ಧಾರವಾಡ: ಹುಬ್ಬಳ್ಳಿಯಲ್ಲಿ ರಾಜ್ಯದ ಮೊದಲ ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ಸ್ ಅಸೋಸಿಯೇಷನ್ (Karnataka Electronic Media Journalists Association) ಉದ್ಘಾಟನೆಯಾಗಿದೆ.
ಹುಬ್ಬಳ್ಳಿ ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅಸೋಸಿಯೇಷನ್ ಲೋಗೋ (Logo) ಬಿಡುಗಡೆ ಮಾಡಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ನಾನು ರಾಜಕಾರಣಕ್ಕೆ ಬಂದು ಇಷ್ಟು ವರ್ಷದಲ್ಲಿ ಯಾವ ಮಾಧ್ಯಮಗಳಿಗೂ (Media) ನನ್ನ ಬಗ್ಗೆ ಹೀಗೇ ಬರೆಯಿರಿ, ಹಾಗೇ ಬರೆಯಿರಿ ಎಂದು ಯಾವತ್ತೂ ಹೇಳಿಲ್ಲ. ನನ್ನ ಬಗ್ಗೆ ಸುಳ್ಳುಗಳನ್ನು ಸತತವಾಗಿ ತೋರಿಸುವಾಗಲೂ ಯಾಕೆ ಹೀಗೆ ತೋರಿಸ್ತೀರಿ? ಅಂತಲೂ ಯಾರಿಗೂ ಕೇಳಿಲ್ಲ. ನಿಮ್ಮಿಂದ ನನಗೆ ಏನೇನೂ ಅಪೇಕ್ಷೆ ಇಲ್ಲ. ಸಾಧ್ಯವಾದರೆ ಸತ್ಯ ತೋರಿಸಿ, ಸತ್ಯ ಬರೆಯಿರಿ ಎಂದು ಹೇಳಿದರು.
ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದೇ ದೊಡ್ಡ ವಿಷಯದಂತೆ ಮಾಧ್ಯಮಗಳಲ್ಲಿ ಚರ್ಚೆ ನಡೆಯಿತು. ಆ ಚರ್ಚೆಯಲ್ಲಿ ಜ್ಯೋತಿಷಿಗಳು, ಚಾನಲ್ ಗಳು ತೋರಿಸಿದ್ದೆಲ್ಲಾ ಅಪ್ಪಟ ಸುಳ್ಳಾಯ್ತು. ಮಾಧ್ಯಮದಲ್ಲಿ ಹೀಗೆಲ್ಲಾ ತೋರಿಸಿದರೆ ಜನ ಒಪ್ಪುತ್ತಾರಾ ಎಂದು ಯೋಚನೆ ಮಾಡಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿಯಲು ನಮ್ಮ ಸರ್ಕಾರ ಸದಾ ಸಿದ್ಧ. ಯಾವತ್ತೂ ಇದಕ್ಕೆ ಧಕ್ಕೆ ತರುವ ಕೆಲಸವನ್ನು ನಾನೂ ಮಾಡಿಲ್ಲ, ನಮ್ಮ ಸರ್ಕಾರವೂ ಮಾಡುವುದಿಲ್ಲ ಎಂದು ಹೇಳಿದರು.
ಬ್ಲಾಕ್ ಮೇಲ್ ಮತ್ತು ಕೀಳು ಮಟ್ಟದ ಪ್ರಾಕ್ಟೀಸ್ ಮಾಡುತ್ತಿರುವ ಯುಟ್ಯೂಬ್ ಚಾನಲ್ ಗಳು ಸಮಾಜಕ್ಕೆ ಶಾಪ ಆಗಿದ್ದು, ಇಂಥವರಿಂದ ಪತ್ರಿಕೋದ್ಯಮದ ಘನತೆ ಹಾಳಾಗುತ್ತಿದೆ, ಹೀಗಾಗಿ ಯು ಟ್ಯೂಬ್ ಚಾನಲ್ ಗಳ ಹಾವಳಿ ತಡೆಯಲು ಇವರಿಗೂ ಲೈಸೆನ್ಸ್ ಕಡ್ಡಾಯಗೊಳಿಸಬೇಕು ಎಂದು ಸಂಘವು ಬೇಡಿಕೆ ಸಲ್ಲಿಸಿದೆ. ಈ ಬೇಡಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್, ಚಲುವರಾಯಸ್ವಾಮಿ, ಸಭಾಪತಿ ಬಸವರಾಜ್ ಹೊರಟ್ಟಿ ಬಾಗಿಯಾಗಿದ್ದರು.