ಬೆಂಗಳೂರು: ಚುನಾವಣಾ ಆಯೋಗ ಇಂದು ರಾಜ್ಯ ವಿವಿಧ ಜಿಲ್ಲೆಗಳಲ್ಲಿ ದಾಖಲೆ ಇಲ್ಲದ ಸುಮಾರು 61.96 ಲಕ್ಷ ರೂ. ಮೊತ್ತದ ಹಣವನ್ನು ವಶಕ್ಕೆ ಪಡೆದಿದೆ.
ಚಿಕ್ಕಬಳ್ಳಾಪುರ- ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಎಚ್ ಕ್ರಾಸ್ ಚೆಕ್ ಪೋಸ್ಟ್ ಬಳಿ ಇಂಡಿಕಾ ಕಾರು ತಪಾಸಣೆ ವೇಳೆ 50 ಲಕ್ಷ ಹಣ ಪತ್ತೆಯಾಗಿದೆ. ಕೆಎ 40 ಎ2046 ನಂಬರಿನ ಇಂಡಿಕಾ ಕಾರಿನಲ್ಲಿ ನಗದು ಪತ್ತೆಯಾಗಿದೆ. ಪತ್ತೆಯಾದ ನಗದು ಕರೂರ್ ವೈಶ್ಯ ಬ್ಯಾಂಕಿಗೆ ಸೇರಿದ್ದು, ಹೊಸಕೋಟೆ ಬ್ಯಾಂಕಿನಿಂದ ಚಿಂತಾಮಣಿ ಬ್ಯಾಂಕಿಗೆ ಸಾಗಿಸಲಾಗುತ್ತಿದೆ ಎಂದು ಕಾರಿನಲ್ಲಿದ್ದ ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
Advertisement
Advertisement
ಬ್ಯಾಂಕ್ ನ ಹಣ ಎಂಬುದಕ್ಕೆ ಸೂಕ್ತ ದಾಖಲೆಗಳನ್ನ ನೀಡದ ಹಿನ್ನೆಲೆಯಲ್ಲಿ 50 ಲಕ್ಷವನ್ನ ಜಪ್ತಿ ಮಾಡಿಕೊಂಡಿರುವ ಚುನಾವಣಾಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ. ಜಪ್ತಿ ಮಾಡಿದ ಹಣವನ್ನ ಖಜಾನೆಯಲ್ಲಿ ಇರಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆದು ಐಟಿ ಇಲಾಖೆ ಅಧಿಕಾರಿಗಳು ಕೂಡ ಆಗಮಿಸಿ, ಹಣದ ಮೂಲ ಹಾಗೂ ದಾಖಲಾತಿಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
Advertisement
ಬಳ್ಳಾರಿ – ಜಿಲ್ಲೆಯ ಹಡಗಲಿ ತಾಲೂಕಿನ ಕುಮಾರಹಳ್ಳಿ ತಾಂಡಾ ಚಡಕ್ ಪೋಸ್ಟ್ ಬಳಿ ಸಾರಿಗೆ ಬಸ್ಸಿನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 9.96 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ. ಹಣವನ್ನು ಬಟ್ಟೆ ಅಂಗಡಿಯ ಬನಿಯನ್ ಹಾಗೂ ಅಂಡರ್ ಬಾಕ್ಸ್ ನಲ್ಲಿ ಹಣವಿಟ್ಟು ಸಾಗಾಟ ಮಾಡುತ್ತಿದ್ದರು. ಈ ಹಣ ಎನ್ಸರ್ಜಿ ಸೋಲಾರ್ ಕಂಪೆನಿಗೆ ಸೇರಿದ್ದು ಎನ್ನಲಾಗಿದ್ದು, ಸೂಕ್ತ ದಾಖಲೆ ಇಲ್ಲದ ಕಾರಣ ಅಧಿಕಾರಿಗಳು ಹಣವನ್ನು ಜಪ್ತಿ ಮಾಡಿದ್ದಾರೆ.
Advertisement
ಚಿತ್ರದುರ್ಗ- ಜಿಲ್ಲೆಯ ಚಳ್ಳಕೆರೆ ಪಟ್ಟಣದ ಚೆಕ್ ಪೋಸ್ಟ್ ನಲ್ಲಿ ಕಾರ್ಯಾಚರಣೆ ನಡೆಸಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2 ಲಕ್ಷ ರೂ. ಜಪ್ತಿ ಮಾಡಿದ್ದಾರೆ. ತಮಿಳುನಾಡಿನಿಂದ ಬಳ್ಳಾರಿಗೆ ತೆರಳುತ್ತಿದ್ದ ಕಾರಿನಲ್ಲಿ ಹಣ ಪತ್ತೆಯಾಗಿದ್ದು, ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇಂತಹ ಪ್ರಕರಣಗಳ ಇತ್ಯರ್ಥಕ್ಕಾಗಿಯೇ ಚುನಾವಣಾ ಆಯೋಗದ ಸಮಿತಿಯೊಂದು ರಚನೆಯಾಗಿದ್ದು, ಐಟಿ ಅಧಿಕಾರಿಗಳ ಮಾಹಿತಿ ಪಡೆದು, ಸಮಿತಿಯಲ್ಲಿ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಿ ಚುನಾವಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.