ಮಾಡಿದ್ದುಣ್ಣೋ ಮಹರಾಯ: ಫಡ್ನವೀಸ್ ಸ್ಥಿತಿಗೆ ಎಚ್‍ಡಿಕೆ ವ್ಯಂಗ್ಯ

Public TV
1 Min Read
Devendra Fadnavis HDK

– ಅಧಿಕಾರ ದಾಹಿ ಬಿಜೆಪಿ ತನ್ನ ಕೃತ್ಯಗಳಿಗೆ ತಾನೇ ಬೆಲೆ ತೆರುತ್ತಿದೆ

ಬೆಂಗಳೂರು: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಕೇವಲ 80 ಗಂಟೆಗಳಲ್ಲಿ ರಾಜೀನಾಮೆ ನೀಡಿದ ದೇವೇಂದ್ರ ಫಡ್ನವೀಸ್ ಪರಿಸ್ಥಿತಿಯ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಎಚ್.ಡಿ.ಕುಮಾರಸ್ವಾಮಿ ಅವರು, ದೇವೇಂದ್ರ ಫಡ್ನವೀಸ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ತಿಳಿದು ಬೇಸರವಾಯಿತು. ಹಾಗೆ ನೋಡಿದರೆ ಅವರ ಪದತ್ಯಾಗ ನನಗೆ ಖುಷಿ ಕೊಡಬೇಕಿತ್ತು. ಯಾಕೆಂದರೆ ನನ್ನ ಸರ್ಕಾರ ಕೆಡವಲು ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದು ಅವರೇ ಅಲ್ಲವೇ? ಅನರ್ಹರಿಗೆ ಆತಿಥ್ಯ ಕೊಟ್ಟವರೂ ಅವರೇ. ಈಗ ಅವರಿಗೆ ಕಾಲ ಎಂಥ ಉತ್ತರ ಕೊಟ್ಟಿತು ಎಂದು ಬೇಸರವಾಗುತ್ತಿದೆ ಎಂದು ಕುಟುಕಿದ್ದಾರೆ.

ಮಾಡಿದ್ದುಣ್ಣೊ ಮಹರಾಯ ಎಂಬುದು ಲೋಕ ರೂಢಿ. ಮಾಡಿದ್ದರ ಪ್ರತಿಫಲವನ್ನು ದೇವೇಂದ್ರ ಫಡ್ನವೀಸ್ ಉಣ್ಣುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಉಣ್ಣುತ್ತಾರೆ. ಕಾಲಚಕ್ರಕ್ಕೆ ಸಿಲುಕಿ ನಲುಗಿದ್ದಾರೆ. ಅಧಿಕಾರ ದಾಹಿ ಬಿಜೆಪಿ ತನ್ನ ಕೃತ್ಯಗಳಿಗೆ ತಾನೇ ಬೆಲೆ ತೆರುತ್ತಿದೆ. ಅಧಿಕಾರದ ಹಪಹಪಿ, ಸರ್ಕಾರಗಳನ್ನು ಕೆಡವುದು, ಚುನಾವಣೆ ತರುವುದನ್ನು ಬಿಜೆಪಿ ಇನ್ನಾದರೂ ಬಿಡಲಿ ಎಂದು ವಾಗ್ದಾಳಿ ನಡೆಸಿದರು.

ಎಚ್.ಡಿ.ಕುಮಾರಸ್ವಾಮಿ ನೇತೃತ್ವ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಬಿಜೆಪಿ ನಾಯಕರು ಆಪರೇಷನ್ ಕಮಲ ನಡೆಸಿದ್ದರು. ಈ ಮೂಲಕ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರು ಸೇರಿ 17 ಜನ ಶಾಸಕರಿಂದ ರಾಜೀನಾಮೆ ಕೊಡಿಸಿದ್ದರು. ಬಳಿಕ ಅವರನ್ನು ಮುಂಬೈನ ಹೋಟೆಲ್‍ನಲ್ಲಿ ಇರಿಸಿ ಭಾರೀ ಭದ್ರತೆ ಒದಗಿಸಲಾಗಿತ್ತು. ಅವರನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡಿರಲಿಲ್ಲ. ಆಗ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ದೇವೇಂದ್ರ ಫಡ್ನವೀಸ್ ಅವರ ಸರ್ಕಾರವು ಬಿಜೆಪಿ ನಾಯಕರಿಗೆ ಬೆಂಬಲ ನೀಡಿತ್ತು. ಹೀಗಾಗಿ ಎಚ್.ಡಿ.ಕುಮಾರಸ್ವಾಮಿ ಅವರು, ಮಾಡಿದ್ದುಣ್ಣೊ ಮಹರಾಯ ಎಂದು ದೇವೇಂದ್ರ ಫಡ್ನವೀಸ್ ಅವರನ್ನು ಕುಟುಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *