ಬೆಂಗಳೂರು: ಕಳೆದ 4 ದಿನಗಳಿಂದ ನಗರದ ಫ್ರೀಡಂ ಪಾರ್ಕಿನಲ್ಲಿ ನಡೆಸುತ್ತಿದ್ದ ಅಹೋರಾತ್ರಿ ಪ್ರತಿಭಟನೆಯನ್ನು ಸರ್ಕಾರದ ಭರವಸೆಯ ಮೇರೆಗೆ ಅಂಗನವಾಡಿ ಕಾರ್ಯಕರ್ತೆಯರು ವಾಪಸ್ ಪಡೆದುಕೊಂಡಿದ್ದಾರೆ.
ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಪ್ರತಿಭಟನಾ ನಿರತರು ಹೋರಾಟವನ್ನು ಕೈಬಿಟ್ಟಿದ್ದಾರೆ. ಸ್ಥಳದಲ್ಲಿ ಮಾತನಾಡಿದ ಉಮಾಶ್ರೀ, ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಏಪ್ರಿಲ್ ರಂದು 10 ರಂದು ಸಭೆ ನಡೆಸಲಾಗುವುದು. ವೇತನ ಸೇರಿದಂತೆ ಬೇಡಿಕೆಗಳನ್ನು ಈಡೇರಿಸುವುದಾಗಿ ಸಿಎಂ ಹೇಳಿದ್ದಾರೆ. ನಾವು ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಸರ್ಕಾರದ ಮೇಲೆ ವಿಶ್ವಾಸವಿಡಿ ಎಂದು ಹೇಳಿದರು.
Advertisement
ಗೌರವಧನ ಹೆಚ್ಚಳಕ್ಕಾಗಿ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹೋರಾಟ ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ ಸಂಘದ ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಹಾಗೂ ಇತರ ಮುಖಂಡರನ್ನು ಸಿಎಂ ಗೃಹ ಕಚೇರಿಗೆ ಕರೆದೊಯ್ದಿದ್ದರು.
Advertisement
ಅಂಗನವಾಡಿ ನೌಕರರ ಪರವಾಗಿ ಗೀತಸಾಹಿತಿ ವಿ.ನಾಗೇಂದ್ರ ಪ್ರಸಾದ್ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿ ಬೆಂಬಲ ವ್ಯಕ್ತಪಡಿಸಿದ್ದರು.
Advertisement
ನರ ಹರಿಯೆಕೂಗಿದರೂ ಮೊರೆ ಕೇಳದೇ ನರಹರಿಯೇ?
ಬಾಲವಾಡಿಯ ತಾಯಿ ಬಾಗಿಲು ಬಡಿದು ಹೈರಾಣಾಗಿ ಬೀದಿಯಲ್ಲಿ ಮಲಗಿದ್ದಾಳೆ.
ಅವಳಿಗೆ ಗೊತ್ತಿಲ್ಲ ನಿಮ್ಮ ಬಜೆಟ್ಟು…ಲೆಕ್ಕಾಚಾರ
ಗೊತ್ತಿರುವುದು ಸ್ಲೇಟು ಮತ್ತು ಅಕ್ಷರ
ಅವರು ಕೇಳುತ್ತಿರುವುದು ದಿನಕ್ಕೆ 500ರೂಪಾಯಿ.
Advertisement
ಇಡೀ ಮಂತ್ರಿ ಮಂಡಲ ಒಂದುದಿನ ಗೂಟದ ಕಾರು ನಿಲ್ಲಿಸಿದರೆ ಉಳಿಯುವ ಹಣದಲ್ಲಿ ಒಂದುವರ್ಷ ಆ ತಾಯಂದಿರ ಸಂಬಳ ಕೊಡಬಹುದು.
ಸಂಯಮದ ಸಮಯ ಮೀರಿ ಹೋಗಿದೆ.. “ಹೆಣ್ಣು ಅಬಲೆ ಎಷ್ಟು ದಿನ ಧರಣಿ ಕೂರುತ್ತಾಳೆ ಬಿಡು” ಎಂಬ ನಿಮ್ಮ ಹಳೇ ಥಿಯರಿಗಳನ್ನು ಬಿಡಿ.
ಜನ ಅವರ ಜೊತೆ ಇದ್ದಾರೆ. ಜನರ ಜೊತೆ ನೀವೂ ಇದ್ದರೆ ಕ್ಷೇಮ.
ಕಾರ್ಯಕರ್ತೆಯರ ಬೇಡಿಕೆ ಏನಿತ್ತು?
ರಾಜ್ಯದಲ್ಲಿ ಒಟ್ಟು 1.25 ಲಕ್ಷ ಅಂಗನವಾಡಿ ಸಿಬ್ಬಂದಿ ಇದ್ದು, ವೇತನ 7 ಸಾವಿರದಿಂದ 10 ಸಾವಿರ ರೂ. ಹೆಚ್ಚಳ ಮಾಡಬೇಕು. ಸಹಾಯಕಿಯರ ವೇತನ 3,500 ರಿಂದ 7,500 ರೂ. ಹೆಚ್ಚಳ ವಾಗಬೇಕು. ಸಹಾಯಕಿಯರಿಗೆ ಮುಂಬಡ್ತಿ, ಪಿಂಚಣಿ, ಪಿಎಫ್ ಸೌಲಭ್ಯ ನೀಡಬೇಕೆಂಬ ಬೇಡಿಕೆಯನ್ನು ಇಟ್ಟಿದ್ದರು.
ಯಾರ ಪಾಲು ಎಷ್ಟು?
ಯುಪಿಎ ಸರ್ಕಾರ ಇದ್ದಾಗ ಕೇಂದ್ರ ಸರ್ಕಾರ ಶೇ.90ರಷ್ಟು, ರಾಜ್ಯ ಸರ್ಕಾರ ಶೇ.10 ಗೌರವ ಧನ ಕೊಡುತಿತ್ತು. ಆದರೆ ಕೇಂದ್ರ ಸರ್ಕಾರ ಈಗ ಶೇ. 60, ರಾಜ್ಯ ಸರ್ಕಾರ ಶೇ.40 ರಷ್ಟು ಅನುದಾನ ನೀಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ 5,200 ರೂ. ಸಹಾಯಧನ ಕೊಡ್ತಿದ್ರೆ, ಕೇಂದ್ರ ಸರ್ಕಾರದ ಪಾಲು 1,800 ರೂ. ಮಾತ್ರ. ಇದರಿಂದಾಗಿ ಒಟ್ಟು 7000 ರೂ ಸಂಬಳ ಸಿಗುತ್ತಿದೆ ಎಂದು ಕೇಂದ್ರದ ವಿರುದ್ಧ ಸಚಿವೆ ಉಮಾಶ್ರೀ ಸದನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರತಿಭಟನೆ ಯಾಕೆ?
ಇಲ್ಲಿಯವರೆಗೆ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು 6 ಸಾವಿರ ಮತ್ತು ಸಹಾಯಕಿಯರಿಗೆ 3 ಸಾವಿರ ರೂ. ಸಂಬಳ ಸಿಗುತಿತ್ತು. ಈ ವರ್ಷದ ಬಜೆಟ್‍ನಲ್ಲಿ ಸರ್ಕಾರ ಕಾರ್ಯಕರ್ತೆಯರಿಗೆ 1 ಸಾವಿರ ರೂ. ಮತ್ತು ಸಹಾಯಕಿಯರಿಗೆ 500 ರೂ. ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಈ ಹೆಚ್ಚಳ ನಮಗೆ ಸಾಲುವುದಿಲ್ಲ. ಹತ್ತಿರ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಸರ್ಕಾರಗಳು ಕಾರ್ಯಕರ್ತೆಯರಿಗೆ 10 ಸಾವಿರ ರೂ. ಸಹಾಯಕಿಯರಿಗೆ 7,500 ರೂ. ನೀಡುತ್ತಿದೆ. ಹೀಗಾಗಿ ಕರ್ನಾಟಕ ಸರ್ಕಾರವೂ ನಮಗೆ ಇಷ್ಟೇ ಸಂಬಳ ನೀಡಬೇಕೆಂದು ಆಗ್ರಹಿಸಿ ಆಹೋರಾತ್ರಿ ಪ್ರತಿಭಟನೆ ನಡೆಸಿದ್ದರು.
ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಗಳ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದ್ದೇನೆ. ಗೃಹ ಕಚೇರಿ ಕೃಷ್ಣಾದಲ್ಲಿ ಈಗ ಮಾತುಕತೆ ನಡೆಯುತ್ತಿದೆ. pic.twitter.com/MeS0cguvqF
— CM of Karnataka (@CMofKarnataka) March 23, 2017