಬೇಕಿತ್ತು. ಜುಲೈನಲ್ಲಿ 31.24 ಟಿಎಂಸಿ ನೀರು ಬಿಡಬೇಕಿತ್ತು. ಆದ್ರೆ ಸಂಗ್ರಹವಿರುವ 40.43 ಟಿಎಂಸಿ ನೀರು 2 ತಿಂಗಳಿಗೆ ಆಗುತ್ತೆ. ಈಗ ನಾವು 5 ಟಿಎಂಸಿಗೂ ಹೆಚ್ಚು ನೀರು ಬಿಡುಗಡೆ ಮಾಡಿದ್ದೇವೆ ಎಂದು ವಿವರಿಸಿದರು.
1 ಟಿಎಂಸಿ ನೀರು ಬಿಡೋಕೆ ಆಗಲ್ಲ:
ಸಭೆಯಲ್ಲಿ ಕಾತರಕಿ ಅವರು ನೀರಿನ ಸಂಗ್ರಹದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಾರಿ ಸುಮಾರು 30% ಒಳಹರಿವು ಕಡಿಮೆಯಾಗಿದೆ. ಕಬಿನಿಯಲ್ಲಿ 96%, ಹಾರಂಗಿಯಲ್ಲಿ 76%, ಹೇಮಾವತಿಯಲ್ಲಿ 56%, ಕೆಆರ್‌ಎಸ್‌ನಲ್ಲಿ 54% ನೀರು ಸಂಗ್ರಹವಾಗಿದೆ. ಒಟ್ಟಾರೆಯಾಗಿ 63% ಮಾತ್ರ ನೀರು ಸಂಗ್ರಹ ಆಗಿದೆ. ಜುಲೈ 12ರಂದು 5 ಸಾವಿರ ಕ್ಯುಸೆಕ್ ಒಳಹರಿವು ಆಗಿತ್ತು, ಅಷ್ಟೇ ಹೊರಹರಿವೂ ಆಗಿದೆ. ಜು.13 ಮತ್ತು 14ರಂದು ಒಳಹರಿವು ಹೆಚ್ಚಾಗಿದ್ದರೂ, ಒಂದು ಟಿಎಂಸಿ ನೀರು ಬಿಡೋಕೆ ಕಷ್ಟಸಾಧ್ಯವಾಗಿದೆ. ಆದ್ದರಿಂದ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಮಳೆ ಕಡಿಮೆಯಾದ್ರೆ ಬಿಡೋ ನೀರೂ ಕಡಿಮೆ ಮಾಡ್ತೀವಿ:
ಸದ್ಯ 8 ಸಾವಿರ ಕ್ಯುಸೆಕ್ ನೀರು ಬಿಡುವ ನಿರ್ಧಾರ ಆಗಿದೆ. 1 ಟಿಎಂಸಿ ನೀರಿನ ಬದಲಾಗಿ 8 ಸಾವಿರ ಕ್ಯುಸೆಕ್ ಬಿಡಲು ಕಾತರಕಿ ಸಲಹೆ ಕೊಟ್ಟರು. ಮಳೆ ಬಾರದೇ ಹೋದರೆ ಕ್ಯುಸೆಕ್ ನೀರಿನಲ್ಲೂ ಕಡಿಮೆ ಮಾಡೋಣ, ಜೊತೆಗೆ ಅಪೀಲು ಹಾಕೋಣ ಅಂತಾ ಸಲಹೆ ಕೊಟ್ಟರು. ಅದರಂತೆ ತೀರ್ಮಾನ ಆಗಿದೆ. ಒಂದು ವೇಳೆ ಮಳೆ ಜಾಸ್ತಿ ಆದಲ್ಲಿ ಎಷ್ಟು ಬಿಡಬೇಕೋ ಅಷ್ಟು ನೀರು ಬಿಡ್ತೀವಿ. ಮಳೆ ಕಡಿಮೆ ಆದರೆ ಈಗ ಬಿಡುವ 8 ಸಾವಿರ ಕ್ಯುಸೆಕ್ ನೀರಿನಲ್ಲೂ ಕಡಿಮೆ ಮಾಡುತ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.