ಬೆಂಗಳೂರು: ರಾಜ್ಯದ 22 ಜಿಲ್ಲೆಗಳಲ್ಲಿ ಕಳೆದ ವರ್ಷದ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ನೆರೆ ಕಾಣಿಸಿಕೊಂಡಿತ್ತು. ಬಳಿಕ ರಾಜ್ಯ ಸರ್ಕಾರ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಕೈಗೊಂಡಿತು. ಆದರೆ ನೆರೆ ಪರಿಹಾರ ವಿತರಣೆಯಲ್ಲಿ ಇದೀಗ ಅಕ್ರಮದ ಆರೋಪ ಬಲವಾಗಿ ಕೇಳಿ ಬಂದಿದೆ. ರೈತರಿಗೆ ಬೆಳೆ ಪರಿಹಾರ ಮತ್ತು ಮನೆಗಳ ನಿರ್ಮಾಣದಲ್ಲಿ ಸಾಕಷ್ಟು ಲೋಪದೋಷಗಳು ಬೆಳಕಿಗೆ ಬರಲಾರಂಭಿಸಿವೆ. ಇದೀಗ ಸರ್ಕಾರ ಎಲ್ಲ 22 ಜಿಲ್ಲೆಗಳಲ್ಲಿ ನಡೆದಿರಬಹುದಾದ ಅಕ್ರಮಗಳನ್ನು ಕಲೆಹಾಕಲು ಅಧಿಕಾರಿಗಳಿಗೆ ಸೂಚಿಸಿದೆ. ಮಾಹಿತಿ ಸಂಗ್ರಹದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಎಸಿಬಿ ತನಿಖೆಗೆ ಒಪ್ಪಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.
ಅಕ್ರಮ ಹೇಗೆ? ರಾಜ್ಯದ 22 ಜಿಲ್ಲೆಗಳಲ್ಲಿ ನೆರೆ ಆಗಿತ್ತು. ಒಂದೆರಡು ತಿಂಗಳಿಂದಲೂ ಬೆಳೆ ಮತ್ತು ಮನೆ ಕಳೆದುಕೊಂಡವರಿಗೆ ಅಸಮರ್ಪಕ ಪರಿಹಾರ ವಿತರಣೆ ಆಗಿರುವ ಆರೋಪ ಕೇಳಿಬಂದಿದೆ. ಒಂದೇ ಸರ್ವೆ ನಂಬರ್ ಗೆ 2 ಬಾರಿ ಪರಿಹಾರ, ಒಂದೇ ವಿಸ್ತೀರ್ಣದ ಭೂಮಿಗೆ ಬೇರೆ ಬೇರೆ ಮೊತ್ತದ ಪರಿಹಾರ, ನಕಲಿ ಹೆಸರುಗಳಿಗೆ ಪರಿಹಾರ, ಪಕ್ಷವಾರು ಬೆಂಬಲಿತರಿಗೆ ಪರಿಹಾರ ವಿತರಣೆ, ಪ್ರಭಾವಿಗಳ ಅಣತಿ ಮೇರೆಗೆ ಪರಿಹಾರ ವಿತರಣೆ ಮಾಡಿದ ಆರೋಪಗಳು ಕೇಳಿಬಂದಿವೆ.
ಹಾವೇರಿಯಲ್ಲಿ ಪರಿಹಾರ ವಿತರಣೆಯಲ್ಲಿ ಅತಿ ಹೆಚ್ಚು ಲೋಪದೋಷದ ಆರೋಪ ಇದೆ. ಬೆಳೆ ನಷ್ಟವಾದ ರೈತರಿಗೆ ಸರ್ಕಾರ 174 ಕೋಟಿ ರೂ. ಪರಿಹಾರ ಬಿಡುಗಡೆಗೊಳಿಸಿತ್ತು. ಹಾವೇರಿ ಜಿಲ್ಲೆಯಲ್ಲಿ 1,45,500 ರೈತರಿಗೆ ಪರಿಹಾರ ನೀಡಬೇಕಿತ್ತು. ಆದರೆ ಅಧಿಕಾರಿಗಳು 1,00,768 ರೈತರಿಗೆ ಮಾತ್ರ ಪರಿಹಾರ ವಿತರಿಸಿದ್ದಾರೆ. ಉಳಿದ 45 ಸಾವಿರ ರೈತರಿಗೆ ಪರಿಹಾರ ಇನ್ನೂ ಮುಟ್ಟಿಲ್ಲ. ಅಕ್ರಮದಲ್ಲಿ ಕೆಳಹಂತದ ಅಧಿಕಾರಿಗಳ ಪಾತ್ರ ಹೆಚ್ಚಾಗಿದೆ ಎನ್ನಲಾಗಿದೆ. ಇನ್ನು ಮನೆ ನಿರ್ಮಾಣ ಪರಿಹಾರದಲ್ಲಿಯೂ ಅವ್ಯವಹಾರದ ಆರೋಪ ಕೇಳಿಬಂದಿದೆ. ಮನೆ ಹಾನಿ ಪರಿಹಾರವೂ ಅರ್ಹರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎನ್ನಲಾಗಿದೆ.
ಈಗಾಗಲೇ ಬೆಳೆ ಪರಿಹಾರ ಕುರಿತು ಬೆಳಗಾವಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಕಳೆದ ಜನವರಿಯಲ್ಲಿ ತನಿಖೆಗೆ ಆದೇಶಿಸಿ ಪ್ರಾದೇಶಿಕ ಆಯುಕ್ತರಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪತ್ರ ಬರೆದು ತನಿಖೆಗೆ ಸೂಚಿಸಿದ್ದರು. ಸದ್ಯದಲ್ಲೇ ಸರ್ಕಾರದ ಕೈಗೆ ಈ ವರದಿ ಸೇರಲಿದೆ. ವರದಿ ಬಂದ ಬಳಿಕ ಚರ್ಚಿಸಿ ಪ್ರಕರಣಗಳನ್ನು ಎಸಿಬಿಗೆ ಕೊಡುವ ಸಾಧ್ಯತೆ ಇದೆ. ಬೇರೆ ಜಿಲ್ಲೆಗಳಲ್ಲೂ ನೆರೆ ಅವ್ಯವಹಾರದ ಆರೋಪ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳಿಂದಲೂ ಸರ್ಕಾರ ಮಾಹಿತಿ ಕೇಳಿದೆ. ಎಲ್ಲ ಪ್ರಕರಣಗಳನ್ನೂ ಒಟ್ಟಿಗೆ ಸೇರಿಸಿ ಸರ್ಕಾರ ಎಸಿಬಿ ತನಿಖೆಗೆ ಕೊಡುವ ಸಾಧ್ಯತೆ ಇದೆ. ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕವೇ ಪ್ರಕರಣವನ್ನು ಎಸಿಬಿಗೆ ಕೊಡಲು ಸರ್ಕಾರ ಚಿಂತನೆ ನಡೆಸಿದೆ.