ಅನರ್ಹತೆ ಭೀತಿಯಿಂದ ಜೆಡಿಎಸ್ ರೆಬೆಲ್ ಶಾಸಕರು ಪಾರು

Public TV
2 Min Read
KB KOLIWAD jds mla

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಶಾಸಕರ ಅನರ್ಹತೆ ಕೋರಿ ಅಂದು ಜೆಡಿಎಸ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ವಿಧಾನಸಭಾ ಸ್ಪೀಕರ್ ಕೋಳಿವಾಡ ವಜಾ ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅವರು, 14 ನೇ ವಿಧಾನಸಭೆ ಮೇ 17 ರಂದು ವಿಸರ್ಜನೆ ಆಗಿದೆ. ಹೀಗಾಗಿ ಅನರ್ಹತೆ ಪ್ರಕರಣದ ಅರ್ಜಿಯನ್ನು ಸ್ಪೀಕರ್ ಕೋಳಿವಾಡ ಶುಕ್ರವಾರ ವಜಾ ಮಾಡಿದ್ದಾರೆ. ಹಂಗಾಮಿ ಸ್ಪೀಕರ್ ಅಧಿಕಾರ ವಹಿಸುವವರೆಗೂ ಕೋಳಿವಾಡ ಸ್ಪೀಕರ್ ಆಗಿರುತ್ತಾರೆ. ಹೀಗಾಗಿ ಇಂದು ಶಾಸಕರ ಅನರ್ಹತೆ ಅರ್ಜಿಯನ್ನ ವಜಾ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Koliwad

ಇಂದು ಹಂಗಾಮಿ ಸ್ಪೀಕರ್ ಆಗಿ ಕೆಜಿ ಬೋಪಯ್ಯ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದರು. ಬಿಜೆಪಿ ಶಾಸಕರಾಗಿದ್ದ ಬೋಪಯ್ಯ ಅವರನ್ನು ಸ್ಪೀಕರ್ ಆಗಿ ನೇಮಕ ಮಾಡಿರುವುದರಿಂದ ಜೆಡಿಎಸ್ ಶಾಸಕರನ್ನು ಅನರ್ಹಗೊಳಿಸಲಾಗುತ್ತದೆ ಎಂಬ ಸುದ್ದಿ ಪ್ರಕಟವಾಗಿತ್ತು. ಆದರೆ ಈ ವೇಳೆ ಕೋಳಿವಾಡ ಅವರು ಅರ್ಜಿಯನ್ನು ವಜಾ ಮಾಡಿರುವುದರಿಂದ ಜೆಡಿಎಸ್ ಶಾಸಕರು ಅನರ್ಹತೆ ಭೀತಿಯಿಂದ ಪಾರಾಗಿದ್ದಾರೆ.

ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ಹಂಗಾಮಿ ಸ್ಪೀಕರ್ ಅವರಿಗೆ ಶಾಸಕರನ್ನು ಅನರ್ಹ ಮಾಡುವ ಅಧಿಕಾರ ಇಲ್ಲ. ಅಷ್ಟೇ ಅಲ್ಲದೇ ಇವರು ವಿಚಾರಣೆಯೇ ನಡೆಸಿಲ್ಲ. ವಿಚಾರಣೆ ನಡೆಸದೇ ಅನರ್ಹಗೊಳಿಸಲು ಸಾಧ್ಯವಿಲ್ಲ. ಆದದ್ದು ಆಗಲಿ ಮುಂದೆ ಏನಾಗುತ್ತದೋ? ಎಂದು ಭಾವಿಸಿ ಧೈರ್ಯ ಮಾಡಿ ಅನರ್ಹ ಮಾಡಿದರೆ ಸದನದಲ್ಲಿ ಸಂಖ್ಯಾಬಲ ಕಡಿಮೆಯಾಗುತ್ತದೆ. ಈಗ ಅನರ್ಹ ಮಾಡಿದರೂ ಸ್ಪೀಕರ್ ನಿರ್ಧಾರವನ್ನು ಮುಂದೆ ಪ್ರಶ್ನಿಸಬಹುದು ಎಂದು ತಿಳಿಸಿದರು.

vlcsnap 2018 05 18 19h46m48s150

ಏನಿದು ಪ್ರಕರಣ?
ಜೆಡಿಎಸ್ ಶಾಸಕರಾಗಿದ್ದ ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ, ಭೀಮಾ ನಾಯ್ಕ್, ಮಾಗಡಿ ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ, ಅಖಂಡ ಶ್ರೀನಿವಾಸ್ ಮೂರ್ತಿ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರು. ಇದನ್ನು ಪ್ರಶ್ನಿಸಿ ಜೆಡಿಎಸ್ ಸ್ಪೀಕರ್ ಗೆ ದೂರು ನೀಡಿತ್ತು. ಸ್ಪೀಕರ್ ಕೋಳಿವಾಡ ಅವರು ಪ್ರಕರಣದ ವಿಚಾರಣೆ ನಡೆಸಿದ್ದರು. ಚುನಾವಣೆ ದಿನಾಂಕ ಪ್ರಕಟವಾದರೂ ತನ್ನ ತೀರ್ಪನ್ನು ಪ್ರಕಟಿಸದ ಕಾರಣ ಜೆಡಿಎಸ್ ಹೈಕೋರ್ಟ್ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮೇ 7ರ ಒಳಗಡೆ ತೀರ್ಪು ನೀಡುವಂತೆ ಆದೇಶಿಸಿತ್ತು. ಜೆಡಿಎಸ್ ರೆಬೆಲ್ ಶಾಸಕರಾಗಿ ಬಳಿಕ ಕಾಂಗ್ರೆಸ್ ಸೇರಿ ಚುನಾವಣೆಯಲ್ಲಿ ಗೆದ್ದ ಅಖಂಡ ಶ್ರೀನಿವಾಸ ಮೂರ್ತಿ, ಭೀಮಾನಾಯ್ಕ ಮತ್ತು ಜಮೀರ್ ಅಹ್ಮದ್ ಅವರನ್ನು ಬಹುಮತ ಸಾಬೀತಿಗೂ ಮುನ್ನ ಸ್ಪೀಕರ್ ಅನರ್ಹಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತಿತ್ತು.

pro tem speaker

Share This Article
Leave a Comment

Leave a Reply

Your email address will not be published. Required fields are marked *