ಬೆಂಗಳೂರು: 2019 ಲೋಕಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಕರ್ನಾಟಕದ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ನಾಮಪತ್ರ ವಾಪಸ್ ಕೊನೆಯ ದಿನ ಮುಕ್ತಾಯವಾಗಿದೆ. ಸದ್ಯ ಅಧಿಕೃತವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ.
ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ 330 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದರಲ್ಲಿ 52 ನಾಮಪತ್ರಗಳು ತಿರಸ್ಕøತಗೊಂಡಿದ್ದು, 278 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದೆ. ಈ ಪೈಕಿ 165 ಅಭ್ಯರ್ಥಿಗಳು ಪಕ್ಷೇತರ ಸದಸ್ಯರಾದರೆ, ಬಿಜೆಪಿಯ 13, ಕಾಂಗ್ರೆಸ್ಸಿನ 10, ಜೆಡಿಎಸ್ ಪಕ್ಷದ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಏಪ್ರಿಲ್ 18 ರಂದು ಈ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ.
Advertisement
Advertisement
ಬೆಂಗಳೂರು, ತುಮಕೂರು, ಮೈಸೂರು, ಮಂಡ್ಯ, ಹಾಸನ ಕ್ಷೇತ್ರಗಳು ಈ ಬಾರಿ ಹೆಚ್ಚು ಕುತೂಹಲ ಮೂಡಿಸಿದ ಕ್ಷೇತ್ರಗಳಾಗಿವೆ. ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಬೆಂಬಲಿತ ಅಭ್ಯರ್ಥಿಯಾಗಿರುವ ನಿಖಿಲ್ ಅವರು ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದರೆ, ಸುಮಲತಾ ಅವರು ಪಕ್ಷೇತರರಾಗಿ ಕಣಕ್ಕೆ ಇಳಿದು ಸ್ಟಾರ್ ಕದನಕ್ಕೆ ಕಾರಣರಾಗಿದ್ದಾರೆ. ಅಲ್ಲದೇ ಬಿಜೆಪಿ ಪಕ್ಷ ಕ್ಷೇತ್ರದಲ್ಲಿ ಸುಮಲತಾ ಅವರಿಗೆ ಬೆಂಬಲ ನೀಡಿ ಮೈತ್ರಿ ಪಕ್ಷಗಳಿಗೆ ಸೆಡ್ಡು ಹೊಡೆದಿದೆ.
Advertisement
ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ ಅವರು ಮೈತ್ರಿ ಬೆಂಬಲಿತರಾಗಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದು, ಕಾಂಗ್ರೆಸ್ ನಿಂದ ಪಕ್ಷಾಂತರ ಮಾಡಿದ್ದ ಮಾಜಿ ಸಚಿವ ಎ.ಮಂಜು ಬಿಜೆಪಿ ಯಿಂದ ಸ್ಪರ್ಧೆ ಮಾಡಿ ಪೈಪೋಟಿ ನೀಡಿದ್ದಾರೆ. ಇತ್ತ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು, ಹಾಲಿ ಸಂಸದ ಮುದ್ದಹನುಮೇಗೌಡ ಅವರು ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಬಿಜೆಪಿಯ ಜಿ.ಎಸ್. ಬಸವರಾಜು ಅವರಿಗೆ ಕಠಿಣ ಸ್ಪರ್ಧೆ ನೀಡುವ ನಿರೀಕ್ಷೆ ಇದೆ.
Advertisement
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಹಾಗೂ ಬಿಜೆಪಿ ಯಿಂದ ತೇಜಸ್ವಿ ಸೂರ್ಯ ನಡುವೆ ಸ್ಪರ್ಧೆ ನಡೆಯಲಿದೆ. ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್ ನಿಂದ ರಿಜ್ವಾನ್ ಅರ್ಷದ್, ಬಿಜೆಪಿಯಿಂದ ಪಿ.ಸಿ ಮೋಹನ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ನಟ ಪ್ರಕಾಶ್ ರೈ ಕಣದಲ್ಲಿ ಇದ್ದಾರೆ.
ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್ ನಿಂದ ಸಚಿವ ಕೃಷ್ಣಬೈರೇಗೌಡ, ಬಿಜೆಪಿಯಿಂದ ಹಾಲಿ ಸಂಸದ ಡಿ.ವಿ. ಸದಾನಂದಗೌಡ ಅವರು ಕಣದಲ್ಲಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಬೆಂಬಲಿತ ಅಭ್ಯರ್ಥಿಯಾಗಿ ಕಾಂಗ್ರೆಸ್ ನಿಂದ ಹಾಲಿ ಸಂಸದ ಡಿ.ಕೆ. ಸುರೇಶ್ ಹಾಗೂ ಬಿಜೆಪಿ ಪಕ್ಷದಿಂದ ಅಶ್ವಥ್ ನಾರಾಯಣ್ ಅವರು ಸ್ಪರ್ಧೆ ಮಾಡುತ್ತಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮೈತ್ರಿ ಬೆಂಬಲಿತ ಅಭ್ಯರ್ಥಿಯಾಗಿ ಕಾಂಗ್ರೆಸ್ ಹಾಲಿ ಸಂಸದ ಎಂ. ವೀರಪ್ಪ ಮೊಯ್ಲಿ ಹಾಗೂ ಕಳೆದ ಬಾರಿ ಸ್ಪರ್ಧೆ ಮಾಡಿ ಸೋಲುಂಡಿದ್ದ ಬಿಜೆಪಿಯ ಬಿ.ಎನ್. ಬಚ್ಚೇಗೌಡ ಹಾಗೂ ಬಿಎಸ್‍ಪಿ ಪಕ್ಷದಿಂದ ಡಾ. ಸಿಎಸ್ ದ್ವಾರಕನಾಥ್ ಕಣದಲ್ಲಿದ್ದಾರೆ. ಕೋಲಾರ ಕ್ಷೇತ್ರದಿಂದ ಮೈತ್ರಿ ಬೆಂಬಲಿತ ಅಭ್ಯರ್ಥಿಯಾಗಿ ಹಾಲಿ ಸಂಸದ ಕೆಎಚ್ ಮುನಿಯಪ್ಪ ಹಾಗೂ ಬಿಜೆಪಿಯಿಂದ ಎಸ್. ಮುನಿಸ್ವಾಮಿ ಸ್ಪರ್ಧೆ ನಡೆಸಿದ್ದಾರೆ.
ಚಾಮರಾಜನಗರದಲ್ಲಿ ಕಾಂಗ್ರೆಸ್ ನಿಂದ ಹಾಲಿ ಸಂಸದ ಧ್ರುವ ನಾರಾಯಣ, ಬಿಜೆಪಿಯಿಂದ ಶ್ರೀನಿವಾಸ್ ಪ್ರಸಾದ್ ಹಾಗೂ ಬಿಎಸ್‍ಪಿ ಪಕ್ಷದಿಂದ ಡಾ. ಶಿವಕುಮಾರ್ ಸ್ಪರ್ಧೆ ನಡೆಸಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ವಿಜಯ ಶಂಕರ್, ಬಿಜೆಪಿಯಿಂದ ಹಾಲಿ ಸಂಸದ ಪ್ರತಾಪ್ ಸಿಂಹ ಕಣದಲ್ಲಿದ್ದಾರೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮೈತ್ರಿ ಬೆಂಬಲಿತ ಅಭ್ಯರ್ಥಿಯಾಗಿ ಜೆಡಿಎಸ್ ಚಿಹ್ನೆಯಡಿ ಪ್ರಮೋದ್ ಮಧ್ವರಾಜ್ ಹಾಗೂ ಬಿಜೆಪಿಯಿಂದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಸ್ಪರ್ಧಿಸುತ್ತಿದ್ದಾರೆ. ಮಂಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಮಿಥುನ್ ರೈ, ಬಿಜೆಪಿಯಿಂದ ಹಾಲಿ ಸಂಸದ ನಳೀನ್ ಕುಮಾರ್ ಕಟೀಲ್ ಕಣದಲ್ಲಿದ್ದಾರೆ. ಚಿತ್ರದುರ್ಗದಿಂದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ, ಬಿಜೆಪಿ ಅಭ್ಯರ್ಥಿ ಎ. ನಾರಾಯಣಸ್ವಾಮಿ ಕಣದಲ್ಲಿದ್ದಾರೆ.