ಮಡಿಕೇರಿ: ಕೊಡಗಿನಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಮರಣ ಮಳೆಯಾಗಿ ಬದಲಾಗುತ್ತಿದೆ. ಇದೂವರೆಗೆ 6ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ನೂರಕ್ಕೂ ಹೆಚ್ಚು ಮಂದಿ ಪ್ರವಾಹದಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ. ಕೊಡಗಿನ ಹೆಮ್ಮತ್ತಾಳು, ಮೇಘತ್ತಾಳು, ಮುಕ್ಕೋಡ್ಲು, ಕಾಲೂರು ಗ್ರಾಮದಲ್ಲಿ 500ಕ್ಕೂ ಅಧಿಕ ಮಂದಿ ಗುಡ್ಡ ಕುಸಿತಕ್ಕೆ ಸಿಲುಕಿದ್ದಾರೆ. ಮೂವತೊಕ್ಲು ಗ್ರಾಮದಲ್ಲಿ ಮನೆ ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮಡಿಕೇರಿ-ಮಂಗಳೂರು ಹೆದ್ದಾರಿಯ ಜೋಡುಪಾಲ, ಮದೆನಾಡು ಬಳಿ ಭಾರಿ ಪ್ರಮಾಣದಲ್ಲಿ ಬೆಟ್ಟ ಕುಸಿದಿದ್ದು 200ಕ್ಕೂ ಹೆಚ್ಚು ಮಂದಿ ಸಂಕಷ್ಟದಲ್ಲಿದ್ದಾರೆ. ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಗೆ ಗಾಳಿ ಮಳೆ ಅಡ್ಡಿಯಾಗಿದೆ.
ಮಕ್ಕಂದೂರಿನಲ್ಲಿ ಗುಡ್ಡ ಕುಸಿದಿದ್ದರಿಂದ ಸೇನಾ ಹೆಲಿಕ್ಯಾಪ್ಟರ್ ನಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಮತ್ತೊಂದೆಡೆ ತೂಗುಸೇತುವೆಯೇ ಮುಳುಗಡೆಯಾಗಿದೆ. ಸೋಮವಾರಪೇಟೆ-ಮಡಿಕೇರಿ ನಡುವಿನ ರಸ್ತೆ ಮೂರು ಕಿಲೋ ಮೀಟರ್ ವರೆಗೂ ಕುಸಿತಗೊಂಡಿದೆ. ಕೊಡಗಿನ ಕೂಡಿಗೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೀರು ನುಗ್ಗಿದ್ದು, ಅಲ್ಲಿದ್ದ ವಸ್ತುಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಮಡಿಕೇರಿ ಬಳಿಯ ಮೊಣ್ಣಂಗೇರಿಯಲ್ಲಿ 50ಕ್ಕೂ ಹೆಚ್ಚು ಸಂತ್ರಸ್ತರನ್ನು ರಕ್ಷಿಸಲಾಗಿದೆ. ಶುಕ್ರವಾರ ಮಧ್ಯಾಹ್ನದಿಂದ ಮಳೆಯಲ್ಲಿ ನೆನೆಯುತ್ತಲೇ ಬೆಟ್ಟ ಹತ್ತಿ ಬಂದ ಸಂತ್ರಸ್ತರನ್ನು ರಾತ್ರಿ ವೇಳೆಗೆ ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಗುಡ್ಡ ಕುಸಿತದಿಂದ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದೆ.
Advertisement
Advertisement
ಗೋಣಿಕೋಪ್ಪ, ಶ್ರಿಮಂಗಲ ಕ್ಯಾಲಿಕಟ್ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪೊಕಳತೊಡು ಎಂಬಲ್ಲಿ ರಸ್ತೆಗೆ ಕಟ್ಟಿದ ತಡೆಗೋಡೆ ಸಮೇತ ರಸ್ತೆ ಕುಸಿತವಾಗಿದೆ. ರಾಮ, ಲಕ್ಷ್ಮಣ ತೀರ್ಥ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಭಾರೀ ಮಳೆ ಹಿನ್ನೆಲೆ ಇಂದೂ ಕೂಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
Advertisement
ಮಹಾಮಳೆಯಲ್ಲಿ ಸಿಲುಕಿದ್ದ 3 ಸಾವಿರ ಜನರನ್ನು ರಕ್ಷಿಸಲಾಗಿದೆ. ಇನ್ನೂ 600 ಮಂದಿಯ ರಕ್ಷಣೆಯಾಗಬೇಕಿದೆ, ಜಿಲ್ಲೆಯಲ್ಲಿ 31 ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ರಕ್ಷಣಾ ತಂಡಗಳಿಂದ ಭರದ ಕಾರ್ಯಾಚರಣೆ ನಡೀತಿದೆ ಅಂತ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.
Advertisement
ಇಂದು ಸಿಎಂ ಕುಮಾರಸ್ವಾಮಿ ಕೊಡಗು ಜಿಲ್ಲೆಗೆ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆ ಪರಿಶೀಲನೆ ನಡೆಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಕೊಡಗು ಜಿಲ್ಲೆಗೆ ತೆರಳಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv