ಬೆಂಗಳೂರು: ಹಾವೇರಿ ಲೋಕಸಭಾ ಕ್ಷೇತ್ರದಿಂದ (Haveri Lok Sabha constituency) ಸಂಸದರಾಗಿ ಆಯ್ಕೆಯಾಗಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿಯವರು (Basavaraj Bommai) ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಂಸತ್ ಸದಸ್ಯರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಶಿಗ್ಗಾವಿ ವಿಧಾನಸಭೆ ಕ್ಷೇತ್ರದ ಶಾಸಕ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಅವರನ್ನು ಕಚೇರಿಯಲ್ಲಿ ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದರು. ಈ ವೇಳೆ ಬೊಮ್ಮಾಯಿಯವರಿಗೆ ವಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಮುನಿರಾಜು, ಜಿಟಿ ದೇವೇಗೌಡ ಹಾಗೂ ಭೋಜೇ ಗೌಡ ಅವರು ಸಾಥ್ ನೀಡಿದರು. ಬಳಿಕ ರಾಜೀನಾಮೆ ಸ್ವೀಕಾರ ಮಾಡಿದ ಸ್ಪೀಕರ್ ಖಾದರ್ ಅವರು ಬೊಮ್ಮಾಯಿಯವರಿಗೆ ಶುಭಕೋರಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದನಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಎರಡರಲ್ಲಿ ಒಂದು ಸ್ಥಾನ ಇಟ್ಟುಕೊಳ್ಳಬೇಕು. ಹೀಗಾಗಿ ಸ್ಪೀಕರ್ ಭೇಟಿಯಾಗಿ ರಾಜೀನಾಮೆ ನೀಡಿದ್ದೇನೆ. ನನ್ನ ಮತದಾರರಿಗೆ, ಜನತೆಗೆ ಧನ್ಯವಾದ ತಿಳಿಸುತ್ತೇನೆ. ನಿರಂತರವಾಗಿ ನನ್ನ ಕ್ಷೇತ್ರದ ಜನ ನನಗೆ 4 ಬಾರಿ ಆಶೀರ್ವಾದ ಮಾಡಿದ್ದಾರೆ. ಈ ಮೂಲಕ ಕ್ಷೇತ್ರದ ಅಭಿವೃದ್ಧಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.
ನನ್ನ ಕ್ಷೇತ್ರವನ್ನು ಹಿಂದುಳಿದ ಕ್ಷೇತ್ರ ಎನ್ನುವ ಹಣೆಪಟ್ಟಿ ತೆಗೆದು ಹಾಕಿದ್ದೇನೆ. ಮೂಲಭೂತ ಸೌಕರ್ಯಗಳನ್ನು ಕೊಟ್ಟಿದ್ದೇನೆ. ಎರಡು ಕೆರೆ ತುಂಬಿಸುವ ಯೋಜನೆ ಮಾಡಿದ್ದೇನೆ. ಉತ್ತಮ ಶಿಕ್ಷಣ ಸಂಸ್ಥೆಗಳನ್ನ ತಂದಿದ್ದೇನೆ. ಎಂಜಿನಿಯರಿಂಗ್, ಮೆಡಿಕಲ್ ಕಾಲೇಜ್‍ಗಳನ್ನ ತಂದಿದ್ದೇನೆ. ಕೈಗಾರಿಕೆ ಅಭಿವೃದ್ಧಿ ಮಾಡಿದ್ದೇನೆ. ಬಾಕಿ ಇರುವ ಕೆಲಸ ಮುಗಿಸಲು ಸಿಎಂಗೆ ಮನವಿ ಮಾಡಿದ್ದು, ಸಿಎಂ ಕೂಡಾ ಒಪ್ಪಿಗೆ ನೀಡಿದ್ದಾರೆ ಎಂದರು.
ಬಸವರಾಜ ಬೊಮ್ಮಾಯಿ ಅವರು ಹಾವೇರಿ ಲೋಕಸಭಾ ಕ್ಷೇತ್ರದಿಂದ ಈ ಬಾರಿ 43,513 ಮತಗಳಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ 6,62,025 ಮತಗಳನ್ನು ಪಡೆದರೆ ಬೊಮ್ಮಾಯಿ 7,05,538 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.
2019ರ ಚುನಾವಣೆಯಲ್ಲಿ ಶಿವಕುಮಾರ್ ಉದಾಸಿ ಅವರು ಬಿಜೆಪಿಯಿಂದ (BJP) ಸ್ಪರ್ಧಿಸಿ ಜಯಗಳಿಸಿದ್ದರು. ಈ ಬಾರಿ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಹೇಳಿದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿತ್ತು.