ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿವೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಮಾತ್ರ ಇನ್ನು ಪಟ್ಟಿ ಸಿದ್ಧಪಡಿಸುವ ಕಾರ್ಯದಲ್ಲಿದೆ. ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿ ಸ್ಕ್ರೀನಿಂಗ್ ಕಮಿಟಿ ಸಭೆ ನಡೆದಿದ್ದು ನಾಳೆ ಬಿಡುಗಡೆಯಾಗುವ ಸಾಧ್ಯತೆಯಿದೆ.
Advertisement
ಇಂದು ಸಿಎಂ ಸಿದ್ದರಾಮಯ್ಯ ಅವರ ನಿವಾಸ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಶುಕ್ರವಾರ ಸಂಜೆ ವೇಳೆಗೆ ಪಕ್ಷದ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಭ್ಯರ್ಥಿಗಳನ್ನು ಅಳೆದು ತೂಗಿ ಅಂತಿಮಗೊಳಿಸುತ್ತಿರುವ ಕಾರಣ ಪಟ್ಟಿ ಬಿಡುಗಡೆಗೆ ತಡವಾಗುತ್ತಿದೆ. ಆದರೆ ಮೊದಲ ಪಟ್ಟಿಯಲ್ಲಿ ಎಷ್ಟು ಜನರ ಹೆಸರು ಬಿಡುಗಡೆಯಾಗುತ್ತದೆ ಎಂಬುವುದರ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.
Advertisement
ಚುನಾವಣೆಯಲ್ಲಿ ಗೆಲುವಿನ ಲೆಕ್ಕಚಾರದಲ್ಲಿ ತೊಡಗಿರುವ ಮೂರು ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿವೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದಂತೆ ಎರಡು ಪಕ್ಷಗಳಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನವನ್ನು ನಿವಾರಿಸುವ ಕಾರ್ಯದಲ್ಲಿ ತೊಡಗಿದ್ದು, ಎರಡನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ.